ಏಕಕಾಲದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Simultaneous wellness program
Simultaneous wellness program
Published on
ಕೊರಟಗೆರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ಆಯೋಜಿಸಿರುವ 'ಸ್ವಾಸ್ಥ್ಯ ಸಂಕಲ್ಪ' ಆನ್​ಲೈನ್​ ಜಾಗೃತಿ ಕಾರ್ಯಕ್ರಮವು ಕೊರಟಗೆರೆ ತಾಲೂಕಿನ ನಾಲ್ಕು ಪ್ರಮುಖ ಶಾಲಾ&ಕಾಲೇಜುಗಳಲ್ಲಿ ಮಂಗಳವಾರ ಯಶಸ್ವಿಯಾಗಿ ನಡೆಯಿತು.
ಬೆಳಗ್ಗೆ 10.30ಕ್ಕೆ ಆರಂಭವಾದ ಈ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ, ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಅರಿವು ಪಡೆದರು. ರಾಜ್ಯದ ಸಾವಿರಕ್ಕೂ ಅಧಿಕ ಶಾಲಾ-&ಕಾಲೇಜುಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪುವ ಉದ್ದೇಶದಿಂದ ಆಯೋಜಿಸಲಾದ ಈ ಬೃಹತ್​ ಅಭಿಯಾನದಲ್ಲಿ ಯುವಜನರನ್ನು ಮಾದಕ ವ್ಯಸನದಿಂದ ದೂರವಿರಿಸಿ ಆರೋಗ್ಯಕರ, ಶಿಸ್ತಿನ ಹಾಗೂ ಮೌಲ್ಯಾಧಾರಿತ ಜೀವನದತ್ತ ಪ್ರೇರೇಪಿಸುವ ಸಂದೇಶವನ್ನು ನೀಡಲಾಯಿತು.
ಪಟ್ಟಣದ ಪ್ರಿಯದರ್ಶಿನಿ ಪದವಿಪೂರ್ವ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು, ಹೊಳವನಹಳ್ಳಿ, ಸರ್ಕಾರಿ ಪ್ರೌಢಶಾಲೆ, ಇರಕಸಂದ್ರ ಕಾಲನಿ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಕೇಂದ್ರಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪ್ರಿಯದರ್ಶಿನಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಬೆಂಗಳೂರು ನಗರ ಎಸ್​ಪಿ ಡಾ.ವೆಂಕಟೇಶ್​ ಪ್ರಸನ್ನ ಹಾಗೂ ಹೃದ್ರೋಗ ತಜ್ಞ ಡಾ.ದೇವಿ ಪ್ರಸಾದ್​ ಶೆಟ್ಟಿ ಮಾತನಾಡಿ, ಮಾದಕ ವಸ್ತುಗಳ ಉತ್ಪಾದನೆ, ಸಾಗಣೆ, ಯುವಜನರ ಮೇಲೆ ಅವುಗಳ ದುಷ್ಪರಿಣಾಮ, ಆರೋಗ್ಯ ಮತ್ತು ಸಾಮಾಜಿಕ ಜೀವನದ ಮೇಲೆ ಉಂಟಾಗುವ ಪರಿಣಾಮಗಳು ಹಾಗೂ ಮಾದಕ ವಸ್ತುಗಳ ನಿಯಂತ್ರಣಕ್ಕೆ ಜಾರಿಯಲ್ಲಿರುವ ಕಾನೂನುಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ವ್ಯಸನದಿಂದ ದೂರವಿರುವುದೇ ಆರೋಗ್ಯಕರ ಹಾಗೂ ಯಶಸ್ವಿ ಬದುಕಿನ ಮೊದಲ ಹೆಜ್ಜೆ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು, ಸೇವಾ ಪ್ರತಿನಿಧಿಗಳು ಹಾಗೂ ಯೋಜನೆಯ ಪದಾಧಿಕಾರಿಗಳು ಭಾಗವಹಿಸಿ, ಮಾದಕ ವ್ಯಸನಮುಕ್ತ ಸಮಾಜ ನಿಮಾರ್ಣಕ್ಕೆ ಎಲ್ಲರೂ ಕೈಜೋಡಿಸುವ ಸಂಕಲ್ಪ ಕೈಗೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net