ತುಮಕೂರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅಧ್ಯಕ್ಷತೆಯಲ್ಲಿ ನಡೆಯಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಂಟ್ರೋಲ್ ರೂಮ್ ಸ್ಥಾಪನೆಗೆ ಡಿಸಿ ಸೂಚನೆ
ಕುಡಿಯುವ ನೀರಿನ ಹಾಹಾಕಾರ ಸೃಷ್ಟಿಯಾಗಬಾರದು
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ
ತುಮಕೂರು: ಜಿಲ್ಲೆಯಲ್ಲಿ ಬೇಸಿಗೆ ಆರಂಭಕ್ಕೆ ಮುನ್ನವೇ 27 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಸಮಸ್ಯಾತ್ಮಕ ಹಳ್ಳಿಗಳಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ತಾತ್ಕಾಲಿಕ ನೀರು ಪೂರೈಕೆಗೆ ಕ್ರಮ ಕೈಗೊಂಡಿರುವುದು ಬೆಳಕಿಗೆ ಬಂದಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್, ಕುಣಿಗಲ್ ತಾಲೂಕಿನಲ್ಲಿ 14 ಹಳ್ಳಿಗಳಲ್ಲಿ, ಶಿರಾ ತಾಲೂಕಿನ 8 ಹಾಗೂ ತುರುವೇಕೆರೆ ತಾಲೂಕಿನ 5 ಹಳ್ಳಿಗಳಲ್ಲಿ ಬೇಸಿಗೆ ಆರಂಭಕ್ಕೆ ಮುನ್ನವೇ ನೀರಿನ ಸಮಸ್ಯೆ ತಲೆದೋರಿದೆ. ಈ ಸಮಸ್ಯಾತ್ಮಕ ಗ್ರಾಮಗಳಲ್ಲಿ ತಾತ್ಕಾಲಿಕವಾಗಿ ಖಾಸಗಿ ಕೊಳವೆಬಾವಿಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳದಂತೆ ಅಗತ್ಯಕ್ರಮಗಳನ್ನು ಸಂಬಂಧಪಟ್ಟ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದರು.
ಕಂಟ್ರೋಲ್ ರೂಮ್ ಸ್ಥಾಪಿಸಿ: ಜಿಲ್ಲೆಯ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ತಾಲೂಕುವಾರು ಕಂಟ್ರೋಲ್ ರೂಮ್ಗಳನ್ನು ಸ್ಥಾಪಿಸಬೇಕು.
ಜನಸಾಮಾನ್ಯರ ದೂರುಗಳು ಮತ್ತು ತುರ್ತು ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸುವ ವ್ಯವಸ್ಥೆ ಅಗತ್ಯವಿದೆ ಎಂದು ಶುಭಕಲ್ಯಾಣ್ ಹೇಳಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಜತೆಗೆ ಕುಡಿಯಲು ಯೋಗ್ಯ ನೀರನ್ನು ಪೂರೈಸಬೇಕಾದ ಸವಾಲು ನಮ್ಮ ಮುಂದಿದೆ. ಈ ಹಿನ್ನೆಲೆ ಗ್ರಾಮ ಪಂಚಾಯತಿವಾರು ಕುಡಿಯುವ ನೀರಿನ ಮೈಕ್ರೋ ಬಯೋಲಾಜಿಕಲ್ ಪರೀಕ್ಷೆ ನಡೆಸಬೇಕು. ಇದಲ್ಲದೆ, ವಸತಿ ನಿಲಯಗಳಲ್ಲಿಯೂ ನೀರಿನ ಗುಣಮಟ್ಟ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು. ಇನ್ನೂ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿ ಕುಡಿಯುವ ನೀರು ಪೂರೈಕೆ ಅರ್ಧಂರ್ಬಧ ಕಾಮಗಾರಿಗಳು, ಕಾಮಗಾರಿಗಳಲ್ಲಿ ಗುಣಮಟ್ಟವಿಲ್ಲದಿರುವ ಕೇಳಿಬಂದಿದ್ದು ಜೆಜೆಎಂ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲು ತಾಕೀಕು ಮಾಡಿದರು.
