ಬೂದಿಬೆಟ್ಟದಲ್ಲಿ ನೀರಿನ ಹಾಹಾಕಾರ

Water rushes in the ash hill
Water rushes in the ash hill
Published on
ಪಾವಗಡ: ತಾಲೂಕಿನ ಬೂದಿಬೆಟ್ಟದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ ಪರದಾಡುವ ಸ್ಥಿತಿ ನಿಮಾರ್ಣವಾಗಿದ್ದು, ಸಾರ್ವಜನಿಕರ ಮನವಿ ಸ್ಪಂದಿಸದ ಪಿಡಿಒ ವರ್ಗಾವಣೆಗೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟಿಸಿದರು.
ಸ್ಥಳಿಯ ನಿವಾಸಿ ಪವನ್​ ಕುಮಾರ್​ ಮಾತನಾಡಿ, ಗ್ರಾಮದಲ್ಲಿ ಕಳೆದ 2-&3 ತಿಂಗಳಿನಿಂದ ನೀರು ಬರದ ಕಾರಣ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪಕ್ಕದ ಗ್ರಾಮದ ರೈತರ ಕೊಳವೆಬಾವಿಗಳಿಂದ ಕೊಡ ಹಿಡಿದು ನೀರು ತರವಂತಾಗಿದೆ. ಗ್ರಾಮದಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗೆ ಪರಿಹಾರ ನೀಡುವಂತೆ ನಿವಾಸಿಗಳು ಪಂಚಾಯತಿಗೆ, ಪಿಡಿಒ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಾತ್ಕಾಲಿಕವಾಗಿ ಟ್ಯಾಂಕರ್​ ಮೂಲಕ ನೀರಾದರೂ ಪೂರೈಸಲು ಮನವಿ ಕೇಳಿದರೆ ನೀವೇ ಯಾರಾದರೂ ಟ್ಯಾಂಕರ್​ಗೆ ಹೇಳಿ ಎಂದು ಉದ್ದಟತನ ಪ್ರದರ್ಶಿಸುತ್ತಾರೆ ಎಂದು ಪಿಡಿಒ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿರುವ ಬಹುತೇಕ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಗಿಡ-&ಗಂಟಿಗಳು ಬೆಳೆದು ನಿಂತಿದ್ದು, ತ್ಯಾಜ್ಯನಿರು ಅಲ್ಲಲ್ಲೆ ನಿಲ್ಲುತ್ತಿದೆ. ಇದರಿಂದ ಡೆಂ ಮತ್ತು ಮಲೇರಿಯಾದಂತಹ ಸಾಂಕ್ರಾಮಿಕ ರೋಗಗ ಹರಡುವ ಭೀತಿ ಎದುರಾಗಿದೆ. ಈಗಾಗಲೇ ಗ್ರಾಮದ ಬಹುತೇಕರಿಗೆ ಕೆಮ್ಮು, ನೆಗಡಿ, ವಿವಿಧ ರೀತಿಯ ಜ್ವರ ಬಂದು ರೋಗಗಳಿಂದ ಬಳಲುವಂತಾಗಿದೆ ಎಂದು ತಿಳಿಸಿದರು.
ಕೆಟ್ಟು ನಿಂತಿರುವ ನೀರಿನ ಘಟಕ: ಗ್ರಾಮದಲ್ಲಿ ಹಲವು ತಿಂಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುನಿಂತಿದ್ದು, ಗ್ರಾಪಂ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದುರಸ್ತಿ ಪಡಿಸಲು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದ ಸುತ್ತಲೂ ಗಿಡ&ಗಂಟಿ ಬೆಳೆದಿದೆ. ಇದರಿಂದ ದಿನ ನಿತ್ಯ ಕೂಲಿ ಕೆಲಸ ಮಾಡಿಕೊಂಡು ರಾತ್ರಿ ವೇಳೆ ಅಕ್ಕಪಕ್ಕದ ಗ್ರಾಮಗಳಿಗೆ ತೆರಳಿ ನೀರು ತರುವಂತಾಗಿದೆ ಎಂದು ಗ್ರಾಮದ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ಮೂಲೆ ಸೇರಿದ ಸ್ವಚ್ಛತಾ ವಾಹಿನಿ: ಘನ ಮತ್ತು ತ್ಯಾಜ್ಯ ವಿಲೇವಾರಿ ಮಾಡಲು ತ್ರಿಚಕ್ರ ವಾಹನವನ್ನು ಸ್ವಚ್ಛ ವಾಹಿನಿಗಾಗಿ ಖರೀದಿ ಮಾಡಿದ್ದು, ವಾಹನದ ಮೇಲೆ ನಾಮಫಲಕವಾಗಲಿ ಅಥವಾ ಯಾವುದೇ ಬರವಣಿಗೆ ಇಲ್ಲದೆ, ಗ್ರಾಮದ ಹೊರವಲಯದಲ್ಲಿ ಅನಾಥವಾಗಿ ನಿಂತಿದೆ. ಪ್ರಸ್ತುತ ಸ್ವಚ್ಛ ವಾಹಿನಿ ರಸ್ತೆಗಿಳಿಯದ ಪರಿಣಾಮ ಕಸ ರಸ್ತೆ ಮತ್ತು ಚರಂಡಿ ಸೇರುತ್ತಿದೆ. ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net