ಡಿಕೆಶಿ ಮೇಲೆ ಬೇಸವಾಗಿರುವ ಶ್ರೀನಿವಾಸ್​ ಎಚ್​ಡಿಕೆ ಸ್ಮರಣೆ

ಎಸ್.ಆರ್.ಶ್ರೀನಿವಾಸ್​ ಜತೆ ಸಿಎಂ ಡಿ.ಕೆ.ಶಿವಕುಮಾರ್​
ಎಸ್.ಆರ್.ಶ್ರೀನಿವಾಸ್​ ಜತೆ ಸಿಎಂ ಡಿ.ಕೆ.ಶಿವಕುಮಾರ್​
Published on

ಪ್ರಮುಖ ಮುಖ್ಯಾಂಶಗಳು

  • ವಾಸು ನಡೆ ಜಿಲ್ಲೆಯಲ್ಲಿ ಹೊಸ ರಾಜಕೀಯ ಚರ್ಚೆಗೆ ನಾಂದಿ
  • ವಿಧಾನಸಭೆಯಲ್ಲಿ ಪ್ರತ್ಯೇಕ ಆಸನ ಕೇಳಿದ ಟಿಬಿಜೆ
  • ಉಭಯ ನಾಯಕರೊಂದಿಗೆ ಸಿಎಂ ಪ್ರತ್ಯೇಕ ಚರ್ಚೆ

ತುಮಕೂರು:

ಸಚಿವ ಸ್ಥಾನ ತಪ್ಪಿದ ನೋವಿನ ನಡುವೆಯೇ ಸುದ್ದಿಗಾರರ ಜತೆ ಮಾತನಾಡಿದ ಗುಬ್ಬಿ ಶಾಸಕ ಎಸ್​.ಆರ್​.ಶ್ರೀನಿವಾಸ್​ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮೃದುವಾಗಿ ಮಾತನಾಡುವ ಮೂಲಕ ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ಚರ್ಚೆಗೆ ವಿಷಯ ಒದಗಿಸಿದ್ದಾರೆ.

