ನಿನ್ ಹೆಂಡ್ತಿಗೆ ಸೀರೆ ತರಲು ಹೋಗಿದ್ಯಾ? ರಾಸ್ಕಲ್​...: ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ

Madhuswamy
Published on

ತುಮಕೂರು: 'ಜಾಡಿಸಿ ಒದ್ದರೆ ಎಲ್ಲಿಗೋಗಿ ಬಿದ್ದಿರ್ತೀಯಾ ಗೊತ್ತಾ? ಕತ್ತೆ ಕಾಯೋಕ್ ಬಂದಿದ್ದೀಯಾ ಇಲ್ಲಿಗೆ... ಸರ್ಕಾರದ ಕೆಲಸ ಮಾಡೋದು ಬಿಟ್ಟು ನಿನ್ನ ಹೆಂಡತಿಗೆ ಸೀರೆ ತರಲು ಹೋಗಿದ್ದಾ? ರಾಸ್ಕಲ್...'

ಇದು ಅನುದಾನ ಖರ್ಚು ಮಾಡಲು ಉದಾಸೀನತೆ ಮಾಡಿರುವ ಜಿಪಂ ಇಂಜಿನಿಯರ್​ಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹರಿಹಾಯ್ದ ಪರಿ. ನಾಲಗೆ ಹರಿಬಿಡುವ ಮೂಲಕ ಸಚಿವರು ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ‌ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಸಿಟ್ಟಾದ ಸಚಿವರು, ತಾಳ್ಮೆ ಕಳೆದುಕೊಂಡು "ಜಾಡಿಸಿ ಒದ್ದರೆ ಎಲ್ಲಿಗೋಗಿ ಬೀಳ್ತಿಯಾ ಗೊತ್ತಾ? ಈ ಜಿಲ್ಲೆ ಬಿಟ್ಟು ತೊಲಗಿ' ಎಂದರು.

'ಜಿಪಂ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸಗಳು ನಡೆದೇ ಇಲ್ಲ. ಕಳೆದ 4ರಂದು ನಾನೇ ಸೂಚನೆ ನೀಡಿದ್ದೆ. ಆದ್ರೂ ಯಾಕೆ ನೀವು ಕಂಟ್ರ್ಯಾಕ್ಟರ್​ನನ್ನು ಕರೆಸಿ ಕೆಲಸ ಒಪ್ಪಿಸಲಿಲ್ಲ. ಜಾಡ್ಸಿ ಒದ್ದರೆ ಎಲ್ಲಿಗೋಗ್ತೀಯಾ ಗೊತ್ತಾ? ನೀನು... ರಾಸ್ಕಲ್​... ಕತ್ತೆ ಕಾಯೋಕ್ ಬಂದಿದ್ದೀಯಾ ಇಲ್ಲಿಗೆ, ಸರ್ಕಾರದ ಕೆಲಸ ಮಾಡೋದು ಬಿಟ್ಟು ನಿನ್ನ ಹೆಂಡತಿಗೆ ಸೀರೆ ತರಲು ಹೋಗಿದ್ದಾ? ರಾಸ್ಕಲ್...' ಎನ್ನುತ್ತಾ ನಾಲಿಗೆ ಹರಿಯಬಿಟ್ಟರು.

ಒಂದು ಹಂತದಲ್ಲಿ ಅಧಿಕಾರಿಗಳ ಉತ್ತರಕ್ಕೆ ಆಕ್ರೋಶಗೊಂಡು ತಾಳ್ಮೆ ಕಳೆದುಕೊಂಡ ಸಚಿವರು, 'ಈ ನನ್ಮಕ್ಕಳು ಎಲ್ಲರನ್ನೂ ಸಸ್ಪೆಂಡ್ ಮಾಡ್ರೀ...' ಎನ್ನುತ್ತ ಸಭೆಯಲ್ಲೇ ಜಿಪಂ ಸಿಇಒಗೆ ಸಚಿವ ಮಾಧುಸ್ವಾಮಿ ಸೂಚನೆ ನೀಡಿದರು. ಎಲ್ಲರೂ ಮೂಕಪ್ರೇಕ್ಷಕರಂತೆ ನೋಡುತ್ತ ಕುಳಿತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net