ತಿಪಟೂರು ತಾಲೂಕಿನಲ್ಲಿ ನೆನೆಗುದಿಗೆ "ಸಮಾಜ ಕಲ್ಯಾಣ'

ತುಮಕೂರು ಜಿಲ್ಲಾಧಿಕಾರಿ ಕಚೇರಿ
ತುಮಕೂರು ಜಿಲ್ಲಾಧಿಕಾರಿ ಕಚೇರಿ
Published on

ಪ್ರಮುಖ ಮುಖ್ಯಾಂಶಗಳು

  • ಪರಿಶಿಷ್ಟ ಕಾಲೋನಿಗೆ ಸಿಗದ ಮೂಲಸೌಕರ್ಯ
  • ಜವಬ್ಧಾರಿ ಮರೆತ ಕೆಆರ್​ಐಡಿಎಲ್​ ಸಂಸ್ಥೆ
  • 17 ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿಗೆ 6 ಕೋಟಿ ರೂ.
  • ಮೂರು ವರ್ಷದಿಂದ ಬಳಕೆಯಾಗದ ಅನುದಾನ

ತುಮಕೂರು: ತಿಪಟೂರು ತಾಲೂಕಿನಲ್ಲಿ ಗ್ರಾಮಗಳಲ್ಲಿರುವ ಪರಿಶಿಷ್ಟ ಕಾಲೋನಿಗಳಲ್ಲಿ ಸಿಸಿ ರಸ್ತೆ, ವ್ಯವಸ್ಥಿತ ಚರಂಡಿ ನಿರ್ಮಾಣದ ಮೂಲಕ ಮೂಲಸೌಕರ್ಯ ಒದಗಿಸುವ ಸಮಾಜ ಕಲ್ಯಾಣ ಇಲಾಖೆಯ "ಪ್ರಗತಿ ಕಾಲೋನಿ ಯೋಜನೆ' ನೆನೆಗುದಿಗೆ ಬಿದ್ದಿದೆ. ಸರ್ಕಾರದ ನೀಡಿರುವ ಅನುದಾನದ ಬಳಕೆಯಾಗದೆ ಬ್ಯಾಂಕ್​ ಖಾತೆಯಲ್ಲಿ ಬಡ್ಡಿ ದುಡಿಯುತ್ತಿದೆ.

