ವೃತ್ತಿಯಲ್ಲಿ ನಿಷ್ಠೆ ಇದ್ದರೆ ಆದರ್ಶ ವ್ಯಕ್ತಿಗಳಾಗಬಹುದು

ತುಮಕೂರಿನ ಎಸ್​ಐಟಿಯಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆ ನೌಕರರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ  ಅಭಿನಂದನಾ ಸಮಾರಂಭದಲ್ಲಿ ಪ್ರೊ.ಬಿ.ಗಂಗಾಧರಯ್ಯಗೆ "ಗುರುಸೇವಾ ಭೂಷಣ' ಬಿರುದು ನೀಡಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸನ್ಮಾನಿಸಿದರು.
ತುಮಕೂರಿನ ಎಸ್​ಐಟಿಯಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆ ನೌಕರರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರೊ.ಬಿ.ಗಂಗಾಧರಯ್ಯಗೆ "ಗುರುಸೇವಾ ಭೂಷಣ' ಬಿರುದು ನೀಡಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸನ್ಮಾನಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರೊ. ಗಂಗಾಧರಯ್ಯ ಅಭಿನಂದನಾ ಸಮಾರಂಭ
  • ಸಿದ್ದಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಶ್ರೀ
  • ಗುರುಸೇವಾ ಭೂಷಣ ಬಿರುದು ಪ್ರದಾನ
ತುಮಕೂರು: ವೃತ್ತಿಯಲ್ಲಿ ಬದ್ಧತೆ, ನಿಷ್ಠೆ, ಸೇವಾ ಮನೋಭಾವ ಹೊಂದಿರುವವರು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು.
ನಗರದ ಎಸ್​ಐಟಿ ಬಿರ್ಲಾ ಸಭಾಂಗಣದಲ್ಲಿ ಶನಿವಾರ ಸಿದ್ಧಗಂಗಾ ವಿದ್ಯಾಸಂಸ್ಥೆ ನೌಕರರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರೊ.ಬಿ.ಗಂಗಾಧರಯ್ಯ ಅಭಿನಂದನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಪವಿತ್ರವಾದದ್ದು, ಆ ವೃತ್ತಿಗೆ ಚ್ಯುತಿ ಬಾರದಂತೆ ಗಂಗಾಧರಯ್ಯ (ಬಿಜಿ) ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಆದರ್ಶರೆನಿಸಿದ್ದಾರೆ ಎಂದರು.
ಉತ್ತಮ ಶಿಕ್ಷಕ ಯಾವತ್ತೂ ಉತ್ತಮ ಓದುಗನಾಗಿರುತ್ತಾನೆ ಎನ್ನುವುದಕ್ಕೆ ಬಿಜಿ ಸಾಕ್ಷಿ. ಇವರು ಇವತ್ತಿಗೂ ಅತ್ಯತ್ತಮ ಪುಸ್ತಕ ಓದುಗರಾಗಿದ್ದಾರೆ. ಎಸ್​.ಎಲ್​. ಭೈರಪ್ಪರ ಎಲ್ಲಾ ಕಾಂದಂಬರಿಗಳನ್ನು ಸಂಪೂರ್ಣ ಓದಿರುವ ಓದುಗ ಈ ಊರಿನಲ್ಲಿ ಇದ್ದಾರೆ ಎಂದರೆ ಅದು ಗಂಗಾಧರಯ್ಯ ಮಾತ್ರವೇನೊ. ಸಿವಿಲ್​ ಇಂಜಿನಿಯರ್​ ಆದರೂ ಸಾಹಿತ್ಯ ಪ್ರೇಮಿಯಾಗಿದ್ದು ಓದುವ ಹವ್ಯಾಸ ಅವರನ್ನು ಆದರ್ಶ ಶಿಕ್ಷಕರನ್ನಾಗಿ ರೂಪಿಸಲು ಕಾರಣವಾಗಿರಬಹುದು. ಅವರಲ್ಲಿನ ಆದರ್ಶ ಗುಣಗಳು ಅನುಕರಣೀಯ. ಶ್ರೀಮಠದ ಸೇವಾಕಾರ್ಯಗಳಲ್ಲಿ ಸಕ್ರಿಯವಾಗಿ 86ನೇ ವಯಸ್ಸಿನಲ್ಲು ತೊಡಗಿಕೊಂಡಿರುವುದು ಪೂಜ್ಯ ಶಿವಕುಮಾರ ಶ್ರೀಗಳ ಮೇಲಿನ ಅಭಿಮಾನ, ಭಕ್ತಿ ಎಂದು ಹೇಳಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ ಮಾತನಾಡಿ, ಸರಳ, ಸಜ್ಜನಿಕೆ, ಕಾರ್ಯಬದ್ಧತೆ, ಶಿಸ್ತು ಗಂಗಾಧರಯ್ಯರ ವ್ಯಕ್ತಿತ್ವವನ್ನು ಮೇಲು ಮಟ್ಟಕ್ಕೆ ತಂದಿವೆ. ಇವರು ವಹಿಸಿಕೊಂಡ ಕೆಲಸವನ್ನು ಬಿಡದೆ ಶ್ರದ್ಧೆಯಿಂದ ಪೂರ್ಣಗೊಳಿಸುತ್ತಾರೆ. ಎಲ್ಲರೊಂದಿಗೆ ವಿನಯತೆಯಿಂದ ಬೆರೆಯುತ್ತಾರೆ. ಇವರ ಪುಸ್ತಕ ಓದುವ ಹವ್ಯಾಸ, ಸಾಹಿತ್ಯಾಸಕ್ತಿ ಇವರಲ್ಲಿ ಇಂತಹ ಆದರ್ಶ ಗುಣಗಳನ್ನು ಬೆಳೆಸಿದೆ ಎಂದರು.
