ದೈವಿವನ ಮರಡಿಗುಡ್ಡ ವೀಕ್ಷಿಸಿದ ಮಕ್ಕಳು

ಶಿರಾ ತಾಲೂಕು ಮರಡಿಗುಡ್ಡದಲ್ಲಿ ಶಾಲಾ ಮಕ್ಕಳ ಪ್ರವಾಸ
ಶಿರಾ ತಾಲೂಕು ಮರಡಿಗುಡ್ಡದಲ್ಲಿ ಶಾಲಾ ಮಕ್ಕಳ ಪ್ರವಾಸ
Published on

ಪ್ರಮುಖ ಮುಖ್ಯಾಂಶಗಳು

  • ಸ್ಥಳೀಯ ಗುಡ್ಡದಲ್ಲಿ ಅಧ್ಯಯನ ಪ್ರವಾಸ
  • ಶಾಲಾ ಮಕ್ಕಳ ಕುತೂಹಲ ಹೆಚ್ಚಿಸಿದ ಮರಡಿಗುಡ್ಡ
  • ಬ್ರಹ್ಮಸಂದ್ರ ಸರ್ಕಾರಿ ಶಾಲೆಯ ಮಕ್ಕಳು
ತುಮಕೂರು: ಸರ್ ಎನಿದು...? ಏಕೆ ಸರ್ ಹೀಗಿದೆ...? ಇದು ಯಾವ ಮರ ಸರ್, ಇಲ್ಲಿ ಹುಲಿ, ಚಿರತೆ, ಕರಡಿಗಳು ಬರುತ್ತವಾ ಸರ್, ಈ ಬೀಜ ಯಾವ ಮರದ್ದು ಸರ್, ಈ ಜೇಡದ ಹೆಸರೇನು ಸರ್??? ಮರದ ಮೇಲೆ ಇರುವ ಪಕ್ಷಿ ಯಾವುದು ಸರ್......
ಹೀಗೆ ಅಲ್ಲಿ ಪ್ರಶ್ನೆಗಳ ಸುರಿಮಳೆಯೇ ಇತ್ತು, ಪ್ರಶ್ನೆಗಳು ನಿಸರ್ಗ ನಡಿಗೆಯ ಸಂದರ್ಭದಲ್ಲಿ ನಮ್ಮನ್ನು ಪರಿಸರದ ಬಗ್ಗೆ ಹೇಳಲು, ಹುಡುಕಾಟ ಮಾಡಲು, ಕಲಿಯಲು ಉತ್ತೇಜನ ನೀಡಿದವು. ಶಿರಾ ತಾಲೂಕು ಬ್ರಹ್ಮಸಂದ್ರ ಸರ್ಕಾರಿ ಶಾಲೆಯ ಮಕ್ಕಳ ಮರಡಿಗುಡ್ಡ ಪ್ರವಾಸ ಮಕ್ಕಳಿಗೆ ವಿಸ್ಮಯ ಲೋಕ ಪರಿಚಯಿಸಿತು.
ನಾವು ಶಾಲೆಗಳಿಗೆ ಹೋಗಿ ಪರಿಸರದ ಬಗ್ಗೆ ಅರಿವು ಮೂಡಿಸುವುದು ಒಂದು ಮಾರ್ಗವಾದರೆ, ಶಿಕ್ಷಣ ಇಲಾಖೆ ಶಾಲೆಯ ಇಕೋ ಕ್ಲಬ್ ಕಾರ್ಯಕ್ರಮ ಮೂಲಕ ನಿಸರ್ಗ ನಡಿಗೆ ಆಯೋಜನೆ ಮಾಡಿ ಮಕ್ಕಳಿಗೆ ಪರಿಸರದೊಟ್ಟಿಗೆ ಮಿಂದೇಳಲು ಅವಕಾಶ ನೀಡಿದ್ದು ಮತ್ತೊಂದು ಪರ್ಯಾಯ ಮಾರ್ಗವಾಗಿದೆ.
ನಿಸರ್ಗ ನಡಿಗೆಯಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳುವುದರ ಜೊತೆಗೆ ಪರಿಸರದ ಬಗ್ಗೆ ವೇದನಾಶೀಲರನ್ನಾಗಿಸಲು ಬಹಳ ಸಹಕಾರಿಯಾಗಿದೆ ಎಂದು ರಂಗನಾಥಪುರ ಗಸ್ತು ಅರಣ್ಯದ ಗಸ್ತು ಅರಣ್ಯ ಪಾಲಕ ಗೋವಿಂದರಾಜು ಅಭಿಪ್ರಾಯಪಟ್ಟರು.
ಬೇಸಿಗೆ ಸಮಯದಲ್ಲಿ ಅರಣ್ಯಕ್ಕೆ ಬೀಳುವ ಬೆಂಕಿಯನ್ನು ನಿಯಂತ್ರಿಸಲು ಬೆಂಕಿಗೆರೆಗಳನ್ನು ನಿರ್ಮಿಸಲಾಗುತ್ತಿದೆ. ಅರಣ್ಯಕ್ಕೆ ಮಾನವರು ಹಾಕುವ ಬೆಂಕಿಯಿಂದ ಅಪಾರ ನಷ್ಟವು ಉಂಟಾಗುತ್ತಿದೆ. ಜೊತೆಗೆ ಪ್ರಾಣಿಗಳ, ಪಕ್ಷಿಗಳ, ಕೀಟಗಳ ಆವಾಸಸ್ಥಾನಕ್ಕೆ ಧಕ್ಕೆಯಾಗುತ್ತದೆ ಎಂಬುದನ್ನು ವಿವರಿಸುತ್ತಾ ನಿಸರ್ಗ ನಡಿಗೆಯಲ್ಲಿ ಕಾಡಿನಲ್ಲಿರುವ ಮರಗಳನ್ನು ತೋರಿಸಿ ಅವುಗಳ ಹೆಸರು, ವೈಜ್ಞಾನಿಕ ಹೆಸರುಗಳನ್ನು ತಿಳಿಸಿದರು.