ತಾಲೂಕಿನ 17 ಗ್ರಾಮಗಳಲ್ಲಿರುವ ಪರಿಶಿಷ್ಟ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರದಿಂದ ಕಳೆದ ಮೂರು ವರ್ಷದಲ್ಲಿ 6ಕೋಟಿ ರೂ. ಮಂಜೂರಾಗಿದ್ದರೂ ಸಕಾಲದಲ್ಲಿ ಕಾಮಗಾರಿ ಆರಂಭಿಸದೇ ಅನುದಾನ ವಾಪಸಾಗುವಂತೆ ಮಾಡಿದೆ. ಕಾಮಗಾರಿ ಆರಂಭಿಸಲು ಆರಂಭಿಕ ಕಂತು ಎಂದು ಈವರೆಗೂ 1.98ಕೋಟಿ ರೂ. ಸಮಾಜ ಕಲ್ಯಾಣ ಇಲಾಖೆ ನಿರ್ಮಾಣ ಏಜೆನ್ಸಿ ಪಡೆದಿರುವ ಕೆಆರ್​ಐಡಿಎಲ್​ ಸಂಸ್ಥೆಗೆ ವರ್ಗಾಯಿಸಿದ್ದರೂ 15 ಗ್ರಾಮಗಳಲ್ಲಿ ಕಾಮಗಾರಿ ಆರಂಭವೇ ಆಗಿಲ್ಲ.
ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷದ ಶಾಸಕರಿದ್ದು, ಇತ್ತೀಚೆಗೆ ಮಂತ್ರಿ ಸ್ಥಾನ ಕೂಡ ಕೈತಪ್ಪಿದೆ ಆದರೂ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೂ ಸರ್ಕಾರ ಮಲತಾಯಿಧೋರಣೆ ತೋರುತ್ತಿರುವುದು ಕ್ಷೇತ್ರದಲ್ಲಿ ಅಭಿವೃದ್ಧಿಗೆ ಕಂಟಕವಾಗಿದೆ. 2023&24ನೇ ಸಾಲಿನಲ್ಲಿ 1ಕೋಟಿ ರೂ., 2024&25ರಲ್ಲಿ 2ಕೋಟಿ ರೂ. ಹಾಗೂ 2025&26ನೇ ಸಾಲಿನಲ್ಲಿ 3ಕೋಟಿ ರೂ. ಸೇರಿ ಒಟ್ಟು 6ಕೋಟಿ ರೂ ಮಂಜೂರಾಗಿದ್ದರೂ ಕೆಲಸ ಆರಂಭಿಸಲು ಸಂಬಂಧಿಸಿದ ಏಜೆನ್ಸಿಗೆ ಸಮಾಜ ಕಲ್ಯಾಣ ಇಲಾಖೆ ಒತ್ತಡ ತಂದಿಲ್ಲ.
ಎಸ್​ಸಿಪಿ ಯೋಜನೆಯಲ್ಲಿ ಕಾರ್ಯಕ್ರಮ ಅನುಷ್ಟಾನದ ಸಂಪೂರ್ಣ ಹೊಣೆಯನ್ನು ಕೆಆರ್​ಐಡಿಎಲ್​ ಸಂಸ್ಥೆಗೆ ವಹಿಸಲಾಗಿದ್ದು ಅನುದಾನವಿದ್ದರೂ ಕಾಮಗಾರಿ ಕೈಗೊಳ್ಳದಿರುವುದು ಅಚ್ಚರಿ ಮೂಡಿಸಿದೆ. 2023&24ರ ಸಾಲಿನಲ್ಲಿ ಬಿಸಿಲೇಹಳ್ಳಿಯಲ್ಲಿ ಆರಂಭಿಸಿದ್ದ 50 ಲಕ್ಷ ರೂ. ಕಾಮಗಾರಿ ಹಾಗೂ 2024ರಲ್ಲಿ ಆಲ್ಬೂರಿನಲ್ಲಿ ಆರಂಭಿಸಿದ್ದ ಕಾಮಗಾರಿ ಮಾತ್ರ ಪೂರ್ಣಗೊಂಡಿವೆ.
2023ರಲ್ಲಿ ಆರಂಭಿಸಿದ್ದ 15 ಲಕ್ಷ ರೂ. ಅಂದಾಜು ವೆಚ್ಚದ ಕೋಡಿಹಳ್ಳಿ ಎಸ್​ಸಿ ಕಾಲೋನಿ ಕಾಮಗಾರಿ ಕಳೆದ ಮೂರು ವರ್ಷದಿಂದಲೂ ನಡೆಯುತ್ತಲೇ ಇರುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಗೆ ಸಾಯಾಗಿದೆ. 2024&25ನೇ ಸಾಲಿನಲ್ಲಿ ಅನುಮೋದನೆಯಾಗಿರುವ 10 ಕಾಮಗಾರಿ ಹಾಗೂ 2025&26ನೇ ಸಾಲಿನ 5 ಕಾಮಗಾರಿ ಆರಂಭಿಸಲು ಶೇ.30ರಷ್ಟು ಅನುದಾನ ಖಾತೆಗೆ ಪಡೆದಿರುವ ಕೆಆರ್​ಐಡಿಎಲ್​ ಸಂಸ್ಥೆಗೆ ಸಾಧ್ಯವೇ ಆಗಿಲ್ಲ.
