ತುಮಕೂರು ಜಿಲ್ಲಾ ಕಾಂಗ್ರೆಸ್​ಗೆ ನೂತನ ಸಾರಥಿ ಆಯ್ಕೆಗೆ ಕಸರತ್ತು

ತುಮಕೂರು ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ಸಭೆ
ತುಮಕೂರು ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ಸಭೆ
Published on

ಪ್ರಮುಖ ಮುಖ್ಯಾಂಶಗಳು

  • ಆ.17ರಂದು ಹೊಸ ಅಧ್ಯಕ್ಷರ ಘೋಷಣೆ ಸಾಧ್ಯತೆ
  • ಚುನಾವಣೆ ಮೂಲಕ ಆಯ್ಕೆಗೆ ಎಐಸಿಸಿ ಮಾರ್ಗಸೂಚಿ
  • ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ಅವಕಾಶ ಸಾಧ್ಯತೆ
ತುಮಕೂರು: ನಾಯಕರು ಸೂಚಿಸಿದವರು ಜಿಲ್ಲಾ ಅಧ್ಯಕ್ಷರಾಗಿ ನೇಮಕವಾದ ಇತಿಹಾಸ ಹೊಂದಿರುವ ಕಾಂಗ್ರೆಸ್​ ಪಕ್ಷದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಇದೇ ಮೊದಲ ಸಲ ಎಂಬಂತೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಚುನಾವಣೆ ಮೂಲಕ ಜಿಲ್ಲಾಧ್ಯಕ್ಷರ ಆಯ್ಕೆಗೆ ಮುಂದಾಗಿರುವ ಕೈ ಪಾಳಯದಲ್ಲಿ ಬಿರುಸಿನ ಚಟುವಟಿಕೆಗೆ ಕಾರಣವಾಗಿದೆ.
ತುಮಕೂರು ಜಿಲ್ಲಾ ಕಾಂಗ್ರೆಸ್​ಗೆ ನೂತನ ಸಾರಥಿ ನೇಮಕ ಸಂಬಂಧವಾಗಿ ಎಐಸಿಸಿ, ಕೆಪಿಸಿಸಿ ವತಿಯಿಂದ ನೇಮಕವಾಗಿರುವ ವೀಕ್ಷಕರು ಈಗಾಗಲೇ ತಾಲೂಕು ಮಟ್ಟದಲ್ಲಿ ಪಕ್ಷದ ಸಂಘಟನಾ ಸಭೆ ನಡೆಸಲಾರಂಭಿಸಿದ್ದಾರೆ. ಕಾರ್ಯಕರ್ತ ಅಭಿಪ್ರಾಯ ಪಡೆಯುತ್ತಿರುವ ವೀಕ್ಷಕರು ಸಲ್ಲಿಸುವ ವರದಿ ಆಧಾರದ ಮೇಲೆ ಮೂವರು ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ ಪಡೆಯಲಿದ್ದು ಆಗಸ್ಟ್​ 17ರಂದು ನೂತನ ಜಿಲ್ಲಾಧ್ಯಕ್ಷರ ಘೋಷಣೆಯಾಗುವ ಸಾಧ್ಯತೆಯಿದೆ.
ತುಮಕೂರು ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷರಾಗಿರುವ ಚಂದ್ರಶೇಖರಗೌಡ, ಗ್ಯಾರಂಟಿ ಸಮಿತಿ ಜಿಲ್ಲಾಮಟ್ಟದ ಅಧ್ಯಕ್ಷರಾಗಿಯೂ ಇರುವುದರಿಂದ ಅವರ ಬದಲಾವಣೆಗೆ ಜಿಲ್ಲೆಯ ಬಹುತೇಕ ಶಾಸಕರು, ಮಾಜಿ ಶಾಸಕರು ಒತ್ತಾಯಿಸಿದ್ದು ಜಿಲ್ಲೆಯಲ್ಲಿ ಯಾರೊಬ್ಬರ ಹಿಡಿತದಲ್ಲಿರದೆ ಸ್ವತಂತ್ರ$್ಯವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರುವ ನಾಯಕನನ್ನು ಜಿಲ್ಲಾಧ್ಯಕ್ಷನನ್ನಾಗಿ ನೇಮಿಸಬೇಕು ಎಂಬ ಅಭಿಪ್ರಾಯ ಕೈ ಪಾಳಯದಲ್ಲಿದೆ.
ಅಖಿಲ ಭಾರತ ಕಾಂಗ್ರೆಸ್​ ಸಮಿತಿ ವತಿಯಿಂದ ಜಿಲ್ಲಾ ಸಂಘಟನಾ ಸೃಜನ್​ ಅಭಿಯಾನ ಆರಂಭಿಸಿದ್ದು ಜಿಲ್ಲಾಧ್ಯಕ್ಷರ ನೇಮಕಕ್ಕೆ ಅಭಿಪ್ರಾಯ ಸಂಗ್ರಹಿಸಲು ನೇಮಿಸಿರುವ ವೀಕ್ಷಕರು ಜಿಲ್ಲೆಯಲ್ಲಿ ಸಭೆ ನಡೆಸಲಾರಂಭಿಸಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹುರಿಯಾಳುಗಳು ವೀಕ್ಷಕರ ಮನಗೆಲ್ಲಲು ಸಭೆಗಳಲ್ಲಿ ಬೆಂಬಲಿಗರೊಂದಿಗೆ ಹಾಜರಾಗುತ್ತಿದ್ದಾರೆ.