ನಿಸರ್ಗ ನಡಿಗೆಯಲ್ಲಿ ಚಿಗುರು‌ ಯುವಜನ ಸಂಘದ ಅಧ್ಯಕ್ಷರಾದ ಮಂಜುನಾಥ್ ಅಮಲಗೊಂದಿ ಮಾತನಾಡಿ, ಕಾಡುಗಳನ್ನು ಕಾರ್ಬನ್ ಸಿಂಕ್ ಗಳೆಂದು ಎಂದು ಕರೆಯಲಾಗುತ್ತದೆ. ಮಾನವರು ಉಂಟು ಮಾಡುತ್ತಿರುವ ಕಾರ್ಬನ್ ಡೈಆಕ್ಸೈಡ್ ಅನ್ನು ನಿಸ್ವಾರ್ಥದಿಂದ ಎಳೆದುಕೊಂಡು ಜಾಗತಿಕ ತಾಪಮಾನವನ್ನು ನಿಯಂತ್ರಿಸುವಲ್ಲಿ ಕಾಡುಗಳು ಮಹತ್ತರವಾದ ಪಾತ್ರವನ್ನು ವಹಿಸಿವೆ ಎಂದರು.
ಜೊತೆಗೆ ಕಾಡುಗಳು ವನ್ಯಜೀವಿಗಳ ಆವಾಸಸ್ಥಾನಗಳಾಗಿದ್ದು ತನ್ನ ಒಡಲಲ್ಲಿ ಅಸಂಖ್ಯಾತ ಜೀವರಾಶಿಗಳಿಗೆ ಆಶ್ರಯವನ್ನು ನೀಡಿವೆ. ಜಾಗತಿಕ ವನ್ಯಜೀವಿಗಳ ನಿಧಿ ಸಂಸ್ಥೆಯ ವರದಿಯ ಪ್ರಕಾರ ಇತ್ತೀಚಿನ 50 ವರ್ಷಗಳಲ್ಲಿ ಅರಣ್ಯದಲ್ಲಿ ನಡೆಸುತ್ತಿರುವ ಮಾನವರ ಚಟುವಟಿಕೆಗಳಿಂದ ಶೇ.69 ರಷ್ಟು ವನ್ಯಜೀವಿಗಳು ನಾಶವಾಗಿವೆ. ಕಾಡುಗಳಿರುವುದು ಕೇವಲ ಮಾನವರಿಗಷ್ಟೇ ಎಂಬ ಸ್ವಾರ್ಥವನ್ನು ಬಿಟ್ಟು ಪರಿಸರದೊಟ್ಟಿಗೆ ಸಾಮರಸ್ಯದಿಂದ ಮನುಷ್ಯರೆಲ್ಲಾ ಬದುಕಬೇಕಿದೆ. ಜೊತೆಗೆ ಕಾಡುಗಳು ಜೀವವೈವಿಧ್ಯತೆಯ ತಾಣಗಳಾಗಿದ್ದು ಅದನ್ನು ಸಂರಕ್ಷಣೆ ಮಾಡಬೇಕಿರುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ ಎಂದರು.
ನಮ್ಮ ಶಾಲೆಯ ಮಕ್ಕಳು ಈ ನಡಿಗೆಯಲ್ಲಿ ಪರಿಸರದ ಬಗೆಗಿನ ಸೂಕ್ಷ್ಮ ಅಂಶಗಳನ್ನು, ಪ್ರಕೃತಿಯಲ್ಲಿನ ವಿಸ್ಮಯಗಳನ್ನು ವನದೇವತೆಯ ಮಡಿಲಲ್ಲೇ ತಿಳಿಯಲು ಸಾಧ್ಯವಾಯಿತು. ಈ ಅವಕಾಶವನ್ನು ನಮ್ಮ ಶಾಲೆಯ ಮಕ್ಕಳಿಗೆ ಇಕೋಕ್ಲಬ್ ಕಾರ್ಯಕ್ರಮದ ಮೂಲಕ ನೀಡಿರುವ ಶಿಕ್ಷಣ ಇಲಾಖೆಯ ನಡೆ ಉತ್ತಮವಾಗಿದೆ ಎಂದು ಧನ್ವಂತರಿ ಇಕೋ ಕ್ಲಬ್ ಕಾರ್ಯದರ್ಶಿ ಪ್ರತಿಭಾ ತಿಳಿಸಿದರು.
ಈ ನಿಸರ್ಗ ನಡಿಗೆಯಲ್ಲಿ ಶಾಲೆಯ ಶಿಕ್ಷಕಿ ಜ್ಯೋತಿ, ಅರಣ್ಯ ಇಲಾಖೆಯ ಸಿಬ್ಬಂದಿ ರಂಗಪ್ಪನವರು, ಚಿಗುರು ಯುವಜನ ಸಂಘದ ಸದಸ್ಯೆ ಸಿ.ಜೆ.ಯಶೋಧ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net