ಸಚಿವ ಸ್ಥಾನ ವಂಚಿತರಾದ ಕೂಡಲೇ ಕೆಎಸ್​ಆರ್​ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಎಂ ಡಿ.ಕೆ.ಶಿವಕುಮಾರ್​ ಬಗ್ಗೆ ಬೇಸರ ಹೊರಹಾಕಿದ್ದ ಶ್ರೀನಿವಾಸ್​ಗೆ ಮಂಗಳವಾರ ರಾತ್ರಿಯೇ ಸಿಎಂ ಡಿ.ಕೆ.ಶಿವಕುಮಾರ್​ ಖುದ್ದು ಕರೆ ಮಾಡಿ ಮಾತನಾಡಿದ್ದು, ಕೊಂಚ ಸಮಾಧಾನ ಮೂಡಿಸಿರುವ ಅವರ ಮಾತುಗಳಲ್ಲಿಯೇ ವ್ಯಕ್ತವಾಯಿತು.
ಕಾಂಗ್ರೆಸ್​ ಸಾಮಾಜಿಕ ನ್ಯಾಯದ ಬಗ್ಗೆ ಮನವರಿಕೆ ಮಾಡಿಕೊಂಡಂತೆ ಮಾತನಾಡಿದ ವಾಸಣ್ಣ ಮಾತಿನ ನಡುವೆಯೇ, ಜೆಡಿಎಸ್​ನಲ್ಲಿದ್ದಾಗ ಕುಮಾರಸ್ವಾಮಿ ಕರೆದು ಮಂತ್ರಿ ಸ್ಥಾನ ನೀಡಿದ್ದರು ಎಂದು ಉಪಕಾರ ಸ್ಮರಣೆ ಮಾಡಿದ್ದು, ಭವಿಷ್ಯದ ರಾಜಕೀಯ ಅವಕಾಶಗಳ ಮುನ್ಸೂಚನೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಸಿಎಂ ಡಿ.ಕೆ.ಶಿವಕುಮಾರ್​ ಕರೆ ಮಾಡಿ ಮಾತನಾಡಿದ್ದಾರೆ, ಸಾಕಷ್ಟು ಸಚಿವರೂ, ಹಿತೈಷಿಗಳೂ ಮಾತನಾಡಿದ್ದಾರೆ. ಆದರೆ, ಅವರು ಏನು ಮಾತನಾಡಿದ್ದಾರೆ ಎಂದು ನಾನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್​ಗೆ ನಾನು ಹೊಸಬನಾಗಿರುವ ಕಾರಣದಿಂದ ಸಚಿವ ಸ್ಥಾನ ತಪ್ಪಿರಬಹುದು, ಈ ಬಗ್ಗೆ ಆ ಕ್ಷಣದ ಬೇಸರವಾಗಿದ್ದು, ಬಿಟ್ಟರೇ ಪಕ್ಷ ಅಥವಾ ಮುಖಂಡರ ಬಗ್ಗೆ ಯಾವುದೇ ಅಸಮಧಾನವಿಲ್ಲ ಎಂದು ಶ್ರೀನಿವಾಸ್​ ತಿಳಿಸಿದರು.
ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ತಿಂಗಳ ಹಿಂದೆಯೇ ತೆಗೆದುಕೊಂಡಿದ್ದೆ. ಡಿ.ಕೆ.ಶಿವಕುಮಾರ್​ ಅವರ ಜತೆಗೂ ಇದನ್ನು ಪ್ರಸ್ತಾಪಿಸಿದ್ದೆ. ಹಾಗಾಗಿ, ಮಂತ್ರಿಸ್ಥಾನ ಕೈತಪ್ಪಿರುವುದಕ್ಕೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನಸಭೆಯಲ್ಲಿ ಪ್ರತ್ಯೇಕ ಆಸನಕ್ಕೆ ಬೇಡಿಕೆ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಇರಿಸು, ಮುರಿಸು ಉಂಟುಮಾಡಿರುವ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಜತೆಗೂ ಸಿಎಂ ಡಿ.ಕೆ.ಶಿವಕುಮಾರ್​ ದೂರವಾಣಿಯಲ್ಲಿ ಮಾತನಾಡಿದ್ದು, ಶ್ರೀದಲ್ಲಿಯೇ ಭೇಟಿಯಾಗಿ ಮಾತನಾಡೋಣ ಎಂದು ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ.
ಪಾಪ, ನಾನು ಎಚ್​.ಡಿ.ಕುಮಾರಸ್ವಾಮಿ ಅವರನ್ನು ಈಗ ನೆನೆಪು ಮಾಡಿಕೊಳ್ಳಬೇಕು. ಹಿಂದೆ ಸಮ್ಮಿಶ್ರ ಸರ್ಕಾರವಿದ್ದಾಗ ನನಗೆ ಸಚಿವ ಸ್ಥಾನ ಸಿಗೋದೇ ಇಲ್ಲ ಎಂದು ಮನೆಯಲ್ಲೇ ಕುಂತಿದ್ದಾಗ ಅವರೇ ಕರೆದು ನನಗೆ ಸಚಿವ ಸ್ಥಾನ ನೀಡಿದ್ದರು. ಅದನ್ನು ನಾನೂ ಎಂದಿಗೂ ಮರೆಯುವುದಿಲ್ಲ. ಕುಂಚಿಟಿಗ ಸಮುದಾಯದ ಸತ್ಯನಾರಾಯಣ ಅವರಿಗೆ ಸಚಿವಸ್ಥಾನ ನೀಡಲು ದೇವೇಗೌಡರು ನಿರ್ಧರಿಸಿದ್ದರು. ಆದರೆ, ಕುಮಾರಸ್ವಾಮಿ ನನ್ನನ್ನು ಕರೆದು ಸ್ಥಾನಮಾನ ಕೊಟ್ಟಿದ್ದರು. ಈಗಲೂ ನಮ್ಮಿಬ್ಬರ ನಡುವೆ ಸಂಬಂಧ ಉತ್ತಮವಾಗಿಯೇ ಇದೆ.
ಎಸ್​.ಆರ್​.ಶ್ರೀನಿವಾಸ್​, ಗುಬ್ಬಿ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net