ಆಲ್ಬೂರು ಎಸ್​ಸಿ ಕಾಲೋನಿಯಲ್ಲಿ 60 ಲಕ್ಷ ರೂ. ಸಿಸಿ ರಸ್ತೆ, ಚರಂಡಿ ಕಾಮಗಾರಿ, ಹುಣುಸೇಟ್ಟದಲ್ಲಿ 35 ಲಕ್ಷ ರೂ. ಕಾಮಗಾರಿ, ಕೊಪ್ಪ 30 ಲಕ್ಷರೂ., ಸೂಗೂರು 30 ಲಕ್ಷ ರೂ., ಬುರುಡೇಟ್ಟ 15 ಲಕ್ಷ ರೂ., ಆಲ್ಬೂರು 60 ಲಕ್ಷ ರೂ., ಸಿಂಗಹಳ್ಳಿ, ಬೆಣ್ಣೇನಹಳ್ಳಿ, ಬಿಸಿಲೇಹಳ್ಳಿಯಲ್ಲಿ ತಲಾ 10 ಲಕ್ಷ ರೂ. ವೆಚ್ಚದ ಕಾಮಗಾರಿ, ಮತಿಟ್ಟದಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಬೇಕಿರುವ ರಸ್ತೆ, ಚರಂಡಿಗೆ ಇನ್ನೂ ಕಾಲ ಕೂಡಿ ಬಂದೇ ಇಲ್ಲ.
ಲಿಂಗದಹಳ್ಳಿಯಲ್ಲಿ 50 ಲಕ್ಷ ರೂ., ಮಾರಗೊಂಡನಹಳ್ಳಿಯಲ್ಲಿ 50 ಲಕ್ಷ ರೂ., ಹುಚ್ಚಗೊಂಡನಹಳ್ಳಿ ಆದಿಲಕ್ಷಿ$್ಮನಗರದಲ್ಲಿ 20 ಲಕ್ಷ ರೂ., ಬೆಳಗರಹಳ್ಳಿ 50 ಲಕ್ಷ ರೂ. ಹಾಗೂ ಕೋಟನಾಯಕನಹಳ್ಳಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ, ಕರಿಕೆರೆಯಲ್ಲಿ 50 ಲಕ್ಷ ರೂ., ಗುಡಿಗೊಂಡನಹಳ್ಳಿಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಬೇಕಿರುವ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ದಲಿತ ಕಾಲೋನಿಗಳಲ್ಲಿ ಮೂಲಸೌಲಭ್ಯವಿಲ್ಲದಂತಾಗಿದೆ.
ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಶಿರಾ, ಮಧುಗಿ, ಪಾವಗಡ ಹಾಗೂ ಕೊರಟಗೆರೆ ತಾಲೂಕುಗಳಿಗೆ 8ಕೋಟಿ ರೂ. ಅನುದಾನ ಕಳೆದ ಮೂರು ವರ್ಷದಿಂದಲೂ ಪರಿಶಿಷ್ಟ ಪಂಗಡದ "ಪ್ರಗತಿ ಕಾಲೋನಿ ಅಭಿವೃದ್ಧಿ' ಯೋಜನೆಗೆ ಅನುದಾನ ಮಂಜೂರು ಮಾಡಲಾಗಿದ್ದು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅನುದಾನ ಬಳಕೆಯಾಗುತ್ತಿಲ್ಲ.
ವರ್ಷ ಮಂಜೂರಾತಿ ಬಿಡುಗಡೆ ಮೊತ್ತ
2023-24 100 33
2024-25 200 66
2025-26 300 99
ಒಟ್ಟು 600 198
ಜಿಲ್ಲೆಯ ಎಸ್​ಟಿ ಕಾಲೋನಿಗೆ ಬಂದ ಅನುದಾನ:
ವರ್ಷ ತಾಲೂಕು ಅನುದಾನ
2024-25 ಶಿರಾ 3 ಕೋಟಿ ರೂ.
2025-26 ಮಧುಗಿರಿ 2ಕೋಟಿ ರೂ.
2025-26 ಪಾವಗಡ 2ಕೋಟಿ ರೂ.
2025-26 ಕೊರಟಗೆರೆ 1ಕೋಟಿ ರೂ.
ತಿಪಟೂರು ತಾಲೂಕಿನಲ್ಲಿ "ಪ್ರಗತಿ ಕಾಲೋನಿ ಯೋಜನೆ'ಗೆ ಕಳೆದ ಮೂರು ವರ್ಷದಿಂದಲೂ ಸರ್ಕಾರ ಅನುದಾನ ನೀಡಿದ್ದು ಕಾಮಗಾರಿ ಅನುಷ್ಟಾನದ ಹೊಣೆಯನ್ನು ಕೆಆರ್​ಐಡಿಎಲ್​ ಸಂಸ್ಥೆಗೆ ವಹಿಸಲಾಗಿದೆ. ಮಂಜೂರಾಗಿರುವ ಅನುದಾನವನ್ನು ಬಳಸಿಕೊಂಡು ಕೂಡಲೇ ಯೋಜನೆ ಅನುಷ್ಟಾನಕ್ಕೆ ಸೂಚಿಸುತ್ತೇನೆ.
ಕೆ.ಎಚ್​.ಮುನಿಯಪ್ಪ
ಸಮಾಜ ಕಲ್ಯಾಣ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net