ಅಚ್ಚುಕಟ್ಟು ಪ್ರದೇಶಕ್ಕೆ ಜಲಾಶಯದ ನೀರು!

Reservoir water for the Achukattu area!
Reservoir water for the Achukattu area!
Published on
ಹುಳಿಯಾರು: ದಶಕಗಳ ಇತಿಹಾಸವಿರುವ ಬೋರನಕಣಿವೆ ಜಲಾಶಯದ ಅಚ್ಚುಕಟ್ಟು ಭಾಗದ ರೈತರ ನಿರಂತರ ಮನವಿ ಹಾಗೂ ಒತ್ತಾಯಕ್ಕೆ ಕೊನೆಗೂ ಫಲ ಸಿಕ್ಕಿದೆ. ನೀರಿಗಾಗಿ ನಡೆಸಿದ ಬೃಹತ್​ ಸಭೆ ಹಾಗೂ ಅಧಿಕಾರಿಗಳ ಮೇಲೆ ತಂದ ಒತ್ತಡದ ಹಿನ್ನೆಲೆಯಲ್ಲಿ, ಮೇ 12ರಿಂದ ಜಲಾಶಯದಿಂದ ನೀರು ಬಿಡಲು ಶಾಸಕ ಸಿ.ಬಿ. ಸುರೇಶ್​ ಬಾಬು ಹಸಿರು ನಿಶಾನೆ ತೋರಿದ್ದಾರೆ.
ಜಲಾಶಯದಲ್ಲಿ 16 ಅಡಿಗಿಂತ ಹೆಚ್ಚು ನೀರು ಸಂಗ್ರಹವಾದರೆ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಕೃಷಿ ಚಟುವಟಿಕೆಗಾಗಿ ನೀರು ಹರಿಸಬೇಕು ಎಂಬ ನಿಯಮವಿದೆ. ಪ್ರಸ್ತುತ ಜಲಾಶಯದಲ್ಲಿ 19 ಅಡಿ ನೀರಿದ್ದರೂ ಅಧಿಕಾರಿಗಳು ನೀರು ಹರಿಸಲು ಮೀನಮೇಷ ನೋಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಹೊಯ್ಸಳಕಟ್ಟೆ ಭಾಗದ ರೈತರು ಬೃಹತ್​ ಸಭೆ ನಡೆಸಿ, "ನಮ್ಮ ಬೆಳೆಗಳು ಕಣ್ಣೆದುರೇ ಒಣಗುತ್ತಿವೆ, ಅಧಿಕಾರಿಗಳ ರ್ನಿಲಕ್ಷ$್ಯಕ್ಕೆ ನಾವು ಬಲಿಯಾಗಬೇಕೆ?" ಎಂದು ಗುಡುಗಿದ್ದರು.
ತೀ.ನಂ.ಶ್ರೀ ಭವನದಲ್ಲಿ ಸಾರ್ವಜನಿಕರ ದನಿ: ಇತ್ತ ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಹಾಗೂ ದಸೂಡಿ ಗ್ರಾಪಂ ವ್ಯಾಪ್ತಿಯ ಜನತೆ ತೀ.ನಂ.ಶ್ರೀ ಭವನದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ನೀರಿನ ಬವಣೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಕೇವಲ ಕೃಷಿಯಲ್ಲದೆ, ಜಾನುವಾರುಗಳಿಗೂ ಕುಡಿಯುವ ನೀರಿಲ್ಲದೆ ತೀವ್ರ ಸಂಕಷ್ಟ ಎದುರಾಗಿದೆ ಎಂದು ಶಾಸಕರಿಗೆ ಮನವಿ ಸಲ್ಲಿಸಿದರು.
ಜಲಾಶಯಕ್ಕೆ ಶಾಸಕರ ಭೇಟಿ: ರೈತರ ಆಕ್ರೋಶ ಹಾಗೂ ಸಾರ್ವಜನಿಕರ ಅಹವಾಲನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಸಿ.ಬಿ.ಸುರೇಶ್​ ಬಾಬು, ತಹಸೀಲ್ದಾರ್​ ಮಮತಾ ಹಾಗೂ ಇತರ ಅಧಿಕಾರಿಗಳೊಂದಿಗೆ ನೇರವಾಗಿ ಬೋರನಕಣಿವೆ ಜಲಾಶಯಕ್ಕೆ ಭೇಟಿ ನೀಡಿದರು. ನೀರಿನ ಮಟ್ಟವನ್ನು ಖುದ್ದು ಪರಿಶೀಲಿಸಿದ ಶಾಸಕರು, ರೈತರ ಬೇಡಿಕೆಯಂತೆ ಮಂಗಳವಾರ ಜಲಾಶಯದಿಂದ ನೀರು ಹರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೋರಾಟದಲ್ಲಿ ಭಾಗಿಯಾದ ಗ್ರಾಮಗಳು: ಹೊಯ್ಸಳಕಟ್ಟೆ, ಹೊನ್ನಯ್ಯನಪಾಳ್ಯ, ಜಡೆಯಪ್ಪನಪಾಳ್ಯ, ಮುತ್ತುಗದಹಳ್ಳಿ, ಬೆಳ್ಳಾರ, ಅಂಬಾರಪುರ, ರಾಮನಗರ ಹಾಗೂ ದಬ್ಬಗುಂಟಿ ಗ್ರಾಮಗಳ ನೂರಾರು ರೈತರು ಈ ಹೋರಾಟದಲ್ಲಿ ಕೈಜೋಡಿಸಿ ಯಶಸ್ಸು ಕಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net