ವಿಮಾನ ನಿಲ್ದಾಣ ಸ್ಥಾಪನೆ ವದಂತಿಯಷ್ಟೇ!

ವಿಮಾನ ನಿಲ್ದಾಣ
ವಿಮಾನ ನಿಲ್ದಾಣ
Published on

ಪ್ರಮುಖ ಮುಖ್ಯಾಂಶಗಳು

  • ಅಂತಹ ಪ್ರಸ್ತಾಪವೇ ಇಲ್ಲವೆಂದ ಎಂ.ಬಿ.ಪಾಟೀಲ
  • ವಿಧಾನಸಭೆಯಲ್ಲಿ ಗಮನಸೆಳೆದ ಜ್ಯೋತಿಗಣೇಶ್​

ತುಮಕೂರು:

ಜಿಲ್ಲೆಯಲ್ಲಿ ರಾಜ್ಯದ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂಬುದು ಕೇವಲ ವದಂತಿ, ಈ ರೀತಿಯ ಯಾವುದೇ ಪ್ರಸ್ತಾವನೆಗಳಿಲ್ಲ ಎಂಬುದು ಅಧಿಕೃತವಾಗಿದೆ.

ಜಿಲ್ಲೆಯಲ್ಲಿ ಪ್ರತ್ಯೇಕ ವಿಮಾನ ನಿಲ್ದಾಣ ಸ್ಥಾಪಿಸುವ ಕುರಿತು ಶಾಸಕ ಬಿಜೆಪಿಯ ಜಿ.ಬಿ.ಜ್ಯೋತಿಗಣೇಶ್​ ಅವರ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದ್ದ ಬೃಹತ್​ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆಗಳಿಲ್ಲ. ಕೇಂದ್ರ ಸರ್ಕಾರದ ಹಸಿರು ವಲಯ ವಿಮಾನ ನಿಲ್ದಾಣ ನೀತಿ&2008ರನ್ವಯ, ರಾಜ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ನಾಗರಿಕ ವಿಮಾನ ನಿಲ್ದಾಣದಿಂದ 150 ಕಿ.ಮೀ. ವ್ಯಾಪ್ತಿಯ ಅಂತರದೊಳಗೆ ಹೊಸ ಗ್ರೀನ್​ಫೀಲ್ಡ್​ ವಿಮಾನ ನಿಲ್ದಾಣವನ್ನು ಸಾಮಾನ್ಯವಾಗಿ ಸ್ಥಾಪಿಸಲು ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
150 ಕಿ.ಮೀ.ಗಳ ವ್ಯಾಪ್ತಿಯ ಅಂತರದೊಳಗೆ ಹೊಸ ಗ್ರೀನ್​ಫೀಲ್ಡ್​ ವಿಮಾನ ನಿಲ್ದಾಣ ಸ್ಥಾಪಿಸಲು ಪ್ರಸ್ತಾಪಿಸಿದಲ್ಲಿ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣದ ಮೇಲೆ ಉಂಟಾಗಬಹುದಾದ ಪರಿಣಾಮ ಪರಿಶೀಲಿಸಲಾಗುತ್ತದೆ. ಇಂತಹ ಪ್ರಸ್ತಾವನೆಗಳನ್ನು ಪ್ರಕರಣವಾರು (ಕೇಸ್​ ಟೂ ಕೇಸ್​ ಬೇಸಿಸ್​) ಪರಿಶೀಲಿಸಿ, ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.
ಕೇಂದ್ರ ಸರ್ಕಾರದ "ಹಸಿರುಕ್ಷೇತ್ರ ವಿಮಾನ ನಿಲ್ದಾಣ' ಅಧಿನಿಯಮದಡಿ ತುಮಕೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ರಾಜ್ಯ ಸರ್ಕಾರ ಮನಸ್ಸು ಮಾಡಬೇಕಿದೆ. ಈಗಾಗಲೇ ಶಿರಾ, ಕೊರಟಗೆರೆ, ಮಧುಗಿರಿ ತಾಲೂಕುಗಳನ್ನು ಕೇಂದ್ರವಾಗಿಟ್ಟುಕೊಂಡು ಸಾವಿರಾರು ಎಕರೆ ಭೂಮಿಯನ್ನು ವಿಮಾನ ನಿಲ್ದಾಣಕ್ಕಾಗಿ ಗುರುತಿಸಿಟ್ಟುಕೊಳ್ಳಲಾಗಿದೆ ಎಂದರು.
ಈಗಾಗಲೇ ಬೆಂಗಳೂರು ದಣ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ, ಸಿಎಂ ಡಿ.ಕೆ.ಶಿವಕುಮಾರ್​ ಕೂಡ ವಿಶೇಷ ಆಸಕ್ತಿ ವಹಿಸಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಟಾನುಟಿ ಜನಪ್ರತಿನಿಧಿಗಳು ವಿಮಾನ ನಿಲ್ದಾಣದ ಬಗ್ಗೆ ಮಾತನಾಡುವುದನ್ನೇ ಬಿಟ್ಟಿರುವಾಗ ಬಿಜೆಪಿ ಶಾಸಕರು ವಿಧಾಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ.
ವಿಜಯಪುರ, ಹಾಸನ, ಶಿವಮೊಗ್ಗ, ಮೈಸೂರು, ಬೆಳಗಾವಿ, ಮಂಗಳೂರು, ಕಾರವಾರ, ರಾಯಚೂರು ಸೇರಿ ಹಲವು ಜಿಲ್ಲೆಗಳಲ್ಲಿ ಒಂದೊಂದು ವಿಮಾನ ನಿಲ್ದಾಣ ಸ್ಥಾಪಿಸಲಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಪ್ರತ್ಯೇಕ ವಿಮಾನ ನಿಲ್ದಾಣ ಸ್ಥಾಪನೆ ಮಾಡಿದರೆ ಅನುಕೂಲವಾಗಲಿದೆ. ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರಲ್ಲಿ ಸ್ಥಾಪಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
ಜಿ.ಬಿ.ಜ್ಯೋತಿಗಣೇಶ್​, ಶಾಸಕ
ಕೇಂದ್ರ ಸರ್ಕಾರದ ಹಸಿರು ವಲಯ ವಿಮಾನ ನಿಲ್ದಾಣ ನೀತಿಯಂತೆ ಈಗಾಗಲೇ ಅಸ್ತಿತ್ವದಲ್ಲಿರುವ ನಾಗರಿಕ ವಿಮಾನ ನಿಲ್ದಾಣದಿಂದ 150ಮೀ ವ್ಯಾಪ್ತಿಯ ಅಂತರದೊಳಗೆ ಹೊಸ ವಿಮಾನ ನಿಲ್ದಾಣ ಸ್ಥಾಪಿಸಲು ಅನುಮತಿ ಇಲ್ಲ. ತುಮಕೂರು ಜಿಲ್ಲೆಯಲ್ಲಿ ಪ್ರತ್ಯೇಕ ವಿಮಾನ ನಿಲ್ದಾಣ ಸ್ಥಾಪಿಸುವ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಬಂದಿಲ್ಲ.
\ಎಂ.ಬಿ.ಪಾಟೀಲ, ಬೃಹತ್​ ಕೈಗಾರಿಕಾ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net