ಸಿದ್ದಗಂಗಾಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಸಿದ್ದಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಕೊಡಮಾಡುವ "ಸಿದ್ದಗಂಗಾಶ್ರೀ' ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಶ್ರೀಮಠದ ಬೆಳವಣಿಗೆಯ ಪ್ರತಿ ಕೆಲಸದಲ್ಲು ಅವರ ಶ್ರಮ ಇದೆ. ಮಠದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅವರನ್ನೇ ಸಮರ್ಪಿಸಿಕೊಂಡಿದ್ದರು ಎಂದರು.
ಪರಮಪೂಜ್ಯ ಶಿವಕುಮಾರ ಶ್ರೀಗಳ ಮೇಲಿನ ಭಕ್ತಿ, ಶ್ರದ್ಧೆ, ಅಭಿಮಾನ, ಪ್ರೀತಿಯಿಂದ ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಈ ಸಮಾವೇಶದಲ್ಲಿ ಭಾಗಿಯಾಗಿದ್ದು ದೈಹಿಕ ಶ್ರಮ, ದೂರವನ್ನು ಗಮನಿಸಿದೆ ದೂರದೂರುಗಳಿಂದ ಹಿರಿಯರೆಲ್ಲಾ ಬಂದಿದ್ದೀರಾ. ನಿಮ್ಮನ್ನೆಲ್ಲಾ ನೋಡಿದ ಮೇಲೆ ಶಿವಕುಮಾರ ಶ್ರೀಗಳನ್ನೇ ಕಂಡಷ್ಟು ಖುಷಿಯಾಗಿದೆ. ಇದೊಂದು ಕೃತಜ್ಞತಾ ಸಭೆ ಅಂದರೆ ತಪ್ಪಾಗಲಾರದು ಎಂದು ತಿಳಿಸಿದರು.
ಮಕ್ಕಳಿಗೆ ಶಿಕ್ಷಣ ಕೊಡಬೇಕು ಅನ್ನುವುದೇ ಪೂಜ್ಯರ ಪರಮಗುರಿಯಾಗಿತ್ತು. ಗ್ರಾಮೀಣ ಮಕ್ಕಳಿಗೆ ವಿದ್ಯೆ ಕಲಿಸಬೇಕೆನ್ನುವುದು ಜೀವನ ಪರ್ಯಂತ ಶ್ರೀಗಳು ಪಾಲಿಸಿಕೊಂಡುಬಂದಿದ್ದರು. ಮಠದಲ್ಲಿ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ದಾಸೋಹ ನೀಡಿದ್ದಲ್ಲದೆ ಗ್ರಾಮೀಣಭಾಗದಲ್ಲಿ ಗ್ರಾಮಾಂತರ ಶಾಲೆಗಳನ್ನು ತೆರೆದು ಅವರಿಗೆ ಶಿತರನ್ನಾಗಿಸುವುದರ ಜತೆಗೆ ಸಂಸ್ಕಾರವನ್ನು ಕಲಿಸಿ ಉತ್ತಮ ಬದುಕು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಿದವರು ಶಿವಕುಮಾರ ಶ್ರೀಗಳು. ಶ್ರೀಗಳ ಆಶಯದಂತೆ ನಾವೆಲ್ಲಾ ಬದುಕೋಣ ಎಂದರು.
ಸಂಘಕ್ಕೆ ಯಾವ ನಿಧಿಯು ಬೇಡ. ಯಾರನ್ನು ಕೇಳಬಾರದು. ಶ್ರೀಮಠಕ್ಕೆ ಹಳೆಯ ವಿದ್ಯಾರ್ಥಿಗಳೇ ಒಂದು ನಿಧಿ. ಹಾಗಾಗಿ, ಪರಮಪೂಜ್ಯರ ಆಶಯದಂತೆ ವೈಯಕ್ತಿಕ, ಕೌಟುಂಬಿಕ ಜೀವನವನ್ನು ಉತ್ತಮವಾಗಿಟ್ಟುಕೊಂಡಿರುವ ಹಳೆಯ ವಿದ್ಯಾರ್ಥಿಗಳು ನೀವುಗಳು ವೃತ್ತಿಯಲ್ಲು ಪ್ರಾಮಾಣಿಕತೆ ತೋರಿ ಮಠದ ಕೀರ್ತಿಯನ್ನು ಬೆಳಗಿದ್ದೀರಾ. ಶ್ರೀಗಳ ಆಶೀರ್ವಾದ ಪಡೆದು ಬೆಳೆದಿರುವ ನೀವುಗಳ ಮಠಕ್ಕೆ ಬರುವುದೇ ನಮಗೆ ಪುಣ್ಯವೆಂದು ಭಾವಿಸಿದ್ದೀವಿ ಎಂದು ಶ್ರೀಗಳು ತಿಳಿಸಿದರು.
ಸಿದ್ದಗಂಗಾ ಶಿವಕುಮಾರ ಶ್ರೀ ಪ್ರಶಸ್ತಿ ಸ್ವೀಕರಿಸಿ ಮೈಸೂರಿನ ಡಾ.ಎಸ್.ಪಿ.ಉಮಾದೇವಿ ಹಾಗೂ ಹಿರಿಯ ತಜ್ಞವೈದ್ಯ ತುಮಕೂರಿನ ಡಾ.ಸಿ.ಶರತ್ ಕುಮಾರ್ ಮಾತನಾಡಿದರು.
