ಅನುವಾದಕ್ಕೆ ತಂತ್ರಜ್ಞಾನ ಪರ್ಯಾಯವಲ್ಲ

ತುಮಕೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ರಾಷ್ಟ್ರೀಯ ಅನುವಾದ ಮಿಷನ್​, ಭಾರತೀಯ ಭಾಷೆಗಳ ಸಂಸ್ಥಾನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅನುವಾದ ಕೌಶಲಾಭಿವೃದ್ಧಿ ಕಾರ್ಯಾಗಾರವನ್ನು ಡಾ. ಬಿ. ಜನಾರ್ದನ ಭಟ್​ ಉದ್ಘಾಟಿಸಿದರು. ಡಾ. ಎಸ್​. ಪಿ. ಪದ್ಮಪ್ರಸಾದ್​, ಡಾ. ಎಚ್​. ಎಸ್​. ಮೋಹನ, ಡಾ. ಕೆ. ಜಿ. ಪರಶುರಾಮ, ಡಾ.ಕೆ.ವಿ.ಸಿಬಂತಿ ಪದ್ಮನಾಭ, ಡಾ. ಛಾಯಾದೇವಿ, ಡಾ. ಎಂ.ಮಂಗಳಾಗೌರಿ ಇದ್ದರು.
ತುಮಕೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ರಾಷ್ಟ್ರೀಯ ಅನುವಾದ ಮಿಷನ್​, ಭಾರತೀಯ ಭಾಷೆಗಳ ಸಂಸ್ಥಾನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅನುವಾದ ಕೌಶಲಾಭಿವೃದ್ಧಿ ಕಾರ್ಯಾಗಾರವನ್ನು ಡಾ. ಬಿ. ಜನಾರ್ದನ ಭಟ್​ ಉದ್ಘಾಟಿಸಿದರು. ಡಾ. ಎಸ್​. ಪಿ. ಪದ್ಮಪ್ರಸಾದ್​, ಡಾ. ಎಚ್​. ಎಸ್​. ಮೋಹನ, ಡಾ. ಕೆ. ಜಿ. ಪರಶುರಾಮ, ಡಾ.ಕೆ.ವಿ.ಸಿಬಂತಿ ಪದ್ಮನಾಭ, ಡಾ. ಛಾಯಾದೇವಿ, ಡಾ. ಎಂ.ಮಂಗಳಾಗೌರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅನುವಾದ ಕೌಶಲಾಭಿವೃದ್ಧಿ ಕಾರ್ಯಾಗಾರ
  • ರಾಷ್ಟ್ರೀಯ ಅನುವಾದ ಮಿಷನ್​
  • ಭಾಷೆ ಎಂಬುದು ಸಾಂಸ್ಕೃತಿಕ ಜಗತ್ತು
ತುಮಕೂರು: ಅನುವಾದಕ್ಕೆ ತಂತ್ರಜ್ಞಾನ ಪೂರಕವೇ ಹೊರತು ಪರ್ಯಾಯವಲ್ಲ ಎಂದು ಹಿರಿಯ ವಿದ್ವಾಂಸ ಡಾ. ಬಿ. ಜನಾರ್ದನ ಭಟ್​ ಹೇಳಿದರು.
ತುಮಕೂರು ವಿವಿಯ ಡಾ. ಪಿ. ಸದಾನಂದ ಮಯ್ಯ ಕಟ್ಟಡದ ಸಭಾಂಗಣದಲ್ಲಿ ರಾಷ್ಟ್ರೀಯ ಅನುವಾದ ಮಿಷನ್​, ಭಾರತೀಯ ಭಾಷೆಗಳ ಸಂಸ್ಥಾನ ಹಾಗೂ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 3 ದಿನಗಳ ಅನುವಾದ ಕೌಶಲಾಭಿವೃದ್ಧಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ ಮತ್ತು ಯಂತ್ರಾನುವಾದದ ಕಾಲಘಟ್ಟ ಇದು. ಈ ತಂತ್ರಜ್ಞಾನವನ್ನು ಬಳಸಿ ಅನುವಾದ ಮಾಡಿದರೂ ಅದನ್ನು ಪರಿಷ್ಕರಿಸುವುದು ಅತ್ಯಗತ್ಯ ಎಂದರು.
ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮಾನವ ಅನುವಾದಕರಿಗೆ ಬೇಡಿಕೆ ಅಥವಾ ಕೆಲಸ ಇಲ್ಲದೇ ಹೋಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಅಂಕಿ-ಅಂಶಗಳ ಪ್ರಕಾರ ಅನುವಾದಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಪ್ರಸ್ತುತ ದಿನಗಳಲ್ಲಿ ಎಲ್ಲ ವಲಯಗಳಲ್ಲೂ ಅನುವಾದದ ಅಗತ್ಯವಿರುವುದರಿಂದ, ಆಯಾ ಕ್ಷೇತ್ರಗಳ ಪರಿಣಿತರು ಅನುವಾದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ. ಆಕರ ಪಠ್ಯ ಮತ್ತು ಸ್ವೀಕಾರ ಪಠ್ಯಗಳ ಸೂಕ್ತ ಬಳಕೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದೇ ಈ ಕಾರ್ಯಾಗಾರದ ಪ್ರಮುಖ ಉದ್ದೇಶ ಎಂದು ತಿಳಿಸಿದರು.
