ಖಾಸಗಿ ಹೋಟೆಲ್​ನ ಪಾರ್ಕಿಂಗ್​ನಲ್ಲಿ 2 ಜೀವಂತ ಗುಂಡು; ಮಹಿಳೆಯೊಬ್ಬರು ಇವುಗಳನ್ನು ಹೂತಿಟ್ಟಿದ್ದಕ್ಕೆ ಕಾರಣ ಒಬ್ಬ ಗಂಡು!

Police
ಹೋಟೆಲ್ ಆವರಣದಲ್ಲಿ ಪೊಲೀಸರಿಂದ ವಿಚಾರಣೆ
Published on

ಬೆಂಗಳೂರು: ರಾಜಧಾನಿಯ ಖಾಸಗಿ ಹೋಟೆಲ್​ನ ಕಾರು ಪಾರ್ಕಿಂಗ್​ ಲಾಟ್​ನಲ್ಲಿ ಎರಡು ಜೀವಂತ ಗುಂಡುಗಳು ಪತ್ತೆಯಾಗಿದ್ದು, ಒಂದಷ್ಟು ಸಮಯ ಆತಂಕದ ವಾತಾವರಣ ಉಂಟಾಗಿತ್ತು. ವಿಚಿತ್ರವೆಂದರೆ ಈ ಗುಂಡುಗಳು ಇಲ್ಲಿ ಕಂಡು ಬರಲು ಕಾರಣ ಒಬ್ಬ ಗಂಡು ಹಾಗೂ ಮತ್ತೊಬ್ಬಳು ಹೆಂಗಸು!

ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಹೋಟೆಲ್​ನ ಪಾರ್ಕಿಂಗ್​ ಲಾಟ್​ನಲ್ಲಿ ಈ ಗುಂಡುಗಳು ಪತ್ತೆಯಾಗಿವೆ. ಹೋಟೆಲ್ ಸಿಬ್ಬಂದಿ ಕ್ಲೀನ್ ಮಾಡುವಾಗ ಈ ಎರಡು ಮದ್ದುಗುಂಡುಗಳು ಪತ್ತೆಯಾಗಿದ್ದು, ಹೋಟೆಲ್​ ಮ್ಯಾನೇಜ್​​ಮೆಂಟ್​ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಯಲಹಂಕ ಪೊಲೀಸರ ಜತೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ಮಾಡಿದಾಗ ಒಬ್ಬಳು ಮಹಿಳೆ ಆ ಗುಂಡುಗಳನ್ನು ಹೂತಿಟ್ಟಿರುವುದು ಪತ್ತೆಯಾಗಿತ್ತು. ತನಿಖೆ ನಡೆಸಿದಾಗ ಆಕೆ ವಾಯುಸೇನೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್​ಒಬ್ಬರ ಪತ್ನಿ ಎಂಬುದು ಗೊತ್ತಾಗಿದೆ. ಮನೆಯಲ್ಲಿ ಜೀವಂತ ಗುಂಡುಗಳು ಇರುವುದರಿಂದಲೇ ಮಗನ ಜೀವನದಲ್ಲಿ ಸಮಸ್ಯೆಯಾಗಿದೆ ಎಂದು ತಿಳಿದಿದ್ದ ಆಕೆ, ಅವುಗಳನ್ನು ಪತಿಗೆ ತಿಳಿಯದಂತೆ ತಂದು ಹೋಟೆಲ್​ನ ಪಾರ್ಕಿಂಗ್ ಲಾಟ್​ನಲ್ಲಿ ಹೂತಿಟ್ಟು ಹೋಗಿದ್ದಾಗಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂದಹಾಗೆ ಡಿ. 17ರಂದು ಈ ಘಟನೆ ನಡೆದಿತ್ತು. ಪೊಲೀಸರಿಂದ ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net