ವಿಶೇಷವಾಗಿ ಮಧುಗಿರಿ, ಪಾವಗಡ ಹಾಗೂ ಶಿರಾ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರಿನ ಪರೀಕ್ಷೆ ನಡೆಸಬೇಕಿದೆ. ಕುಡಿಯುವ ನೀರಿನ ಗುಣಮಟ್ಟದಲ್ಲಿ ಏರುಪೇರಿನಿಂದ ಸಾರ್ವಜನಿಕರಿಗೆ ತೊಂದರೆ ಉಂಟಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದಲ್ಲದೆ, ಗ್ರಾಮ ಪಂಚಾಯತಿ ವಾರು ಸ್ವಚ್ಛತಾ ಕಾರ್ಯಗಳನ್ನು ಸಮರ್ಪಕವಾಗಿ ನಡೆಸಬೇಕು. ಈ ವಿಷಯದಲ್ಲಿ ಕೆಲ ಅಧಿಕಾರಿಗಳು ಉದಾಸೀನತೆ ತೋರಿರುವುದು ಗಮನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ರ್ನಿಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್ ತಿಪ್ಪೇಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತೆ ಬಿ.ಶುಭ, ಉಪವಿಭಾಗಾಧಿಕಾರಿಗಳು ನಾಹೀದಾ ಜಮ್ ಜಮ್, ಗೋಟೂರು ಶಿವಪ್ಪ, ಬಿ.ಕೆ.ಸಪ್ತಶ್ರೀ, ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
26 ವಾರಕ್ಕಾಗುವಷ್ಟು ಮೇವು ಲಭ್ಯ!!
ಜಿಲ್ಲೆಯಲ್ಲಿ ಸದ್ಯಕ್ಕೆ ಜಾನುವಾರುಗಳಿಗೆ ಯಾವುದೇ ಮೇವಿನ ಸಮಸ್ಯೆ ಎದುರಾಗಿಲ್ಲ. ಪಾವಗಡ ತಾಲೂಕಿನಲ್ಲಿ 26 ವಾರಗಳಿಗೆ ಆಗುವಷ್ಟು ಮೇವು ಲಭ್ಯತೆ ಇದೆ. 67,411 ಟನ್ ಮೇವು ಲಭ್ಯವಿದ್ದು ಬೇಸಿಗೆಯಲ್ಲಿ ಜಾನುವಾರುಗಳಿಗೆ ಯಾವುದೇ ಸಮಸ್ಯೆ ತಲೆದೋರುವುದಿಲ್ಲ. ತುರುವೇಕೆರೆ ತಾಲೂಕಿನಲ್ಲು 33 ವಾರಕ್ಕಾಗುವಷ್ಟು ಮೇವು ಲಭ್ಯವಿದೆ. 87659 ಟನ್ ಮೇವು ಸಂಗ್ರಹವಿದೆ. ತಿಪಟೂರಿನಲ್ಲಿ 39 ವಾರಕ್ಕಾಗುವಷ್ಟು ಮೇವು ಇದೆ. ಇನ್ನುಳಿದಂತೆ ಎಲ್ಲಾ ತಾಲೂಕುಗಳಲ್ಲು ಮೇವಿನ ಕೊರತೆ ಕಂಡುಬಂದಿಲ್ಲ. ಎಲ್ಲಿಯೂ ಮೇವು ಕೊರತೆ ಉಂಟಾಗದಂತೆ ತಾಲೂಕು ಆಡಳಿತ ಎಚ್ಚರಿಕೆವಹಿಸುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ತಾಕೀತು ಮಾಡಿದರು. ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮವಹಿಸಲು ಸೂಚನೆ ನೀಡದರು.
ಮನೆಬಾಗಿಲಿಗೆ ಆಹಾರಧಾನ್ಯ
70 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆಬಾಗಿಲಿಗೆ ಆಹಾರ ಧಾನ್ಯ ತಲುಪಿಸುವ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ. ನ್ಯಾಯಬೆಲೆ ಅಂಗಡಿಗಳ ಸಮಯ ಪಾಲನೆ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಸೂಚಿಸಿದರು.