ಸಿಎಂ, ಡಿಸಿಎಂ ಸಂಬಂಧದಲ್ಲಿ ನಾವೇಕೆ ಹುಳಿ ಹಿಂಡೋಣ

ಗ್ರಾಮಾಂತರ ಶಾಸಕ ಬಿ.ಸುರೇಶಗೌಡ
ಗ್ರಾಮಾಂತರ ಶಾಸಕ ಬಿ.ಸುರೇಶಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಸದನದಲ್ಲಿ ಆಡಳಿತ ಪಕ್ಷಕ್ಕೆ ಟಾಂಗ್
  • ಗ್ರಾಮಾಂತರ ಶಾಸಕ ಬಿ.ಸುರೇಶಗೌಡ
  • ಬಿಜೆಪಿಯವರಿಗೆ ಸಮಾಧಾನ ಆಗೋಲ್ಲ-ಡಿಕೆಶಿ
ತುಮಕೂರು: ಮಾಜಿ ಸಿಎಂ ದೇವರಾಜ ಅರಸು ಅವರ ಆಡಳಿತ ಅವಧಿಯ ದಾಖಲೆ ಹಾಗೂ 17ನೇ ಬಜೆಟ್​ ಮಂಡಿಸಿ ರಾಜ್ಯದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಸಿಎಂ ಸಿದ್ದರಾಮಯ್ಯರನ್ನು ಸರ್ಕಾರದ ವತಿಯಿಂದಲಾದರೂ ಅಥವಾ ಪಕ್ಷದ ವತಿಯಿಂದಲಾದರೂ ಅಭಿನಂದಿಸಬೇಕಿತ್ತು ಎಂದು ಬಿಜೆಪಿ ಶಾಸಕ ಬಿ.ಸುರೇಶಗೌಡ ಶುಕ್ರವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಕಾಲೆಳೆದರು.
ಸಿದ್ದರಾಮಯ್ಯನವರು ದಾಖಲೆ ಬಜೆಟ್​ ಮಂಡಿಸುವ ದಿನ (ಮಾ.6) ಎಲ್ಲಾ ಪತ್ರಿಕೆಗಳಲ್ಲಿ ಡಿ.ಕೆ. ಶಿವಕುಮಾರ್​ ಅವರನ್ನು ಅಭಿನಂದಿಸುವ ಪೂರ್ಣಪುಟ ಜಾಹಿರಾತು ಬಂದಿತ್ತು. ಮಾ.10ರಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡದ್ದು. ವಾಸ್ತವದಲ್ಲಿ 10ರಂದು ಪತ್ರಿಕೆಗಳಲ್ಲಿ ಜಾಹೀರಾತು ಬರಬೇಕಿತ್ತು. 6ರಂದೇ ಜಾಹೀರಾತು ಕೊಟ್ಟ ಉದ್ದೇಶವೇನು? ಈ ಸರ್ಕಾರದಲ್ಲಿ ಪಕ್ಷ ಒಂದು ದಿಕ್ಕಿನಲ್ಲಿ ನಡೆಯುತ್ತಿದ್ದರೆ, ಸರ್ಕಾರ ಇನ್ನೊಂದು ದಿಕ್ಕಿನಲ್ಲಿ ನಡೆಯುತ್ತಿದೆ ಎಂಬುದು ಅರ್ಥ ಆಗುವುದಿಲ್ಲವೇ? ಪಕ್ಷದ ವತಿಯಿಂದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಬಹುದಿತ್ತಲ್ಲ ಎಂದು ಟಾಂಗ್​ ಕೊಟ್ಟರು.
ಆ ಜಾಹೀರಾತು ನೋಡಿ ನನಗೇ ಆಶ್ಚರ್ಯವಾದರೆ ಸಿಎಂಗೆ ಎಷ್ಟು ಆಶ್ಚರ್ಯ ಅಥವಾ ಆಘಾತವಾಯಿತೋ ಯಾರಿಗೆ ಗೊತ್ತು? ಆದರೂ ಸಿದ್ದರಾಮಯ್ಯ ಅವರು ತಾವು ಮತ್ತು ಡಿ.ಕೆ. ಶಿವಕುಮಾರ್​ ಹಾಲುಜೇನು ಇದ್ದಂತೆ ಇದ್ದೇವೆ, ಬಿಜೆಪಿಯರು ಹುಳಿ ಹಿಂಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ನಮಗೆ ಮಾಡಲು ಕ್ಷೇತ್ರದಲ್ಲಿ ರಾಜ್ಯದಲ್ಲಿ ಬೇಕಾದಷ್ಟು ಕೆಲಸ ಇದೆ. ನಿಮ್ಮ ಸಂಬಧದಲ್ಲಿ ಹುಳಿ ಹಿಂಡುವ ಕೆಲಸ ನಾವೇಕೆ ಮಾಡೋಣ ಎಂದು ಕಿಚಾಯಿಸಿದರು.
ನಿಮ್ಮ ಸಂಬಂಧ ಎಷ್ಟು ಹದಗೆಟ್ಟು ಹೋಗಿದೆ ಎಂದರೆ ಅಕ್ಕಪಕ್ಕದಲ್ಲಿ 45 ನಿಮಿಷ ಕುಳಿತರೂ ಪರಸ್ಪರರನ್ನು ಕಂಡು ನಗುವುದು ಬಿಡಿ, ಮುಖಗಂಟು ಹಾಕಿಕೊಂಡು ಕುಳಿತಿರುತ್ತೀರಿ. ಒಬ್ಬ ಸಿಎಂ, ಇನ್ನೊಬ್ಬ ಡಿಸಿಎಂ. ಇಬ್ಬರೂ ಈ ಸರ್ಕಾರದ ಜೋಡು ಎತ್ತುಗಳು ಇದ್ದಂತೆ. ಹೀಗಾಗಿ ಆಡಳಿತಕ್ಕೆ ದಿಕ್ಕೂ ಇಲ್ಲ ದೆಸಯೂ ಇಲ್ಲ. ಇದನ್ನು ನಾನು ಹೇಳುತ್ತಿಲ್ಲ. ಇಡೀ ದಿನ ಟಿವಿಯಲ್ಲಿ ಚರ್ಚೆಯಾದ ವಿಷಯನ್ನು ನಿಮ್ಮ ಗಮನಕ್ಕೆ ತರುತ್ತಿರುವೆ ಅಷ್ಟೇ' ಎಂದು ಸುರೇಶ್​ಗೌಡ ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್​, ನನ್ನ ಬಗ್ಗೆ ಮಾತನಾಡದೇ ಇದ್ದರೆ ಬಿಜೆಪಿಯರಿಗೆ ಸಮಾಧಾನ ಆಗುವುದಿಲ್ಲ ಎಂದು ಚಟಾಕಿ ಹಾರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net