ವಿವಿ ವಿದ್ಯಾರ್ಥಿಗಳಿಗೆ ಕೊನೆಗೂ ಸಿಕ್ಕಿತು ಚಿನ್ನ ಪದಕ

ತುಮಕೂರು ವಿವಿ Rank​ ವಿಜೇತ ವಿದ್ಯಾರ್ಥಿಗಳಿಗೆ ಪ್ರೊ.ಎಚ್​.ಎಸ್​.ಮೋಹನ್​ ಚಿನ್ನದ ಪದಕ ವಿತರಿಸಿದರು.
ತುಮಕೂರು ವಿವಿ Rank​ ವಿಜೇತ ವಿದ್ಯಾರ್ಥಿಗಳಿಗೆ ಪ್ರೊ.ಎಚ್​.ಎಸ್​.ಮೋಹನ್​ ಚಿನ್ನದ ಪದಕ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಘಟಿಕೋತ್ಸವ ಮುಗಿದು ವಾರದ ಬಳಿಕ ವಿತರಣೆ
  • ತಾಂತ್ರಿಕ ಕಾರಣಗಳಿಂದ ವಿಳಂಬ
  • ಕುಲಸಚಿವ ಪ್ರೊ.ಎಚ್​.ಎಸ್​.ಮೋಹನ್​ ಸ್ಪಷ್ಟನೆ
ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಮುಗಿದು ವಾರದ ಬಳಿಕ Rank​ ವಿಜೇತ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ಮಂಗಳವಾರ ನೀಡಲಾಯಿತು.
ಜೂನ್​ 3ರಂದು ನಡೆದಿದ್ದ 19ನೇ ಘಟಿಕೋತ್ಸವದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಚಿನ್ನ ಪದಕದ ಬದಲು ನಗದು ಬಹುಮಾನವನ್ನು ನೀಡಲಾಗಿತ್ತು. ಆದರೆ, ಪದಕ ವಿಜೇತ ವಿದ್ಯಾರ್ಥಿಗಳು ನಗದು ಬದಲಾಗಿ ಬಂಗಾರದ ಪದಕವನ್ನೇ ನೀಡುವಂತೆ ಆಗ್ರಹಿಸಿದ್ದರಿಂದ ವಾರದೊಳಗೆ ಬಂಗಾರದ ಪದಕ ನೀಡುವುದಾಗಿ ವಿಶ್ವವಿದ್ಯಾಲಯವು ಭರವಸೆ ನೀಡಿತ್ತು. ಮಂಗಳವಾರ ಕೊನೆಗೆ ಪದಕವನ್ನು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಎಚ್​. ಎಸ್​. ಮೋಹನ್​ ಪ್ರದಾನ ಮಾಡಿದರು.
ಘಟಿಕೋತ್ಸವದಂದೇ ಚಿನ್ನದ ಪದಕ ನೀಡಲು ವಿವಿ ಎಲ್ಲಾ ಸಿದ್ಧತೆಗಳನ್ನು ನಡೆಸಿತ್ತು. ಆದರೆ, ಚಿನ್ನದ ಪದಕ ವಿವಿಗೆ ತಲುಪುವುದು ಅನಿರೀಕ್ಷಿತವಾಗಿ ತಡವಾದ್ದರಿಂದ ಅನಿವಾರ್ಯವಾಗಿ ನಗದು ಬಹುಮಾನ ನೀಡಲು ತೀಮಾರ್ನಿಸಲಾಯಿತು. ಪದಕಗಳನ್ನು ಮಾರುಕಟ್ಟೆಯಲ್ಲಿ ನೇರವಾಗಿ ಖರೀದಿಸಲು ಬರುವುದಿಲ್ಲ ಮತ್ತು ಅದಕ್ಕೇ ಆದ ಸರ್ಕಾರಿ ನಿಯಮಾವಳಿಗಳಿರುತ್ತವೆ. ಟೆಂಡರ್​ ಪ್ರಕ್ರಿಯೆಯ ಮೂಲಕ ಮಧ್ಯಪ್ರದೇಶದ ಇಂದೋರ್​ ಮೂಲದ ಕಂಪನಿಗೆ ಚಿನ್ನದ ಪದಕ ಪೂರೈಸುವ ಜವಾಬ್ದಾರಿ ನೀಡಲಾಗಿತ್ತು ಎಂದರು.
ಚಿನ್ನಲೇಪಿತ ಬೆಳ್ಳಿಯ ಪದಕಗಳ ಪ್ಯಾಕಿಂಗ್​ ಕೆಲಸ ವಿಳಂಬವಾದ ಕಾರಣ ಹಾಗೂ ಕೆಲವು ಅನಿವಾರ್ಯ ಕಾರಣಗಳಿಂದಾಗಿ ಬರಬೇಕಿದ್ದ ವಿಮಾನ ಕೈತಪ್ಪಿ ಹೋಯಿತು. ಇದರಿಂದಾಗಿ ಪದಕಗಳನ್ನು ಸಕಾಲದಲ್ಲಿ ರವಾನಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಪದಕಗಳು ಬರುವುದು ತಡವಾದ ಹಿನ್ನೆಲೆಯಲ್ಲಿ ಸಿಂಡಿಕೇಟ್​ ಸಭೆಯ ತೀಮಾರ್ನದಂತೆ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲು ವಿವಿ ಮುಂದಾಗಿತ್ತು. ಆದರೆ ವಿದ್ಯಾರ್ಥಿಗಳು ಆ ನಗದು ಬಹುಮಾನವನ್ನು ತಿರಸ್ಕರಿಸಿದ್ದರಿಂದ, ಕೊನೆಗೆ ಪದಕಗಳನ್ನೇ ತರಿಸಿ ತಡವಾಗಿ ವಿತರಿಸಲಾಯಿತು ಎಂದು ಸ್ಪಷ್ಟಪಡಿಸಿದರು.
ಪರೀಕ್ಷಾಂಗ ಉಪ ಕುಲಸಚಿವ ಡಾ. ಎಂ. ಮುನಿರಾಜು, ಡಾ. ನರಹರಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net