ಕ್ರೀಡಾ ನಗರವಾಗಿ ತುಮಕೂರು ಅಭಿವೃದ್ಧಿ

ತುಮಕೂರಿನಲ್ಲಿ‌ ಒಲಂಪಿಕ್ ಓಟಕ್ಕೆ ಡಾ.ಜಿ.ಪರಮೇಶ್ವರ ಚಾಲನೆ
ತುಮಕೂರಿನಲ್ಲಿ‌ ಒಲಂಪಿಕ್ ಓಟಕ್ಕೆ ಡಾ.ಜಿ.ಪರಮೇಶ್ವರ ಚಾಲನೆ
Published on

ಪ್ರಮುಖ ಮುಖ್ಯಾಂಶಗಳು

  • ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ ವಿಶ್ವಾಸ
  • ತುಮಕೂರಿನಲ್ಲಿ ಒಲಂಪಿಕ್ ಓಟಕ್ಕೆ ಡಿಸಿಎಂ ಚಾಲನೆ
  • ಯುವಜನರನ್ನು ಮಾದಕ ವ್ಯಸನದ ಜಾಲಕ್ಕೆ ಸೆಳೆಯುವ ಪ್ರಯತ್ನಕ್ಕೆ ಸೆಡ್ಡು
ತುಮಕೂರು: ಶೈಕ್ಷಣಿಕ ನಗರಿಯಾಗಿರುವ ತುಮಕೂರು ಜಿಲ್ಲೆಯನ್ನು ರಾಜ್ಯದ ಪ್ರಮುಖ ಕ್ರೀಡಾ ನಗರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಕ್ರೀಡಾ ಮೂಲಸೌಕರ್ಯ ನಿರ್ಮಿಸುತ್ತಿದ್ದು, ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ಮೂಲಕ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ಯುವಜನ ಮತ್ತು ಕ್ರೀಡಾ ಸಚಿವರೂ ಆದ ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.
ಒಲಂಪಿಕ್ ದಿನದ ಅಂಗವಾಗಿ ಕರ್ನಾಟಕ ಒಲಂಪಿಕ್ ಸಂಸ್ಥೆ ಹಾಗೂ ತುಮಕೂರು ಜಿಲ್ಲಾಡಳಿತದ ಸಹಯೋಗದಲ್ಲಿ ತುಮಕೂರಿನ ಟೌನ್ ಹಾಲ್ ಮುಂಭಾಗದಲ್ಲಿ ಆಯೋಜಿಸಲಾಗಿದ್ದ "ಒಲಂಪಿಕ್ ಓಟ" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶ್ವದಾದ್ಯಂತ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಅದರ ದುಷ್ಪರಿಣಾಮ ಯುವ ಸಮುದಾಯದ ಮೇಲೆ ಗಂಭೀರವಾಗಿ ಬೀಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ, ಯುವಜನರನ್ನು ಗುರಿಯಾಗಿಸಿಕೊಂಡು ಮಾದಕ ವ್ಯಸನದ ಜಾಲಕ್ಕೆ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಇದು ಸಮಾಜಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಯುವಕರು ಯಾವುದೇ ಕಾರಣಕ್ಕೂ ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗದೆ, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಸಂದೇಶವನ್ನು ಸಾರುವ ಉದ್ದೇಶದಿಂದ ಪ್ರತಿವರ್ಷ ಜೂನ್ 23ರಂದು ಅಂತಾರಾಷ್ಟ್ರೀಯ ಒಲಂಪಿಕ್ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಕರ್ನಾಟಕ ಒಲಂಪಿಕ್ ಸಂಸ್ಥೆ ತುಮಕೂರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸದ ಸಂಗತಿ ಎಂದರು.
ತುಮಕೂರಿನಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಕೈಗೊಂಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) 42 ಎಕರೆ ಭೂಮಿಯನ್ನು ನೀಡಲಾಗಿದ್ದು, ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು
ಇದಲ್ಲದೆ, ಜಿಲ್ಲೆಯ ಕ್ರೀಡಾಪಟುಗಳ ತರಬೇತಿಗಾಗಿ ರಾಷ್ಟ್ರೀಯ ಮಟ್ಟದ ಜಿಮ್ನೇಶಿಯಂ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಂಗಣ ಹಾಗೂ ಅತ್ಯಾಧುನಿಕ ಈಜುಕೊಳವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಅಮಾನಿಕೆರೆಯಲ್ಲಿ ಕಯಾಕಿಂಗ್ ಅಕಾಡೆಮಿಯನ್ನು ಆರಂಭಿಸಲಾಗಿದ್ದು, ಅಲ್ಲಿನ ತರಬೇತಿಯಿಂದ ಜಿಲ್ಲೆಯ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಜೂನ್ 17ರಂದು ನಡೆದ ರಾಷ್ಟ್ರೀಯ ಮಟ್ಟದ ಕಯಾಕಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಿ ಬಹುಮಾನ ಗೆದ್ದಿರುವುದು ತುಮಕೂರು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಕೆ.ಗೋವಿಂದರಾಜ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟಿ.ಅನಂತರಾಜ್, ಜಿಪಂ‌ ಸಿಇಒ ಬಿ.ವಿ. ಅಶ್ವಿಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಸೇರಿದಂತೆ ಹಲವು ಗಣ್ಯರು ಹಾಗೂ ಕ್ರೀಡಾಪಟುಗಳು ಇದ್ದರು..
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net