ಎಐಸಿಸಿ ವೀಕ್ಷಕಿ ಸಂಗೀತ ಬಿನಿವಾಲ್​, ಕೆಪಿಸಿಸಿ ವೀಕ್ಷಕ ಮಿಲಿಂದ್​ ಧರ್ಮಸೇನಾ, ವಿಜಯಕುಮಾರ್​, ವೀಕ್ಷಕರಾಗಿ ಆಗಮಿಸಿದ್ದು ತಾಲೂಕು ಮಟ್ಟದಲ್ಲಿ ಕಾಂಗ್ರೆಸ್​ ಪಕ್ಷದ ಸಂಘಟನಾ ಸಭೆ ಆಯೋಜಿಸಿ ಅಭಿಪ್ರಾಯ ಸಂಗ್ರಹಣೆ ಮಾಡಲಾರಂಭಿಸಿದ್ದಾರೆ. ಎಷ್ಟೇ ಸಭೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದರೂ ಡಿಸಿಎಂ ಡಾ.ಜಿ.ಪರಮೇಶ್ವರ ಸೂಚಿಸುವ ಅಭ್ಯರ್ಥಿಯೇ ಜಿಲ್ಲಾಧ್ಯಕ್ಷ ಸ್ಥಾನಕ್ಕೇರುವುದು ಫಿಕ್ಸ್​ ಎನ್ನಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಪದಾಧಿಕಾರಿಗಳು, ಮುಖಂಡರು ಯಾರೊಬ್ಬರ ಪರವಾಗಿಯೂ ಬ್ಯಾಟ್​ ಬೀಸುವ ಗೋಜಿಗೆ ಹೋಗುತ್ತಿಲ್ಲ.
ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿಸುವ ಬದಲಾಗಿ ಸರ್ಕಾರದ ನಿಗಮ ಅಥವಾ ಮಂಡಳಿಯಲ್ಲಿ ಆದಾಯವಿರುವ ಸ್ಥಾನಮಾನಕ್ಕೆ ಮುಖಂಡರು ಆಸೆಯಿಟ್ಟುಕೊಂಡಿರುವ ಕಾರಣದಿಂದ ಹಾಗೂ ಜಿಲ್ಲಾಧ್ಯಕ್ಷ ಸ್ಥಾನವನ್ನು ತೂಗಿಸಲು ಸಂಪನ್ಮೂಲ ಕೂಡ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ನಾಯಕತ್ವದಲ್ಲಿಯೂ ಸ್ಥಾನಕ್ಕೆ ಪೈಪೋಟಿ ಕಂಡುಬರುತ್ತಿಲ್ಲ.
ಈ ನಡುವೆ ಮುಂದಿನ ವಿಧಾನಸಭೆ ಚುನಾವಣೆಗೆ ಮುಂದಿನ ವರ್ಷದಿಂದಲೇ ತಯಾರಿ ಆರಂಭಿಸಬೇಕಿರುವ ಹಿನ್ನೆಲೆಯಲ್ಲಿ ಮುಂದಿನ ಮೂರು ವರ್ಷ ಜಿಲ್ಲಾಧ್ಯಕ್ಷ ಯಾರಾಗಲಿದ್ದಾರೆ ಎಂಬ ಕುತೂಹಲ ಜಿಲ್ಲೆಯಲ್ಲಿ ಸಹಜವಾಗಿಯೇ ಇದೆ. ಜಿಲ್ಲಾಧ್ಯಕ್ಷ ಸ್ಥಾನದ ಆಯ್ಕೆಗೆ ಎಐಸಿಸಿ ಚುನಾವಣೆ ಪ್ರಕ್ರಿಯೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಅಭಿಪ್ರಾಯ ಹೇಳಲು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಕಂಡುಬಂದಿದೆ.
ಒಕ್ಕಲಿಗರು ಮಂತ್ರಿಯಾದರೆ ಲಿಂಗಾಯತರಿಗೆ ಜಿಲ್ಲಾಧ್ಯಕ್ಷ ಸ್ಥಾನ?
ಜಿಲ್ಲಾ ಕಾಂಗ್ರೆಸ್​ನಲ್ಲಿ ಜಿ.ಎಸ್​.ಬಸವರಾಜು ನಂತರ ಲಿಂಗಾಯತ ಸಮುದಾಯದವರು, ಎಸ್​.ಪಿ.ಮುದ್ದಹನುಮೇಗೌಡ ನಂತರ ಒಕ್ಕಲಿಗ ಸಮುದಾಯದವರಿಗೂ ತುಮಕೂರು ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷರಾಗಲು ಅವಕಾಶ ಸಿಕ್ಕಿಲ್ಲ.ಹಾಗಾಗಿ, ಈ ಬಾರಿ ಇವೆರಡು ಸಮುದಾಯಗಳೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಕ್ಕು ಮಂಡಿಸಿವೆ.
