ಕಳೆಗಟ್ಟದ ಸಮ್ಮೇಳನದಲ್ಲಿ ಕಾರಣಗಳಿಗೆ ಹುಡುಕಾಟ

ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಪುಸ್ತಕ ಮಳಿಗೆಯಲ್ಲಿ ಕಾಣಿಸಿಕೊಂಡರು.
ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಪುಸ್ತಕ ಮಳಿಗೆಯಲ್ಲಿ ಕಾಣಿಸಿಕೊಂಡರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಲಾ ವಾರ್ಷಿಕೋತ್ಸವ ಸ್ವರೂಪ ಪಡೆದ ಸಮ್ಮೇಳನ
  • ಸಾಹಿತ್ಯಾಸಕ್ತರ ಬರ ನೀಗಿಸಲು ವಿದ್ಯಾರ್ಥಿಗಳ ಮೊರೆ
  • ಜಾತ್ರೆಯಂತೆ ಮುಗಿದ ಸಮ್ಮೇಳನದಲ್ಲಿ ಉಳಿದಿದ್ದು ಕಸ
 ಶಾಲಾ ವಾರ್ಷಿಕೋತ್ಸವ ಮಾದರಿಯಲ್ಲಿ ಸಾಂಸತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಮೂಲಕ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ನೆಪಮಾತ್ರಕ್ಕೆ ನಡೆಸಲಾಗಿದೆ. ಅವಕಾಶವಿದ್ದ 7 ಗೋಷ್ಠಿಗಳಲ್ಲಿ ಶಾಲಾ ಮಕ್ಕಳು ಕೂರುವಂತೆ ಮಾಡಿದ್ದ ಮಾಸ್ಟರ್​ ಪ್ಲಾನ್​ ಹಿಂದಿನಂತೆ ಸಾಹಿತ್ಯ ಸಮ್ಮೇಳನಗಳ ಗಾಂಭೀರ್ಯದ ಸ್ವರೂಪ ಬದಲಿಸಿ ಜಾತ್ರೆಗಳಂತೆ ಭಾಸವಾಯಿತು.
 ಜಿಲ್ಲಾ ಕಸಾಪ ಕೆಲವು ಪದಾಧಿಕಾರಿಗಳ ಸ್ವಾರ್ಥ, ರಾಜಕೀಯ ಪಕ್ಷಗಳೊಂದಿಗಿನ ಒಡನಾಟ ನೈಜ ಭಾಷಾಭಿಮಾನದ ಜನ ಸಮ್ಮೇಳನದಿಂದ ದೂರು ಉಳಿಯಲು ಮತ್ತೊಂದು ಕಾರಣ ಎಂದು ಸಮ್ಮೇಳನದಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿಯೊಬ್ಬರು ಅಸಮಧಾನ ಹೊರಹಾಕಿದರು. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ದೇಣಿಗೆ ನೀಡುವ ಸಿರಿವಂತರನ್ನು ಮಾತ್ರ ಮೆಚ್ಚಿಸಲು ವೇದಿಕೆಯಲ್ಲಿ ಅವಕಾಶ ಮಾಡಿಕೊಟ್ಟು ಸಮ್ಮೇಳನ ಆಯೋಜಿಸಿದಂತಾಯಿತು.
ಆಹ್ವಾನ ಪತ್ರಿಕೆಯಲ್ಲಿದ್ದ ಹೆಸರುಗಳ ಸಾಲಿನಲ್ಲಿ ತುಂಬಿ ತುಳುಕಿದ್ದ ಜನಪ್ರತಿನಿಧಿಗಳು ಸಮ್ಮೇಳನದಲ್ಲಿ ಕಾಣಿಸಲೇ ಇಲ್ಲ, ಗೋಷ್ಠಿಗಳಲ್ಲಿಯೂ ತುಮಕೂರು ಜಿಲ್ಲೆಯ ದೇಸಿಯತೆ, ಕೃಷಿ, ಮಹಿಳೆಯರು, ನೆಲ, ನಿಲುವುಗಳನ್ನು ಕಡೆಗಣಿಸಲಾಗಿತ್ತು. ಆಯೋಜಿಸಿದ್ದ ಏಳೆಂಟು ಗೋಷ್ಠಿಗಳಲ್ಲಿಯೂ ಪ್ರೇಕ್ಷಕರಂತೆಯೇ ವಿಷಯ ಪ್ರೌಢಿಮೆಯ ಕೊರತೆಯೂ ಕಾಣಿಸಿತು.
