ಟಿವಿಕೆಯ ಕನ್ನಡ ಕುವರ

ಮೆಟ್ಟುಪಾಳ್ಯಂ ಕ್ಷೇತ್ರದಿಂದ ಟಿವಿಕೆ ಪಕ್ಷದಿಂದ ಆಯ್ಕೆಯಾದ ತುರುವೇಕೆರೆ ಮೂಲದ ಸುನಿಲ್​ ಆನಂದ್​.
ಮೆಟ್ಟುಪಾಳ್ಯಂ ಕ್ಷೇತ್ರದಿಂದ ಟಿವಿಕೆ ಪಕ್ಷದಿಂದ ಆಯ್ಕೆಯಾದ ತುರುವೇಕೆರೆ ಮೂಲದ ಸುನಿಲ್​ ಆನಂದ್​.
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ವಿಧಾನಸಭೆ ಚುನಾವಣೆ
  • ಮೆಟ್ಟುಪಾಳ್ಯಂ ಕ್ಷೇತ್ರದಿಂದ ಆಯ್ಕೆ
  • ತುರುವೇಕೆರೆ ಹೊಡೆಕೆಘಟ್ಟದ ಸುನಿಲ್​ ಆನಂದ್​
ತುರುವೇಕೆರೆ: ದಳಪತಿ ವಿಜಯ್​ ಸಾರಥ್ಯದ ಟಿವಿಕೆ ಪಕ್ಷದಿಂದ ಕನ್ನಡಕುವರನೊಬ್ಬ ತಮಿಳುನಾಡು ವಿಧಾನಸಭೆ ಪ್ರವೇಶಿಸಿದ್ದಾರೆ! ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಹೋಬಳಿಯ ಹೊಡೆಕೆಘಟ್ಟದ ಕನ್ನಡಿಗ ಎನ್​.ಸುನಿಲ್​ ಆನಂದ್​ಗೆ ಈ ಅದೃಷ್ಟ ಒಲಿದುಬಂದಿದೆ.
ತಮಿಳುನಾಡಿನ ಮೆಟ್ಟುಪಾಳ್ಯಂ ವಿಧಾನಸಭಾ ಕ್ಷೇತ್ರದಿಂದ ಸುನಿಲ್​ ಆನಂದ್​ ಮೊದಲಪ್ರಯತ್ನದಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದು ತಮಿಳು ನೆಲದಲ್ಲಿ ರಾಜಕೀಯ ನೆಲೆಯನ್ನು ಕಂಡುಕೊಳ್ಳುವಲ್ಲಿ ಯಶಕಂಡಿದ್ದಾರೆ.
ಸುನಿಲ್​ ಆನಂದ್​ ಮೂಲತಃ ತಾಲೂಕಿನ ಹೊಡೆಕೆಘಟ್ಟದವರು. ಇದೇ ಗ್ರಾಮದ ಮಾಜಿ ಶಾಸಕ ಹೆಚ್​.ಬಿ.ನಂಜೇಗೌಡರ ಸಂಬಂಧಿಕರಾಗಿದ್ದು ಹತ್ತಾರು ವರ್ಷಗಳ ಹಿಂದೆಯೇ ಗ್ರಾಮತೊರೆದ ಸುನಿಲ್​ ಆನಂದ್​ರ ತಾತ ಹೆಚ್​.ಎನ್​.ಮುದ್ದೇಗೌಡ ಜೀವನೋಪಯಾಕ್ಕಾಗಿ ತಮಿಳುನಾಡಿನ ಮೆಟ್ಟುಪಾಳ್ಯಂ ದಾರಿ ಹಿಡಿದಿದ್ದರು. ಮುದ್ದೇಗೌಡ ಅವರ ಸಹೋದರ ನಂಜೇಗೌಡ ಸಹ ಅಲ್ಲಿಯೇ ವ್ಯಾಪಾರ ಆರಂಭಿಸಿ ಬದುಕು ಕಟ್ಟಿಕೊಳ್ಳುವುದರ ಜತೆಗೆ ತಾವು ದುಡಿದ ಪಾಲಿನಲ್ಲಿ ಒಂದಿಷ್ಟು ಸಮಾಜಸೇವೆಗೆ ಸಮರ್ಪಿಸಿದರು. ಈ ದಾನಧರ್ಮವು ಕುಟುಂಬವನ್ನು ಸ್ಥಳಿಯವಾಗಿ ರಾಜಕೀಯ ಮುಖಂಡರಾಗಿ ಬೆಳೆಯಲು ಕಾರಣವಾಯಿತು.
ಮುದ್ದೇಗೌಡರ ಮೊಮ್ಮಗ ಸುನಿಲ್​ ಆನಂದ್​ ಈಗ ರಾಜಕೀಯ ನೆಲೆ ಕಂಡುಕೊಳ್ಳಲು ಜನರೊಂದಿಗಿನ ಒಡನಾಟ ಕೈಹಿಡಿಯಿತು.
ಲೇಟ್​.ನಾಗರಾಜ್​ ಪುತ್ರ ಸುನಿಲ್​ರನ್ನು ಗುರುತಿಸಿ ಟಿವಿಕೆ ಸಾರಥಿ ವಿಜಯ್​ ಈ ಬಾರಿ ಚುನಾವಣೆಯಲ್ಲಿ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್​ ನೀಡಿದ್ದು ಅವರಿಗೆ ಅದೃಷ್ಟ ಕುಲಾಯಿಸುವಂತೆ ಮಾಡಿದೆ. ಮೊದಲ ಚುನಾವಣೆಯಲ್ಲೇ ಅತಿರಥ, ಮಹಾರಥರನ್ನು ಮಣಿಸಿ ತಮಿಳುನಾಡು ವಿಧಾನಸಭೆ ಪ್ರವೇಶಿಸುತ್ತಿದ್ದಾರೆ ಈ ಕನ್ನಡ ಕುವರ.
ಸುನಿಲ್​ ತಾಯಿಯ ತಂದೆ ಲೇ.ಲಿಂಗಪ್ಪ ಮೈಸೂರಿನಲ್ಲಿ ಮೇಯರ್​ ಆಗಿದ್ದರು. ಇಂದಿಗೂ ಮೈಸೂರಲ್ಲಿ ಅವರ ಹೆಸರಿನ ವೃತ್ತ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net