ಮಧುಗಿರಿ ತಾಪಂ ಸಭಾಂಗಣದಲ್ಲಿ ನರೇಗಾ ಯೋಜನೆಯ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿ ಕುರಿತಂತೆ ಹಮ್ಮಿಕೊಂಡಿದ್ದ ಅಧಿಕಾರಿಗಳು ಮತ್ತು ಪಿಡಿಒಗಳ ಸಭೆಯಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಾಪಂ ಇಒ ಬಿ.ಕೆ ಉತ್ತಮ್, ಸಹಾಯಕ ನಿರ್ದೇಶಕ ಧನಂಜಯ, ಡಿವೈಎಸ್ಪಿ ಮಂಜುನಾಥ್ ಇತರರು ಇದ್ದರು.
Published on:
Copied
Follow Us
ಮಧುಗಿರಿ:
ಸ್ವಾತಂತ್ರ$್ಯ ಬಂದು 79 ವರ್ಷಗಳಾದರೂ ಸರ್ಕಾರಿ ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಸಮರ್ಪಕ ಶೌಚಗೃಹ ವ್ಯವಸ್ಥೆ ಕಲ್ಪಿಸದಿದ್ದರೆ ಯಾವ ಸರ್ಕಾರ, ಶಾಸಕರನ್ನು ಕಟ್ಟಿಕೊಂಡು ಏನಾಗಬೇಕು ಎಂದ ಶಾಸಕ ಕೆ.ಎನ್.ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ತಾಪಂ ಸಭಾಂಗಣದಲ್ಲಿ ಶುಕ್ರವಾರ ನರೇಗಾ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿ ಕುರಿತಂತೆ ಹಮ್ಮಿಕೊಂಡಿದ್ದ ಅಧಿಕಾರಿಗಳು ಮತ್ತು ಪಿಡಿಒಗಳ ಸಭೆಯಲ್ಲಿ ಮಾತನಾಡಿ, ನಾಗರಿಕ ಜೀವನದಲ್ಲಿ ಸರಿಯಾಗಿ ಸವಲತ್ತು ಒದಗಿಸದಿದ್ದರೆ ಹೇಗೆ?. ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಶೌಚಗೃಹ ಕಲ್ಪಿಸದಿದ್ದರೆ ಅವರು ಎಲ್ಲಿಗೆ ಹೋಗುತ್ತಾರೆ?. ಕ್ಲಸ್ಟರ್ನಲ್ಲಿ ಸಿಆರ್ಪಿಗಳ ಕೆಲಸ ಏನು? ಶಾಲೆಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳದಿದ್ದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸ್ಡಿಎಂಸಿಯವರು ಸಮರ್ಪಕವಾಗಿ ರಿಪೇರಿ ಮಾಡಿಸಿಕೊಳ್ಳಲು ಆಗುವುದಿಲ್ಲವೆ?, ಹಾಗಾದರೆ ಸರ್ಕಾರದ ಅನುದಾನ ಏನು ಮಾಡುತ್ತಿದ್ದಾರೆ?. ಸರ್ಕಾರದ ಅನುದಾನ ಎಲ್ಲಿ ಉಪಯೋಗಿಸಿದ್ದೀರಾ ಹೇಳಿ, ನಾನು ಅಲ್ಲಿಗೇ ಬಂದು ಪರಿಶೀಲಿಸುತ್ತೇನೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾದರೆ ನಾನು ಸಹಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿಆರ್ಪಿಗಳೇ ಹೊಣೆ
ಮುಂದಿನ ದಿನಗಳಲ್ಲಿ ನಾನು ಯಾವುದೇ ಹಳ್ಳಿಗಳಿಗೆ ಹೋದರೂ ಆಯಾ ಗ್ರಾಮದ ಶಾಲೆಗಳಿಗೆ ಭೇಟಿ ನೀಡುವೆ. ಶಾಲೆಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ತಕ್ಷಣ ಬಗೆ ಹರಿಸಿಕೊಳ್ಳಿ. ಸಮಸ್ಯೆಗಳು ಕಂಡು ಬಂದರೆ ಪಿಡಿಒ, ಶಾಲೆಯ ಮುಖ್ಯಶಿಕ್ಷಕ ಮತ್ತು ಸಿಆರ್ಪಿಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಶಾಲೆಗಳು, ಅಂಗನವಾಡಿಗಳ ಕಾಮಗಾರಿಗಳನ್ನು ನರೇಗಾದಲ್ಲಿ ಪೂರ್ಣ ಬಳಸಿಕೊಳ್ಳಿ. ಆಟದ ಮೈದಾನ ಸಮತಟ್ಟು, ಶಾಲಾ ಕಾಂಪೌಂಡ್, ಶೌಚಗೃಹ, ಶಾಲಾ ಕೊಠಡಿ ರಿಪೇರಿ ಸೇರಿದಂತೆ ಎಲ್ಲ ಕಾಮಗಾರಿಗಳನ್ನು ನರೇಗಾ ಯೋಜನೆಯಲ್ಲಿ ಸೇರಿಸಿ ಆಕ್ಷನ್ ಪ್ಲಾನ್ ಪಡೆದುಕೊಳ್ಳಿ ಎಂದು ಪಿಡಿಒ ಮತ್ತು ಬಿಇಒ ಹನುಮಂತರಾಯಪ್ಪ ಅವರಿಗೆ
ಸೂಚನೆ ನೀಡಿದರು.
