ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹರಥೋತ್ಸವ ಸಂಪನ್ನ

ಇತಿಹಾಸ ಪ್ರಸಿದ್ಧ ದೇವರಾಯನದುರ್ಗ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ  ಭ್ರಹ್ಮರಥೋತ್ಸವ ವೈಭವಯುತವಾಗಿ ನಡೆಯಿತು.
ಇತಿಹಾಸ ಪ್ರಸಿದ್ಧ ದೇವರಾಯನದುರ್ಗ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಭ್ರಹ್ಮರಥೋತ್ಸವ ವೈಭವಯುತವಾಗಿ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಚಂದ್ರಗ್ರಹಣ ಹಿನ್ನೆಲೆ ಬೆಳಗ್ಗೆ 11ಕ್ಕೆ ಧಾರ್ಮಿಕ ಕಾರ್ಯ
  • ಸಹಸ್ರಾರು ಭಕ್ತರು ಭಾಗಿ
  • ಬಿಸಿಲು ಲೆಕ್ಕಿಸದೆ ಸ್ವಾಮಿಯ ಉತ್ಸವದಲ್ಲಿ ಮಿಂದೆದ್ದ ಭಕ್ತರು
ತುಮಕೂರು: ಇತಿಹಾಸ ಪ್ರಸಿದ್ಧ ದೇವರಾಯನದುರ್ಗ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.
ಜಾತ್ರೆಯ ವಿಶೇಷವಾಗಿದ್ದ ಬ್ರಹ್ಮರಥೋತ್ಸವಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು, ನೆರೆದಿದ್ದ ಭಕ್ತರು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಗೆ ಜೈಕಾರ ಕೂಗುವ ಮೂಲಕ ಬಿಸಿಲ ಝಳವನ್ನು ಲೆಕ್ಕಿಸದೆ ಭಕ್ತಿಯ ಪರಾಕಾಷ್ಟೆ ಮೆರೆದರು. ಸುಸಜ್ಜಿತಗೊಳಿಸಲಾಗಿದ್ದ ಭವ್ಯರಥದಲ್ಲಿ ಸ್ವಾಮಿಯನ್ನು ಕೂರಿಸಿ ಮೆರವಣಿಗೆ ಮಾಡಲಾಯಿತು.
ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ನಡೆದ ಜಾತ್ರೆಯಲ್ಲಿ ಜನರ ನೂಕುನುಗ್ಗಲು ತಪ್ಪಿಸಲು ಹಾಗೂ ದೇವರ ದರ್ಶನ ಪಡೆಯಲು ಕ್ಯೂರಾಡ್​ ನಿರ್ಮಾಣ ಮಾಡಲಾಗಿತ್ತು. ಚಂದ್ರಗ್ರಹಣ ಹಿನ್ನೆಲೆ ಬೆಳಗ್ಗೆ 11ಕ್ಕೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ 11ಕ್ಕೆ ತೇರು ಎಳೆಯಲಾಯಿತು. ಸರಿಯಾಗಿ ಗರುಡ ದರ್ಶನ ನೀಡಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭ್ರಹ್ಮರಥೋತ್ಸವದಲ್ಲಿ ಸಾವಿರಾರು ಭಕ್ತರು ಬರುವುದನ್ನು ಮೊದಲೇ ನಿರೀಕ್ಷಿಸಿದ್ದ ಜಿಲ್ಲಾಡಳಿತ ಜಾತ್ರೆಗೆ ಬಂದಿದ್ದ ಎಲ್ಲಾ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಮೂಲಭೂತ ವ್ಯವಸ್ಥೆ ಕಲ್ಪಿಸಿತ್ತು.
ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಬೆಂಗಳೂರು ಹಾಗೂ ತುಮಕೂರು ನಗರಗಳಿಂದ ವಿಶೇಷ ಸರ್ಕಾರಿ ಬಸ್​ ಸೇವೆಯನ್ನು ಒದಗಿಸಲಾಗಿತ್ತು. ಪಾರ್ಕಿಂಗ್​, ಕುಡಿಯುವ ನೀರು ಮುಂತಾದ ಸೌಕರ್ಯಗಳಿದ್ದವು. ಭಕ್ತರ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆಯ ಯಾತ್ರಿ ನಿವಾಸದ ಕೊಠಡಿಗಳನ್ನು ನೀಡಲಾಯಿತು.
ಜಾತ್ರೆಯ ಅಂಗವಾಗಿ ಪೊಲೀಸ್​, ಹೋಂಗಾರ್ಡ್​ ಹಾಗೂ ಖಾಸಗಿ ಸಕ್ಯೂರಿಟಿ ಗಾರ್ಡ್​ ಹಾಗೂ ಅಗ್ಮಿಶಾಮಕ ದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು, ಯಾವುದೇ ಅಹಿತಕರ ಟನೆಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಪ್ರತಿದಿನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಗೆ ವಿಶೇಷ ಪೂಜೆ, ದೈವಿಕ ಕೈಂಕರ್ಯಗಳು ನಡೆಯಲಿವೆ. ನರಸಿಂಹಸ್ವಾಮಿ ಭಕ್ತರು ದುರ್ಗದಲ್ಲಿ ಕೊಪ್ಪಲುಗಳನ್ನು ನಿರ್ಮಿಸಿ ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು.
ಶಾಸಕ ಬಿ.ಸುರೇಶಗೌಡ, ಮಾಜಿ ಸಚಿವ ಸೊಗಡುಶಿವಣ್ಣ, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್​, ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ, ತಹಸೀಲ್ದಾರ್​ ರಾಜೇಶ್ವರಿ ಮತ್ತಿತರರು ಜಾತ್ರೋತ್ಸವದಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net