ಸರ್ಕಾರ ಸಾಧನಾ ಸಮೇವೇಶವೀಗ ಪಕ್ಷಾತೀತ!

ಸಿಎಂ ಕಾರ್ಯಕ್ರಮದ ಪೂರ್ವಭಾವಿ ಸಭೆ ತುಮಕೂರಿನಲ್ಲಿ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಿಎಂ ಕಾರ್ಯಕ್ರಮದ ಪೂರ್ವಭಾವಿ ಸಭೆ ತುಮಕೂರಿನಲ್ಲಿ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರಕ್ಕೆ ಮೂರನೇ ವರ್ಷದ ಸಂಭ್ರಮ
  • ಸಾಧನಾ ಸಮೇವೇಶಕ್ಕೆ ತುಮಕೂರು ಸಿದ್ಧತೆ
  • ಪೂರ್ವಭಾವಿ ಸಭೆಯಲ್ಲಿ ಬಿಜೆಪಿ, ಜೆಡಿಎಸ್​ ಶಾಸಕರು
ತುಮಕೂರು: ಕಾಂಗ್ರೆಸ್​ ಸರ್ಕಾರ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಮೇ.20ರಂದು ಆಯೋಜಿಸಿರುವ ಸಾಧನಾ ಸಮಾವೇಶ ಪಾತೀತವಾಗಿ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯ ಶಾಸಕರು, ಅಧಿಕಾರಿಗಳಿಗೆ ಕುರಿತು ಪರಮೇಶ್ವರ ಮಾತನಾಡಿ, ರಾಜ್ಯ ಸರ್ಕಾರಕ್ಕೆ 3 ವರ್ಷ ತುಂಬುತ್ತಿದೆ. ಅಲ್ಲದೆ, ತುಮಕೂರಿನಲ್ಲಿ ರಾಜ್ಯದ ಯಾವ ಜಿಲ್ಲೆಯಲ್ಲೂ ಆಗದಿರುವ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಬೃಹತ್​ ಸಮಾವೇಶವನ್ನು ತುಮಕೂರಿನಲ್ಲಿ ಆಯೋಜಿಸುತ್ತಿದೆ ಎಂದರು.
ನಗರದ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕಂದಾಯ ಇಲಾಖೆಯಿಂದ 1.85 ಲಕ್ಷ ಫಲಾನುಭವಿಗಳಿಗೆ ಕಂದಾಯ ಗ್ರಾಮದ ಹಕ್ಕುಪತ್ರಗಳು, ಪೌತಿಖಾತೆ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಸುಮಾರು 80 ಸಾವಿರಕ್ಕೂ ಹೆಚ್ಚು ಮಂದಿಗೆ ವಿವಿಧ ಇಲಾಖೆಗಳು ಸವಲತ್ತುಗಳನ್ನು ವಿತರಿಸಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅಭೂತಪೂರ್ವ ಯೋಜನೆಗಳ ಕುರಿತು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರತ್ಯೇಕ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ, ತುಮಕೂರು ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಕಾರ್ಯಕ್ರಮಕ್ಕೆ 2ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಆಗಮಿಸಲಿದ್ದು, ಅವರಿಗೆ ಸೂಕ್ತ ಊಟ, ಸಾರಿಗೆ ವ್ಯವಸ್ಥೆ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಯಾವುದೇ ಕೊರತೆ ಇಲ್ಲದಂತೆ ನಿರ್ವಹಿಸಲು ಸೂಚಿಸಲಾಗಿದೆ ಎಂದರು.
ಸದರಿ ಕಾರ್ಯಕ್ರಮ ಸಂಪೂರ್ಣವಾಗಿ ಸರ್ಕಾರಿ ಕಾರ್ಯಕ್ರಮವಾಗಿದ್ದು, ಇದರಲ್ಲಿ ಯಾವುದೇ ಪಕ್ಷ, ಸಂಘಟನೆ ಇರುವುದಿಲ್ಲ. ಶಿಷ್ಠಾಚಾರದಂತೆ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಎಲ್ಲಾ ಆಹ್ವಾನಿತರು ಕಾರ್ಯಕ್ರಮದಲ್ಲಿ ಪಕ್ಷಭೇದ ಮರೆತು ಭಾಗವಹಿಸಬೇಕು ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು,
ಸಭೆಯಲ್ಲಿ ಕೆಎಸ್​ಆರ್​ಟಿಸಿ ನಿಗಮದ ಅಧ್ಯಕ್ಷ ಎಸ್​.ಆರ್​. ಶ್ರೀನಿವಾಸ್​, ಶಾಸಕರಾದ ಕೆ.ಷಡಕ್ಷರಿ, ಸಿ.ಬಿ.ಸುರೇಶ್​ ಬಾಬು,
ಬಿ.ಸುರೇಶ್​ಗೌಡ, ಜಿ.ಬಿ.ಜ್ಯೋತಿಗಣೇಶ್​, ಬಿಎಂಟಿಸಿ ನಿಗಮದ ಉಪಾಧ್ಯಕ್ಷ ಎಂ.ನಿಕೇತ್​ರಾಜ್​, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಬಿ.ವಿ.ಅಶ್ವಿಜಾ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net