ಅನುವಾದ ಎಂದರೆ ಕೇವಲ ಪದದಿಂದ ಪದಕ್ಕೆ ಭಾಷೆ ಬದಲಾಯಿಸುವುದಲ್ಲ. ಅದರಲ್ಲಿನ ಭಾವನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅದಕ್ಕೆ ಹೊಸ ರೂಪವನ್ನು ನೀಡುವುದಾಗಿದೆ. ತಂತ್ರಜ್ಞಾನದ ಮೂಲಕ ನಾವು ಪಾರಿಭಾಷಿಕ ಪದಗಳನ್ನು ಬಳಸಿಕೊಳ್ಳಬಹುದೇ ಹೊರತು, ಕೇವಲ ತಂತ್ರಜ್ಞಾನವೇ ಪಾರಿಭಾಷಿಕ ಪದಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ವಿವಿ ಕಲಾ ನಿಕಾಯದ ಡೀನ್​ ಪ್ರೊ. ಕೆ. ಜಿ. ಪರಶುರಾಮ ಹೇಳಿದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಎಚ್​.ಎಸ್​.ಮೋಹನ್​ ಮಾತನಾಡಿ, ಭಾಷೆ ಎಂಬುದು ಕೇವಲ ಸಂವಹನದ ವಾಹಕವಲ್ಲ, ಅದೊಂದು ಸಾಂಸ್ಕೃತಿಕ ಜಗತ್ತು. ಅದನ್ನು ಓದಿ ಆಳವಾಗಿ ಅರ್ಥೈಸಿಕೊಳ್ಳಲು ಅನುವಾದದ ನೆರವು ಬೇಕೇ ಬೇಕು. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಹೆಚ್ಚಾಗಬೇಕು ಹಾಗೂ ಸಾಹಿತ್ಯದ ಬಗೆಗಿನ ಆಲೋಚನಾ ಕ್ರಮಗಳು ಬದಲಾಗಬೇಕು. ಜ್ಞಾನ ಎಂಬುದು ಒಂದೇ ಕಡೆ ಸ್ಥಾಪಿತವಾಗಿರಬಾರದು, ಅದು ಸದಾ ಹಂಚಲ್ಪಡಬೇಕು ಎಂದರು.
ರಾಷ್ಟ್ರೀಯ ಅನುವಾದ ಮಿಷನ್​ ಅಧಿಕಾರಿ ಡಾ. ತಾರೀಖ್​ ಖಾನ್​ ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ.ಕೆ.ವಿ.ಸಿಬಂತಿ ಪದ್ಮನಾಭ ಸ್ವಾಗತಿಸಿದರು.
ಎನ್​ಟಿಎಂ ಸಂಪನ್ಮೂಲ ವ್ಯಕ್ತಿ ಡಾ. ಛಾಯಾದೇವಿ ವಂದಿಸಿದರು. ಹಿರಿಯ ವಿದ್ವಾಂಸರಾದ ಡಾ. ಎಸ್​. ಪಿ. ಪದ್ಮಪ್ರಸಾದ್​, ಡಾ. ಎಂ.ಮಂಗಳಾಗೌರಿ, ಹಾಗೂ ಟಿ.ಎಸ್​.ಪ್ರಭಾಸ್​ ಪಂಡಿತ್​ ಮೊದಲನೇ ದಿನದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
ಅನುವಾದ ಕೇವಲ ಭಾಷಾ ಪಂಡಿತರಿಗೆ ಮಾತ್ರ ಸೀಮಿತವಾದುದಲ್ಲ. ಅನುವಾದ ಮಾಡುವಾಗ ಪಾರಿಭಾಷಿಕ ಮತ್ತು ಸ್ಥಳಿಯ ಭಾಷಾ ಸೊಗಡನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮ ಭಾಷೆಯಿಂದ ಮತ್ತೊಂದು ಭಾಷೆಗೆ ಇದ್ದದ್ದನ್ನು ಇದ್ದ ಹಾಗೆಯೇ ತರ್ಜುಮೆ ಮಾಡುವುದು ಕಷ್ಟ್ಟಸಾಧ್ಯ, ಆದರೆ, ಅನ್ಯಭಾಷೆಯಿಂದ ನಮ್ಮ ಭಾಷೆಗೆ ಅದೇ ರೂಪದಲ್ಲಿ ತರುವುದು ಸುಲಭವಾಗುತ್ತದೆ.
ಡಾ.ಬಿ.ಜನಾರ್ದನ ಭಟ್​
ಹಿರಿಯ ವಿದ್ವಾಂಸ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net