ಶಂಭೋನಹಳ್ಳಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶಿಕ್ಷಕ ರೇವಣ್ಣ ಕೊಡುಗೆ

ಎಸ್.ರೇವಣ್ಣ
ಎಸ್.ರೇವಣ್ಣ
Published on

ಪ್ರಮುಖ ಮುಖ್ಯಾಂಶಗಳು

  • ಶೈಕ್ಷಣಿಕ ಸಾಧನೆ, ತಂತ್ರಜ್ಞಾನಾಧಾರಿತ ಕಲಿಕೆ
  • ಸಮುದಾಯದ ಸಹಭಾಗಿತ್ವಕ್ಕೆ ಆದ್ಯತೆ
  • ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ
ಕೊರಟಗೆರೆ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಶಂಭೋನಹಳ್ಳಿಯಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ .ಎಸ್.ರೇವಣ್ಣ ಶಾಲೆಯ ಶೈಕ್ಷಣಿಕ ಹಾಗೂ ಭೌತಿಕ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುವ ಮೂಲಕ ಮಾದರಿ ಕಾರ್ಯವೈಖರಿ ಮೆರೆದಿದ್ದು ಜಿಲ್ಲಾ ಮಟ್ಟದ ಅತ್ಯತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ..
24 ವರ್ಷಗಳ ಶಿಕ್ಷಕ ಸೇವಾ ಅನುಭವ ಹೊಂದಿರುವ ರೇವಣ್ಣ 2021ರಿಂದ ಕೊರಟಗೆರೆ ತಾಲೂಕು ಶಂಭೋನಹಳ್ಳಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಪರಿಣಾಮಕಾರಿ ಬೋಧನಾ ವಿಧಾನಗಳು, ಅನುಭವಾತ್ಮಕ ಕಲಿಕೆ, ಚಟುವಟಿಕೆ ಆಧಾರಿತ ಕಲಿಕೆ ಹಾಗೂ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ನವೋದಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡಿ ಉತ್ತಮ ಫಲಿತಾಂಶ ಪಡೆಯಲು ಪ್ರೇರೇಪಿಸಿದ್ದಾರೆ.
ಶಾಲೆಯ ಮೂಲಸೌಕರ್ಯ ಅಭಿವೃದ್ಧಿಯಲ್ಲಿಯೂ ರೇವಣ್ಣ ಪಾತ್ರ ಪ್ರಮುಖವಾಗಿದೆ. ಪೋಷಕರು, ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ವಿವಿಧ ದಾನಿಗಳ ಸಹಕಾರವನ್ನು ಪಡೆದು ಶಾಲೆಗೆ ಮೇಜು-ಕುರ್ಚಿಗಳು, ಪ್ರವೇಶ ದ್ವಾರ, ಸ್ಮಾರ್ಟ್ ಟಿವಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
2025–26ನೇ ಸಾಲಿನಲ್ಲಿ ಎಂ.ಪಿ.ಪಿ. ಕಂಪನಿ, ತುಮಕೂರು ಇವರ ಸಹಕಾರದಿಂದ ಸುಮಾರು ₹3 ಲಕ್ಷ ಮೌಲ್ಯದ ಕಂಪ್ಯೂಟರ್, ಪ್ರಿಂಟರ್, ಕಂಪ್ಯೂಟರ್ ಟೇಬಲ್-ಕುರ್ಚಿಗಳು, ಕ್ರೀಡೋಪಕರಣಗಳು, ವಾಟರ್ ಫಿಲ್ಟರ್, ನೋಟ್‌ಬುಕ್, ಬ್ಯಾಗ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಶಾಲೆಗೆ ಒದಗಿಸಲಾಗಿದೆ.
ಶಾಲೆಯ ಸಮಗ್ರ ಅಭಿವೃದ್ಧಿಗೆ ದೊರೆತ ಮತ್ತೊಂದು ಪ್ರಮುಖ ಮನ್ನಣೆ ಎಂದರೆ 2025–26ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಎಸ್.ಡಿ.ಎಂ.ಸಿ. ಶಾಲೆ ಎಂಬ ಗೌರವ. ಈ ಸಂದರ್ಭದಲ್ಲಿ ದೊರೆತ ₹50,000 ನಗದು ಬಹುಮಾನವನ್ನು ಬಳಸಿಕೊಂಡು ಹಳೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಗ್ರಾಮಸ್ಥರ ಸಹಕಾರದಿಂದ ಸುಮಾರು ₹1.40 ಲಕ್ಷ ಮೌಲ್ಯದ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳನ್ನು ಪ್ರತಿಭಾ ಕಾರಂಜಿ, ಕಲಿಕಾ ಹಬ್ಬ, ಕ್ರೀಡೆ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಮಕ್ಕಳು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. CWSN ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸುವುದು, ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಮಕ್ಕಳಿಗೆ ಅವಕಾಶ ನೀಡುವುದು ಹಾಗೂ ಮಕ್ಕಳ ಸುರಕ್ಷತೆ ಮತ್ತು ಕಲ್ಯಾಣಕ್ಕೆ ಆದ್ಯತೆ ನೀಡುವುದು ಅವರ ಕಾರ್ಯವೈಖರಿಯ ವಿಶೇಷತೆಯಾಗಿದೆ.
ಶಾಲಾ ದಾಖಲಾತಿ ಹೆಚ್ಚಿಸುವುದು ಹಾಗೂ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳುವುದಕ್ಕೂ ವಿಶೇಷ ಗಮನ ನೀಡಲಾಗಿದೆ. ಪ್ರತಿ ವರ್ಷ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಬ್ಯಾಗ್, ನೋಟ್‌ಬುಕ್, ಲೇಖನ ಸಾಮಗ್ರಿ ಹಾಗೂ ಸಮವಸ್ತ್ರ ವಿತರಿಸುವ ಮೂಲಕ ಪೋಷಕರಲ್ಲಿ ಸರ್ಕಾರಿ ಶಾಲೆಯ ಮೇಲಿನ ವಿಶ್ವಾಸ ಹೆಚ್ಚಿಸುವ ಪ್ರಯತ್ನ ನಡೆದಿದೆ.
“ಶಿಕ್ಷಣವೆಂದರೆ ಕೇವಲ ಪಾಠ ಬೋಧಿಸುವುದಲ್ಲ; ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ ಅವನ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ” ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ರೇವಣ್ಣ ಶಿಕ್ಷಕರು, ಶಂಭೋನಹಳ್ಳಿ ಸರ್ಕಾರಿ ಶಾಲೆಯನ್ನು ಶೈಕ್ಷಣಿಕವಾಗಿ ಹಾಗೂ ಭೌತಿಕವಾಗಿ ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಈ ಸೇವೆಯನ್ನು ಪರಿಗಣಿಸಿ 2026–27ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net