ಅಧಿಕಾರದಲ್ಲಿ ಪಾಲಿಲ್ಲದ ನೋವು ಜಿಲ್ಲೆಯ ಕಾರ್ಯಕರ್ತರಲ್ಲಿದೆ

ಸಂಗೀತ ಬೇನಿವಾಲ್​
ಸಂಗೀತ ಬೇನಿವಾಲ್​
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಯಕರ್ತರ ನೋವಿಗೆ ಕಿವಿಯಾದ ಎಐಸಿಸಿ ವೀಕ್ಷಕಿ
  • ಹೈಕಮಾಂಡ್​ ಗಮನ ಸೆಳೆಯುವ ಭರವಸೆ
  • ಅಧಿಕಾರಕ್ಕಾಗಿ ಶ್ರಮಿಸಿದವರ ಅಳಲು ಕೇಳದ ನಾಯಕರು
ತುಮಕೂರು: ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಶ್ರಮಿಸಿದ್ದರೂ ಅಧಿಕಾರದಲ್ಲಿ ಪಾಲು ನೀಡಲಿಲ್ಲ ಎಂಬ ಬೇಸರ ಜಿಲ್ಲೆಯ ಕಾರ್ಯಕರ್ತರಲ್ಲಿದೆ ಎಂಬುದನ್ನು ಜಿಲ್ಲಾಧ್ಯಕ್ಷರ ನೇಮಕಕ್ಕೆ ಎಐಸಿಸಿ ನೇಮಿಸಿರುವ ವೀಕ್ಷಕಿ ಸಂಗೀತ ಬೇನಿವಾಲ್​ ಸುದ್ದಿಗೋಷ್ಠಿಯಲ್ಲಿ ಒಪ್ಪಿಕೊಂಡರು.
ನಗರದ ಕಾಂಗ್ರೆಸ್​ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಕಾರ್ಯಕರ್ತರಿಗೆ ಆಯಾ ಮಟ್ಟದಲ್ಲಿ ಅಧಿಕಾರ ನೀಡದಿರುವ ಬಗ್ಗೆ ತಾಲೂಕು ಪ್ರವಾಸದ ವೇಳೆಯಲ್ಲಿ ನಮ್ಮ ಗಮನಕ್ಕೆ ಕಾರ್ಯಕರ್ತರು ತಂದಿದ್ದು ಈ ಬಗ್ಗೆಯೂ ಹೈಕಮಾಂಡ್​ಗೆ ವರದಿ ನೀಡಲಾಗುವುದು ಎಂದರು.
ಪ್ರಸ್ತುತ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭವಾಗಿದ್ದು ಪೂರ್ಣಗೊಂಡ ಕೂಡಲೇ ನಿಗಮ, ಮಂಡಳಿ, ಪ್ರಾಧಿಕಾರ ಸೇರಿದಂತೆ ಸಾಧ್ಯವಿರುವ ಕಡೆಗಳಲ್ಲಿ ಕಾರ್ಯಕರ್ತರಿಗೂ ಅಧಿಕಾರ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಧ್ಯಕ್ಷರ ನೇಮಕಕ್ಕೆ ನಡೆಯುತ್ತಿರುವ "ಸಂಟನ್​ ಸೃಜನ್​ ಅಭಿಯಾನ'ದಲ್ಲಿ ಮುಖಂಡರು, ಜನಪ್ರತಿನಿಧಿಗಳಾಗಿದ್ದವರನ್ನು ಕಡೆಗಣಿಸಿ ಸಭೆ ನಡೆಸಲಾಗುತ್ತಿದೆ ಎಂಬ ಕಾಂಗ್ರೆಸ್​ ವಲಯದ ಅಸಮಧಾನದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಗೀತ, ಜಿಲ್ಲೆಯಲ್ಲಿ ಯಾರನ್ನೂ ರ್ನಿರ್ಲಸಿ ಸಭೆ ನಡೆಸಿಲ್ಲ, ಸಭೆ ನಡೆಸುವ ಬಗ್ಗೆ ಜಿಲ್ಲಾಧ್ಯಕ್ಷರಿಗೆ ಮಾಹಿತಿ ನೀಡಲಾಗಿತ್ತು ಹಾಗೂ ಅವರು ಎಲ್ಲರಿಗೂ ಮೊಬೈಲ್​ ಕರೆ ಮೂಲಕ ಸಭೆ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.
ಜಿಲ್ಲಾಧ್ಯಕ್ಷರು ಕೆಲವರಿಗೆ ಸಭೆಯ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ ಎಂಬುದಾದರೆ ಅಂತಹ ಮುಖಂಡರು ಈಗಲೂ ನಮ್ಮನ್ನು ಸಂಪರ್ಕಿಸಿ ಅವರ ಅಭಿಪ್ರಾಯಗಳನ್ನು ತಿಳಿಸಲು ಆ.14ರ ವರೆಗೂ ಕಾಲಾವಕಾಶವಿದೆ. ಕಳೆದ ಏಳು ದಿನ ತುಮಕೂರು ಜಿಲ್ಲೆಯಲ್ಲಿ ನೂತನ ಜಿಲ್ಲಾಧ್ಯಕ್ಷರು ಯಾರಾಗಬೇಕು ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದರು.
25ಕ್ಕೂ ಹೆಚ್ಚು ಜನರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ, ಎಐಸಿಸಿ ನಿಯಮಗಳ ಪ್ರಕಾರ ಪಕ್ಷದಲ್ಲಿ ಕನಿಷ್ಠ ಐದು ವರ್ಷಗಳ ಕಾಲ ಪಕ್ಷದಲ್ಲಿ ಕಾರ್ಯನಿರ್ವಹಿಸಬೇಕು.ಕಾಂಗ್ರೆಸ್​ ತತ್ವ ಸಿದ್ದಾಂತಗಳಿಗೆ ಬದ್ದವಾಗಿರುವ ವ್ಯಕ್ತಿಯಾಗಿರಬೇಕು, 55 ವರ್ಷಗಳ ಒಳಗಿರಬೇಕು. ಒಂದು ವೇಳೆ ವಯಸ್ಸು ಹೆಚ್ಚಾಗಿದ್ದರೂ ಪಕ್ಷದಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದರೆ ಅವಕಾಶ ಕಲ್ಪಿಸಬಹುದು ಎಂದರು.
ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ವೀಕ್ಷಕರಾದ ಮೀಲಿಂದ್​ ದೇವಸೇನ, ವಿಜಯಕುಮಾರ್​,ರೇಖಾ, ಮಾಜಿ ಶಾಸಕ ರಮೇಶ್​ಬಾಬು, ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅರ್​.ರಾಮಕೃಷ್ಣ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net