ಕೆಎಸ್ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜಯವಿಭವ ಸ್ವಾಮಿ, ಸಂದ ಕಾರ್ಯದರ್ಶಿ ಕೆ.ಎಚ್.ಶಿವರುದ್ರಯ್ಯ, ಎಸ್.ಶಿವಕುಮಾರ್, ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಗಳಿದ್ದ ಕಾಲದಲ್ಲಿ ನಾವು ಹುಟ್ಟಿದ್ದೇ ಪುಣ್ಯ !
ದೇವರೇ ನಾನು ನಿನಗೆ ಕೃತಜ್ಞನಾಗಿರುತ್ತೇನೆ. ಶಿವಕುಮಾರ ಶ್ರೀಗಳಿದ್ದ ಕಾಲದಲ್ಲಿ ನಾವು ಹುಟ್ಟಿದ್ದೇ ಪುಣ್ಯ. ಅಂತಹ ಧನ್ಯತಾಭಾವ ಶ್ರೀಮಠದಲ್ಲಿ ಓದಿದ್ದ ಪ್ರತಿಯೊಬ್ಬ ವಿದ್ಯಾರ್ಥಿಗಿದೆ. ನೀವು ಶ್ರೀಗಳನ್ನು ಎಷ್ಟರ ಮಟ್ಟಿಗೆ ಕಾಣುತ್ತಿದ್ದರಾ ಅಂದರೆ ಒಂದು ಕಣ್ಣಿನಲ್ಲಿ ನಿಮ್ಮ ತಂದೆತಾಯಿ ಇದ್ದರೆ ಇನ್ನೊಂದು ಕಣ್ಣಿನಲ್ಲಿ ಶಿವಕುಮಾರ ಶ್ರೀಗಳಿದ್ದರು. ಅವರ ಮಾರ್ಗದರ್ಶನದಲ್ಲೇ ಬದುಕು ಕಟ್ಟಿಕೊಂಡಿದ್ದೀರಾ, ಶ್ರೀಮಠದ ಹೆಸರನ್ನು ಜಗತ್ತಿನೆಲ್ಲಡೆ ಪಸರಿಸಿದ್ದೀರಾ ಎಂದು ಸಿದ್ದಲಿಂಗ ಶ್ರೀಗಳು ಹೇಳಿದರು.
ಎಂಎನ್ಸಿಗೆ ಸಿದ್ದಗಂಗಾಶ್ರೀ ಪ್ರಶಸ್ತಿ
ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕರಾಗಿದ್ದ ಡಾ.ಎಂ.ಎನ್.ಚನ್ನಬಸಪ್ಪ ಅವರನ್ನು ಸಿದ್ದಗಂಗಾ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಶಿಕ್ಷಣ, ಆಡಳಿತ ಹಾಗೂ ಶ್ರೀಮಠಕ್ಕೆ ಸಲ್ಲಿಸಿದ ಜೀವಮಾನದ ಸಾಧನೆಯನ್ನು ಪರಿಗಣಿಸಿ ಚನ್ನಬಸಪ್ಪ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ನೀಡಲಾಯಿತು. ಎಂಎನ್ಸಿ ಪುತ್ರಿ ಹೇಮ ಅವರು ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು 1 ಲಕ್ಷ ರೂ., ನಗದು, ಅಭಿನಂದನಾಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಮೈಸೂರಿನ ಡಾ.ಎಸ್.ಪಿ.ಉಮಾದೇವಿ ಹಾಗೂ ಹಿರಿಯ ತಜ್ಞವೈದ್ಯ ತುಮಕೂರಿನ ಡಾ.ಸಿ.ಶರತ್ ಕುಮಾರ್ಗೆ ಸಿದ್ದಗಂಗಾ ಶಿವಕುಮಾರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ 25 ಸಾವಿರ ರೂ., ನಗದು, ಪ್ರಶಸ್ತಿಪತ್ರ, ಸ್ಮರಣಿಕೆ ಹೊಂದಿದೆ.
ಸಂಘಸಿರಿ ಪ್ರಶಸ್ತಿ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಂದ ಹಳೆಯ ವಿದ್ಯಾರ್ಥಿಗಳಾದ ದುಗ್ಗಹಟ್ಟಿಯ ಪಿ.ವೀರಭದ್ರಪ್ಪ, ತುಮಕೂರಿನ ಎಚ್.ಬಿ.ನಂಜುಂಡಯ್ಯ, ಎಂ.ಎಸ್.ದಶರಥರಾಮಯ್ಯ, ಗೆದ್ದಲಗಟ್ಟೆ ಎಂ.ಸಿದ್ದಯ್ಯ, ಬೆಂಗಳೂರಿನ ಜಿ.ನಾಗಸುಂದರ್, ದಾವಣಗೆರೆ ಸಿ.ಕೆ.ಸಿದ್ದಪ್ಪ ಅವರಿಗೆ ಸಂಘಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.