ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನ ಬಹಳಷ್ಟು ಹೆಚ್ಚಾಗಿದ್ದು, ಅದರಲ್ಲಿಯೂ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಪ್ರೌಢಶಾಲೆ ಮುಗಿಸಿ ಕಾಲೇಜು ಹಂತಕ್ಕೆ ಬರುವ ಯುವಕರು ಹಾಗೂ ಯುವತಿಯರು ದುಶ್ಚಟಗಳ ದಾಸರಾಗುತ್ತಾರೆ. ಬೀಡಿ, ಸಿಗರೇಟು ಮದ್ಯಪಾನ, ಧೂಮಪಾನ, ಗಾಂಜಾ ಇನ್ನಿತರ ಮಾದಕ ವ್ಯಸನಗಳನ್ನು ತೆಗೆದುಕೊಂಡು ಅಮಲಿನಲ್ಲಿ ತೇಲಾಡುತ್ತಾರೆ. ಇಂತಹ ವ್ಯಸನಿಗಳಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ನಶೆಯಲ್ಲಿ ತಮ್ಮ ಮೇಲೆ ತಮಗೆ ಹಿಡಿತವಿಲ್ಲದೆ ಕೊಲೆ, ಸುಲಿಗೆ, ಅತ್ಯಾಚಾರದ ಪ್ರಕರಣಗಳಲ್ಲಿ ಭಾಗಿಯಾಗುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಅವುಗಳಿಂದ ದೂರವಿದ್ದು, ಅಂತಹ ಕೃತ್ಯಗಳಲ್ಲಿ ಭಾಗವಹಿಸುವಿಕೆ ಅರಿವಿಗೆ ಬಂದರೆ ಅಂತಹವರ ಮಾಹಿತಿಯನ್ನು ಪೊಲೀಸರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.