ತುಮಕೂರು ಜಿಲ್ಲೆಯ ಕಾಂಗ್ರೆಸ್​ ಪಾಲಿಗೆ ಡಾ.ಜಿ.ಪರಮೇಶ್ವರ ಅವರೇ ಹೈಕಮಾಂಡ್​ ಎನ್ನಿಸಿದ್ದು ಅವರ ಸೂಚಿಸುವ, ಅವರ ಹಿಂಬಾಲಕರಷ್ಟೇ ಇತ್ತೀಚಿನ ವರ್ಷಗಳಲ್ಲಿ ನಾಮ್​ಕೆವಾಸ್ತೆಗೆ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಜಿಲ್ಲೆಯಲ್ಲಿರುವ ಪ್ರಮುಖ ಮುಖಂಡರ ನಡುವಿನ ವೈಮನಸ್ಸು ಸರಿಪಡಿಸಿಕೊಂಡು ಪಕ್ಷ ಸಂಟಿಸಲು ಸಾಧ್ಯವಾಗಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಮೂರು ಪ್ರಮುಖ ಗುಂಪುಗಳಾಗಿರುವ ಕಾಂಗ್ರೆಸ್​ ಪಕ್ಷದಲ್ಲಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಸಮರ್ಥ ಸಾರಥಿ ಸಿಗಲಿ ಎಂಬುದು ಜಿಲ್ಲೆಯಲ್ಲಿರುವ ಪ್ರಾಮಾಣಿಕ ಕಾರ್ಯಕರ್ತರ ಆಭಿಲಾಷೆಯಾಗಿದೆ.
ಸಿಎಂ ಡಿಕೆಶಿ ಆಪ್ತ ಬಳಗದಲ್ಲಿರುವ ಒಕ್ಕಲಿಗ ಸಮುದಾಯದ ಎಸ್​.ಆರ್​.ಶ್ರೀನಿವಾಸ್​ ಮಂತ್ರಿ ಸ್ಥಾನಕ್ಕೆ ಆಯ್ಕೆಯಾದರೆ ಲಿಂಗಾಯತ ಸಮುದಾಯಕ್ಕೆ ತುಮಕೂರು ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಬಗ್ಗೆಯೂ ಜಿಲ್ಲೆಯಲ್ಲಿ ಚರ್ಚೆಯಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​ ಹಿಂದುಳಿದ ವರ್ಗಕ್ಕೆ ಮತ್ತೊಂದು ಅವಕಾಶ ಸಿಗಲಿ ಎಂದೇಳಿದ್ದಾರೆ ಎಂಬ ಮಾತೂ ಇದೆ.
ದಲಿತ ಸಮುದಾಯದ ಡಾ.ಜಿ.ಪರಮೇಶ್ವರ್​ ಉಪಮುಖ್ಯಮಂತ್ರಿಯಾಗಿ, ಹಿಂದುಳಿದ ವರ್ಗದ ಚಂದ್ರಶೇಖರಗೌಡ ಜಿಲ್ಲಾಧ್ಯಕ್ಷ ಸ್ಥಾನದಲ್ಲಿರುವ ಕಾರಣದಿಂದ ಅವಕಾಶ ವಂಚಿತ ಸಮುದಾಯಗಳನ್ನು ಪರಿಗಣಿಸುವ ಮೂಲಕ ಕಾಂಗ್ರೆಸ್​ ಸಾಮಾಜಿಕ ನ್ಯಾಯದ ಆಶಯ ಉಳಿಸಿಕೊಳ್ಳಬೇಕಿದೆ.
ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಮರ್ಥರ ಆಯ್ಕೆಗೆ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ, ಕಾರ್ಯಕರ್ತರು ನೇರವಾಗಿ ಅಭಿಪ್ರಾಯ ತಿಳಿಸಲು ಅವಕಾಶವಿದೆ. ಆಗಸ್ಟ್​ 17ರಂದು ನೂತನ ಅಧ್ಯಕ್ಷರ ಘೋಷಣೆಯಾಗಲಿದೆ. ಪಕ್ಷ ಸಂಘಟನೆಗೆ ಸಮರ್ಥ ಎನಿಸುವ ವ್ಯಕ್ತಿಗಳ ಹೆಸರನ್ನು ಹೆಸರಿಸುವ ಮೂಲಕ ರಾಹುಲ್​ ಗಾಂಧಿ ಅವರ ಆಶಯ ಈಡೇರಿಸುವ ಕೆಲಸ ಮಾಡುತ್ತೇವೆ.
ಸಂಗೀತ ಬೇನಿವಾಲ್​
ಎಐಸಿಸಿ ವೀಕ್ಷಕಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net