

ಪ್ರಮುಖ ಮುಖ್ಯಾಂಶಗಳು
ಹಂದನಕೆರೆ:
ಬೆಳಗಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಡೇರಿ ಕಟ್ಟಡದ ಪಿಲ್ಲರ್ ಕುಸಿದು 4ನೇ ತರಗತಿ ವಿದ್ಯಾರ್ಥಿ ಧನುಷ್ (10)ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.
ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ಹಂದನಕೆರೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ಚಿತ್ತರಂಜನ್, ಬಿಇಒ ಕಾಂತರಾಜು ಸ್ಥಳ ಪರಿಶೀಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಾಲೆಯ ಪಕ್ಕದಲ್ಲೇ ಇಷ್ಟೊಂದು ಅಪಾಯಕಾರಿ ಸ್ಥಿತಿಯಲ್ಲಿ ಕಟ್ಟಡವಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದೆ ದುರಂತಕ್ಕೆ ಕಾರಣ ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದರು. ಅಲ್ಲದೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿದರು.
ಮಾವಿನ ತೋರಣ ಎಳೆದಾಗ ಬಿದ್ದ ಕಂಬ:
ಡೇರಿ ಉನ್ನತಿಗೆ ನಾಲ್ಕು ಕಂಬಗಳಿರಬೇಕು ಎಂದು ಕಬ್ಬಿಣದ ಸಲಾಕೆಯಿಲ್ಲದೆ, ಇಟ್ಟಿಗೆಯಿಂದ ಕಟ್ಟಿ ಸಿಮೆಂಟ್ ಪ್ಲಾಸ್ಟಿಂಗ್ ಮಾಡಿದ್ದ ಕಂಬ ಸಾಕಷ್ಟು ದಿನಗಳಿಂದ ಬೀಳುವ ಸ್ಥಿತಿಯಲ್ಲಿಯೇ ಇತ್ತು ಎನ್ನಲಾಗಿದೆ. ಅಪಾಯದ ಮುನ್ಸೂಚನೆ ಅರಿತಿದ್ದ ಸದಸ್ಯರು ಇತ್ತೀಚೆಗೆ ನಡೆದ ಡೇರಿ ಸಾಮಾನ್ಯಸಭೆಯಲ್ಲಿಯೂ ಕಂಬ ಬೀಳಿಸಲು ವಿಲ ಯತ್ನ ಕೂಡ ನಡೆಸಿದ್ದರು. ಅಂದು ಎಷ್ಟೇ ಜನರು ಅಲುಗಾಡಿಸಿದರೂ ಬೀಳದ ಕಂಬವು, ಕಂಬದ ತುದಿಯಲ್ಲಿ ಕಟ್ಟಿದ್ದ ಮಾವಿನ ತೋರಣದ ಹಗ್ಗ ಕೆಳಗೆ ಬಿದ್ದಿದ್ದನ್ನು ಮಕ್ಕಳೆಲ್ಲರೂ ಸೇರಿ ಎಳೆದಾಗ ಧನುಷ್ ತಲೆಯ ಮೇಲೆಯೇ ಉರುಳಿಬಿದ್ದಿದೆ. ಮತಿಟ್ಟ ಕ್ಲಸ್ಟರ್ನಲ್ಲಿ ಇದು ಎರಡನೇ ದುರಂತವಾಗಿದ್ದು, ಕಳೆದ ಜೂ.5ರಂದು ಸೈಯದ್ಸಾಬ್ ಪಾಳ್ಯದ ಸರ್ಕಾರಿ ಶಾಲೆ ವಿದ್ಯಾರ್ಥಿ ಕೂಡ ಕಟ್ಟೆಯಲ್ಲಿ ನೀರಿಗೆ ಬಿದ್ದು ಕೊನೆಯುಸಿರೆಳೆದಿದ್ದನು.