ಸೇನಾ ಉದ್ಯೋಗಕ್ಕೆ ನಕಲಿ ದಾಖಲೆ ಸಲ್ಲಿಕೆ; ಇಬ್ಬರು ಪೊಲೀಸ್ ಪೇದೆ ಸೇರಿ ಹತ್ತು ಮಂದಿಯ ಬಂಧನ..

Handcuffed
Person in handcuffs
Published on

ವಿಜಯನಗರ: ಸೇನೆಯಲ್ಲಿನ ಉದ್ಯೋಗಕ್ಕಾಗಿ ದಾಖಲಾತಿಗಳನ್ನು ತಿದ್ದುಪಡಿ ಮಾಡಿ, ನಕಲಿ ದಾಖಲೆ ಸಲ್ಲಿಸಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಪೇದೆ ಮಾತ್ರವಲ್ಲದೆ ಒಟ್ಟು ಹತ್ತು ಮಂದಿಯನ್ನು ಬಂಧಿಸಲಾಗಿದೆ. ವಿಜಯನಗರ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಆರೋಪಿಗಳ ಬಂಧನವಾಗಿದೆ.

ಪೊಲೀಸ್ ಸಿಬ್ಬಂದಿಗಳಾದ ಬಳ್ಳಾರಿ ಮೂಲದ ಅಂಕಲೇಶ್, ರಾಮಾಂಜನಿ ಜತೆಗೆ ಇತರ ಆರೋಪಿಗಳಾದ ವೈಭವ್, ನೇತಾಜಿ ರಾಮ್ ಸಾವಂತ್, ಜಂಬಣ್ಣ, ಅಜಿತ್ ಕೊಂಡೆ, ವೆಂಕಟೇಶ್, ಪರಶುರಾಮ್, ಮನೋಜ್ ಎಂಬವರನ್ನು ಬಂಧಿಸಲಾಗಿದೆ.

ಸೇನೆಯಲ್ಲಿನ ಉದ್ಯೋಗಕ್ಕಾಗಿ ಇವರು ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿ ಹಲವು ನಕಲಿ ದಾಖಲೆಗಳ ಸೃಷ್ಟಿಸಿದ್ದಲ್ಲದೆ, ಈ ಸಂಬಂಧ ಐದಾರು ಲಕ್ಷ ರೂಪಾಯಿ ವ್ಯವಹಾರ ನಡೆದಿರುವ ಕುರಿತು ಕೂಡ ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರ ಸೇರಿ ಬೇರೆ ಊರಿನವರನ್ನು ಸ್ಥಳೀಯರು ಎನ್ನುವಂತೆ ದಾಖಲೆಗಳನ್ನು ಫೋರ್ಜರಿ ಮಾಡಲಾಗಿದೆ. ದಾಖಲಾತಿ ಪರಿಶೀಲಿಸುವಂತೆ ಸೇನೆಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಸೇನೆಯಲ್ಲಿ ಇನ್ನೂ ಹಲವರು ಇದೇ ರೀತಿ ಕೆಲಸಕ್ಕೆ ಸೇರಿರುವ ಅನುಮಾನವಿದೆ ಎಂಬುದಾಗಿ ವಿಜಯನಗರ ಎಸ್​ಪಿ ಡಾ.ಕೆ. ಅರುಣ್ ತಿಳಿಸಿದ್ದಾರೆ. ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net