ಇಂಜಿನಿಯರ್​ಗಳೆಂದರೆ ಕೇವಲ ಕಟ್ಟಡ ಕಟ್ಟುವುದಲ್ಲ, ಯಂತ್ರಗಳನ್ನು ತಯಾರು ಮಾಡುವುದಲ್ಲ, ಪ್ರೊ. ಗಂಗಾಧರಯ್ಯನವರಂತೆ ಆದರ್ಶ ವಿದ್ಯಾರ್ಥಿಗಳನ್ನು ತಯಾರು ಮಾಡಿ ಸಮಾಜಕ್ಕೆ ಕೊಡುಗೆಯಾಗಿ ನೀಡುವುದು. ಬಿಜಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯವನ್ನು ಬೋಧಿಸದೆ ಮೌಲ್ಯ, ನೀತಿ, ವೃತ್ತಿಪರತೆಯನ್ನೂ ಬಿತ್ತಿದ್ದಾರೆ. ಹಾಗಾಗಿ, ಅವರಿಂದ ಕಲಿತ ವಿದ್ಯಾರ್ಥಿಗಳು ದೊಡ್ಡ ಹುದ್ದೆಗಳಲ್ಲಿ ದೊಡ್ಡ ಸಾಧನೆ ಮಾಡುತ್ತಿದ್ದಾರೆ ಎಂದು ಎಸ್​ಐಟಿ ಸಿಇಒ ಡಾ.ಶಿವಕುಮಾರಯ್ಯ ಹೇಳಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯ ನಿರ್ವಾಹಕ ನಿರ್ದೇಶಕ ಜಯವಿಭವ ಸ್ವಾಮಿ, ಎಸ್​ಐಟಿ ಕಾಲೇಜು ಪ್ರಾಚಾರ್ಯ ಡಾ.ಎಸ್​.ವಿ. ದಿನೇಶ್​, ನಿವೃತ್ತ ಅಭಿಯಂತರ ಬಿ.ಮಹದೇವಯ್ಯ, ಸಿದ್ಧಗಂಗಾ ವಿದ್ಯಾಸಂಸ್ಥೆ ನೌಕರರ ಸೌಹಾರ್ದ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಡಾ.ಬಿ. ಅಡವೀಶ್​, ಹಳೆ ವಿದ್ಯಾರ್ಥಿಗಳಾದ ಬಿ.ಹೆಚ್​. ಕೃಷ್ಣಾ ರೆಡ್ಡಿ, ಡಿ.ಎಸ್​. ಚಂದ್ರಶೇಖರ್​, ಎಂ.ವಿ. ನಾಗಣ್ಣ, ಎನ್​.ಜಿ. ಪ್ರಭುಸ್ವಾಮಿ, ಬಿ.ನವೀನ್​ಕುಮಾರ್​ ಮತ್ತಿತರರು ಉಪಸ್ಥಿತರಿದ್ದರು.
ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್​ ವಿಭಾಗದಲ್ಲಿ ಬೋಧನೆ ಮಾಡುವುದಲ್ಲದೆ ಶ್ರೀಮಠದ ಬಹುತೇಕ ಕಟ್ಟಡಗಳ ನಿಮಾರ್ಣದಲ್ಲು ಪ್ರೊ.ಬಿ.ಗಂಗಾಧರಯ್ಯ ಕೊಡುಗೆ ಇದೆ. ಎಸ್​ಐಟಿ ಉತ್ತಮ ಕ್ಯಾಂಪಸ್​ ನಿಮಾರ್ಣದಲ್ಲಿ ಬಿಜಿ ಪಾತ್ರವಿದೆ. ಜ್ಞಾನ ಮತ್ತು ವಿನಯ ಗಂಗಾಧರಯ್ಯನವರ ದೊಡ್ಡ ಗುಣ.
ಡಾ.ಶಿವಕುಮಾರಯ್ಯ
ಎಸ್​ಐಟಿ ಸಿಇಒ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net