ತುಮಕೂರು: ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯುವ ಅಭ್ಯಾಸ ಬೆಳೆಸುವ ಉದ್ದೇಶದಿಂದ ಆಗಾಗ್ಗೆ ನೀರು ಕುಡಿಯುವಂತೆ ನೆನೆಪಿಸಲು "ವಾಟರ್ ಬೆಲ್' ಬಾರಿಸುವ ನಿಯಮ ಅನುಷ್ಟಾನಗೊಳಿಸಲಾಗುತ್ತಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯುವಂತೆ ನೆನಪಿಸಲು "ವಾಟರ್ಬೆಲ್' ನಿಯಮ ಅಳವಡಿಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ನಿರ್ದೇಶಕ ಸುತ್ತೋಲೆ ಹೊರಡಿಸಿದ್ದು ಎಲ್ಲಾ ಶಾಲೆಗಳಲ್ಲಿಯೂ ಬೆಲ್ ಬಾರಿಸಲಿದೆ.
ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯದ ಹಿತದೃಷ್ಠಿಯಿಂದ ನೀರು ಅತ್ಯಾವಶ್ಯಕ ಎನ್ನಿಸಿದ್ದು ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿಡುವ ಜತೆಗೆ ಆಹಾರ ಜೀರ್ಣವಾಗಲು ನೆರವಾಗಲಿದೆ. ಮಕ್ಕಳ ದೇಹದಲ್ಲಿ ನೀರಿನ ಕೊರತೆಯಿಂದ ಸಂಭವಿಸಬಹುದಾದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ವಾಟರ್ಬೆಲ್ ಪರಿಚಯಿಸಲಾಗುತ್ತಿದೆ.