ನರೇಗಾ ಯೋಜನೆಯಡಿ ತಾಲೂಕಿನಲ್ಲಿ ಗ್ರಾಪಂವಾರು 3856 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಕೃಷಿ ಇಲಾಖೆಯಿಂದ 20 ರೈತರನ್ನು ಕೋಳಿ ಸಾಕಣೆಗೆ ಆಯ್ಕೆ ಮಾಡಲಾಗಿದೆ ಎಂದು ಇಒ ಉತ್ತಮ್ ಮಾಹಿತಿ ನೀಡಿದರು.ಬಡವನಹಳ್ಳಿ ದೊಡ್ಡ ಗ್ರಾಪಂ ಬರೀ 50 ಕಾಮಗಾರಿ ಆಯ್ಕೆ ಮಾಡಿದ್ದೀರಾ ಏಕೆ..?. ಬ್ರಹ್ಮಸಮುದ್ರ ಗ್ರಾಪಂ ವ್ಯಾಪ್ತಿಯಲ್ಲಿ 256 ಕಾಮಗಾರಿ ಆಯ್ಕೆ ಮಾಡಿಕೊಂಡಿದ್ದು,ನೀವು ಗ್ರಾಮದಲ್ಲಿ ಗ್ರಾಮಸ್ಥರನ್ನು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚು ಕಾಮಗಾರಿ ಆಯ್ಕೆ ಮಾಡಿಕೊಳ್ಳಬೇಕು ಎಂದರು.
ದೊಡ್ಡಮಾಲೂರು ಗ್ರಾಪಂನಲ್ಲಿ ಕೇವಲ 44 ಕಾಮಗಾರಿ ಆಯ್ಕೆ ಮಾಡಿಕೊಂಡಿದ್ದೀರಾ...ಸೋಮವಾರದ ಒಳಗೆ ಆಕ್ಷನ್ ಪ್ಲಾನ್ ತೆಗೆದುಕೊಳ್ಳಬೇಕು. ಸ್ಥಳಿಯ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡಿ ಆದಷ್ಟುಮಾನವ ದಿನಗಳು ಹೆಚ್ಚಿರುವ ಕಾಮಗಾರಿ ಆಯ್ಕೆ ಮಾಡಿಕೊಳ್ಳಿ. ನರೇಗಾದಲ್ಲಿ ಹಣ ರೆಡಿ ಇದೆ. ಈ ಕಾಮಗಾರಿಗಳಿಗೆ ಮೊದಲು ಆದ್ಯತೆ ನೀಡಿ ಎಂದು ಪಿಡಿಒಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆದಿನಾರಾಯಣ ರೆಡ್ಡಿ, ಗೋಪಾಲಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ ಇತರರಿದ್ದರು.
ಕೆಲಸ ಮಾಡಿದಿದ್ದರೆ ವರ್ಗಾವಣೆ
ತಾಲೂಕಿನಲ್ಲಿ ಕೆಲ ಆಡಳಿತಾಧಿಕಾರಿಗಳು ಸರಿಯಾಗಿ ಗ್ರಾಪಂಗಳಿಗೆ ಹೋಗುತ್ತಿಲ್ಲ ಎಂಬ ದೂರುಗಳಿವೆ. ಸರಿಯಾಗಿ ಕೆಲಸ ಮಾಡುವ ಆಸಕ್ತಿ ಇದ್ದರೆ ಮಾಡಿ, ಇಲ್ಲವೇ ವರ್ಗಾವಣೆ ಮಾಡಿಸಿಕೊಂಡು ಹೋಗಿ. ಸಿಕ್ಕಿರುವ ಅಧಿಕಾರವನ್ನು ಜನರಿಗೆ ಅನುಕೂಲ ಮಾಡಿಕೊಳ್ಳಲು ಬಳಸಿಕೊಳ್ಳದಿದ್ದರೆ ಹೇಗೆ ಎಂದು ರಾಜಣ್ಣ ತರಾಟೆಗೆ ತೆಗೆದುಕೊಂಡರು.
ಪಿಡಿಒಗಳು ಎರಡೆರಡು ಬಾರಿ ಮೆಟೀರಿಯಲ್ ಬಿಲ್ ಆಪ್ಲೋಡ್ ಮಾಡತ್ತೀರ ಎಂಬ ದೂರುಗಳಿವೆ. ಡೇಟಾ ಎಂಟ್ರಿ ಆಪರೇಟರ್ಗಳ ಬಗ್ಗೆ ಎಚ್ಚರ ವಹಿಸಿ, ಅವರು ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡವರಾಗಿದ್ದು, ಕಾಯಂ ನೌಕರರಲ್ಲ. ಅವರು ಸರಿಯಾಗಿ ಕೆಲಸ ಮಾಡಿದರೆ ಇಟ್ಟುಕೊಳ್ಳಿ, ಕೆಲಸ ಮಾಡದಿದ್ದರೆ ತೆಗೆದುಹಾಕಿ ಎಂದು ಪಿಡಿಒಗಳಿಗೆ ಸೂಚನೆ ನೀಡಿದರು.