 ಕಸಾಪ ಸದಸ್ಯರಿಗೆ ಆಹ್ವಾನ ಪತ್ರಿಕೆ ತಲುಪಿಲ್ಲ., ಶಾಶ್ವತ ಸದಸ್ಯರನ್ನು ಕರೆಯುವ ಔದಾರ್ಯ ತೋರಿಲ್ಲ. ಇಂತಹ ಅಸಡ್ಡೆಗಳಿಂದ ಬೇಸತ್ತು ಕನ್ನಡ ಪ್ರೇಮಿಗಳು ಸಮ್ಮೇಳನ ಬಹಿಷ್ಕರಿಸಿದ್ದಾರೆ ಎಂಬ ಮಾತೂ ಕೇಳಿಬಂತು. ಜಿಲ್ಲೆಯಲ್ಲಿಯೂ ಚಿರಪರಿಚಿತರಾಗಿರುವ ಸಾಹಿತಿಗಳು, ಸಾಧಕರು ಎರಡೂ ದಿನ  ಸಮ್ಮೇಳದ ಕಡೆ ಸುಳಿಯದಿರುವುದು ಸಾಹಿತ್ಯಾಸಕ್ತರಲ್ಲಿ ಸಮ್ಮೇಳನದತ್ತ ಮುಖಮಾಡದಂತೆ ಪರಿಸ್ಥಿತಿ ಸೃಷ್ಟಿಸಿತು.  
ಶಿಕ್ಷಣ ಇಲಾಖೆಯಿಂದ ನಿವೃತ್ತರಾಗಿ ಜಿಲ್ಲಾ ಕಸಾಪ ಅಧ್ಯಕ್ಷರಾಗಿರುವ ಕೆ.ಎಸ್​.ಸಿದ್ದಲಿಂಗಪ್ಪ ಸಂಟನೆಗೆ ಕೆಲವು ಶಿಕ್ಷಕರ ಪಡೆ ಕಟ್ಟಿಕೊಂಡಿದ್ದು ಅವರನ್ನಷ್ಟೇ ಬಳಸಿಕೊಂಡು ಸಮ್ಮೇಳನ ಮಾಡುವಂತಾಯಿತು. ಸಮ್ಮೇಳನದಲ್ಲಿ ಜವಬ್ಧಾರಿ ಹೊತ್ತಿದ್ದವರೆಲ್ಲರೂ ಅವರವರ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಊಟ, ಉಪಚಾರ, ವೇದಿಕೆಯಲ್ಲಿ ಯಾವುದೇ ಲೋಪಗಳಾಗದಂತೆ ನೋಡಿಕೊಂಡರು.
  • 1.ವಿದ್ಯಾರ್ಥಿಗಳ ಕೊರತೆಯಿರುವ ಸರ್ಕಾರಿ ಶಾಲೆಗಳನ್ನು ಮುಚ್ಚದೆ, ಬಲಪಡಿಸಬೇಕು
  •  2.ತುಮಕೂರಿನಲ್ಲಿ ಜನಪದ ಲೋಕ ಸಂಗ್ರಹಾಲಯ ನಿರ್ಮಾಣ, ಕಲಾಗ್ರಾಮಕ್ಕಾಗಿ ಕಸಾಪಗೆ 5 ಎಕರೆ ಭೂಮಿಗೆ ಮನವಿ 
  • 3.ಆಯಾ ವರ್ಷ ಪ್ರಕಟವಾಗುವ ಎಲ್ಲಾ ಪುಸ್ತಕಗಳ ಖರೀದಿ ಹಾಗೂ ಸಕಾಲದಲ್ಲಿ ಹಣ ಬಿಡುಗಡೆ ಮೂಲಕ ಪುಸ್ತಕ ಸಂಸತಿಗೆ ಪ್ರೋತ್ಸಾಹ 
  • 4.ಜಿಲ್ಲೆಯಲ್ಲಿರುವ ಸ್ಮಾರಕಗಳ ರಕ್ಷಣೆ, ಮೂರ್ತಿಶಿಲ್ಪ, ಸ್ಮಾರಕ ಶಿಲ್ಪಗಳ ರಕ್ಷಣೆಗೆ ಸಂಗ್ರಹಾಲಯ ನಿಮಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net