ತುಮಕೂರಿನ ಗೋಕುಲ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗು ಶ್ರೀ ಶಿವಕುಮಾರಸ್ವಾಮಿಗಳ 119ನೇ ಜಯಂತಿ ಕಾರ್ಯಕ್ರಮವನ್ನು ಜಿ.ಬಿ. ಜ್ಯೋತಿಗಣೇಶ್ ಉದ್ಘಾಟಿಸಿದರು. ಶ್ರೀ ಬಸವಲಿಂಗ ಸ್ವಾಮೀಜಿ, ಜಯವಿಭವಸ್ವಾಮಿ, ಕೆ.ಎಸ್. ಸಿದ್ಧಲಿಂಗಪ್ಪ, ಡಾ. ಡಿ.ಎನ್. ಯೋಗೀಶ್ವರಪ್ಪ, ಪ್ರೊ. ಜೆ. ಗಂಗಾಧರ್, ಎಂ.ಜಿ. ಸಿದ್ದಯರಾಮಯ್ಯ, ಕೆ.ಎಸ್. ಉಮಾಮಹೇಶ್, ಷಡಕ್ಷರಿ, ಪಿ.ಆರ್. ಸೋಮಶೇಖರ್ ಮತ್ತಿತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಿವಕುಮಾರ ಮಹಾಶಿವಯೋಗಿಗಳ 119ನೇ ಜಯಂತಿ
ತುಮಕೂರಿನ ಗೋಕುಲಬಡಾವಣೆಯಲ್ಲಿ ಕಾರ್ಯಕ್ರಮ
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಣ್ಣನೆ
ತುಮಕೂರು: ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣ ತಮ್ಮ ಕಾಯಕನಿಷ್ಠೆ, ಸಾಮಾಜಿಕ ಕಳಕಳಿ, ಅಸಮಾನತೆಯ ವಿರುದ್ಧ ನಡೆಸಿದ ಹೋರಾಟದ ಮೂಲಕ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ದಾರ್ಶನಿಕರಾಗಿದ್ದಾರೆ ಎಂದು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.
ನಗರದ ಗೋಕುಲ ಬಡಾವಣೆಯ ಡಾ. ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ಧಾರ್ಮಿಕ ಕೇಂದ್ರದಲ್ಲಿ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಬಸವ ಜಯಂತಿ ಹಾಗು ಶ್ರೀ ಶಿವಕುಮಾರ ಸ್ವಾಮಿಗಳ 119ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರಂತೆಯೇ ಸಿದ್ಧಗಂಗೆ ಪೂಜ್ಯ ಶ್ರೀ ಶಿವಕುಮಾರಸ್ವಾಮಿಗಳು ಸಹ ಶರಣರ ಆದರ್ಶಗಳನ್ನು ಆಚರಣೆಗೆ ತಂದು, ಲಕ್ಷಾಂತರ ಬಡಮಕ್ಕಳಿಗೆ ಅನ್ನ, ಅಕ್ಷರ, ಅರಿವು ನೀಡುವ ಮೂಲಕ ಸಾಮಾಜಿಕ, ಆರ್ಥಿಕ, ಧಾರ್ಮಿಕ ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದರು.
12ನೇ ಶತಮಾನದ ಬಸವಯುಗ ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹುದು. ಬಸವಣ್ಣ ಅಧಿಕಾರಕ್ಕೆ ಅಂಟಿಕೊಳ್ಳದೆ ಸುಸಂಸ್ಕತ ಸಮ ಸಮಾಜದ ನಿಮಾರ್ಣಕ್ಕೆ ಹೋರಾಡಿ ಯಶಸ್ಸು ಕಂಡವರು. ಸತ್ಯ ಶುದ್ಧ ಕಾಯಕಕ್ಕೆ ಒತ್ತು ನೀಡಿ ವೈಚಾರಿಕತೆಯ ಬುನಾದಿಯ ಮೇಲೆ ಹೊಸಧರ್ಮದ ನಿಮಾರ್ಣ ಮಾಡಿದರು ಎಂದು ಪ್ರೊ. ಜೆ. ಗಂಗಾಧರ್ ತಿಳಿಸಿದರು.
ಸಂಶೋಧಕ ಡಾ. ಡಿ.ಎನ್. ಯೋಗೀಶ್ವರಪ್ಪ ಮಾತನಾಡಿ, ಶಿವಕುಮಾರ ಶ್ರೀಗಳು 20 ಮತ್ತು 21ನೆಯ ಎರಡೂ ಶತಮಾನಗಳನ್ನು ಕಂಡ ಮಹಾನ್ ಸಂತರು. ಶರಣರ ತತ್ವಾದರ್ಶಗಳನ್ನು ಆಚರಿಸಿ ತೋರಿಸಿದವರು. ಅಲ್ಲಮನ ಜ್ಞಾನ, ಬಸವಣ್ಣನ ಭಕ್ತಿ ಹಾಗು ಸಿದ್ಧರಾಮನ ಕಾಯಕವನ್ನು ಅಳವಡಿಸಿಕೊಂಡು ದೇಶಪರ್ಯಟನೆ ಮಾಡಿ ಬಿಕ್ಷಾಟನೆಯಿಂದ ಮಠಕಟ್ಟಿ ಬೆಳೆಸಿದವರು. ಜಾತಿ, ಮತ, ಪ್ರಾಂತ್ಯಗಳ ಭೇದವೆಣಿಸದೆ ಲಕ್ಷಾಂತರ ಬಡವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು ಎಂದು ಸ್ಮರಿಸಿದರು.
ಚಿಕ್ಕಮಸ್ಕಲ್ ಮಠದ ಶ್ರೀ ಬಸವಲಿಂಗಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಜಿ. ಸಿದ್ಧರಾಮಯ್ಯ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ನಿರ್ದೇಶಕ ಜಯವಿಭವಸ್ವಾಮಿ ಉಪಸ್ಥಿತರಿದ್ದರು. ನಿವೃತ್ತ ಉಪಪ್ರಾಂಶುಪಾಲ ಕೆ.ಎಸ್. ಉಮಾಮಹೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಿ.ಆರ್. ಸೋಮಶೇಖರ್ ಸ್ವಾಗತಿಸಿ, ಎಚ್. ರೇಣುಕಪ್ಪ ವಂದಿಸಿದರು. ಎಂ. ಗಣೇಶ್ ನಿರೂಪಿಸಿದರು.