ಕಾವೇರಿ ತಂತ್ರಾಂಶದಿಂದ ಸಾರ್ವಜನಿಕರಿಗೆ ಮೋಸ

Public deceived by Cauvery software
Public deceived by Cauvery software
Published on
ತುರುವೇಕೆರೆ: ನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿಗಳ ಮಾರಾಟ ಸೇರಿದಂತೆ ವಿವಿಧ ವಹಿವಾಟುಗಳನ್ನು ಕಾವೇರಿ ತಂತ್ರಾಂಶದ ಮೂಲಕ ಪೇಪರ್​ ಲೆಸ್​ ಮಾಡಲಾಗುತ್ತಿದ್ದು, ಇದು ಅಪಾಯದ ಮುನ್ಸೂಚನೆಯಾಗಿದೆ ಎಂದು ಜಿಲ್ಲಾ ಪತ್ರ ಬರಹಗಾರರ ಸಂಘದ ಸಂಘಟನಾಕಾರ ಬಿ.ಎನ್​.ಮಂಜುನಾಥ್​ ತಿಳಿಸಿದರು.
ಪಟ್ಟಣದ ಸಂಘದ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕಾವೇರಿ ತಂತ್ರಾಂಶ ಯೋಜನೆ ಜಾರಿಗೆ ಬಂದರೆ ಭೂ ಮಾಫಿಯಾದವರು ಮತ್ತು ಹ್ಯಾಕರ್ಸ್​ಗಳಿಗೆ ರತ್ನಗಂಬಳಿ ಹಾಕಿಕೊಟ್ಟಂತಾಗುತ್ತದೆ ಎಂದರು.
ಕಾಗದ ರಹಿತ ಡಿಜಿಟಲ್​ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಚಾಮರಾಜ ನಗರದಲ್ಲಿ ಜಾರಿಗೆ ತಂದಿದೆ. ಇದು ನಂತರ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಈ ಕಾನೂನು ರಾಜ್ಯಾದ್ಯಂತ ಜಾರಿಗೆ ಬಂದಲ್ಲಿ ಸಾರ್ವಜನಿಕರ ಗೋಳು ಹೇಳತೀರದು. ಈಗಿರುವ ವ್ಯವಸ್ಥೆಯಲ್ಲೇ ನೂರಾರು ತೊಂದರೆಗಳು ಇವೆ. ಇವುಗಳನ್ನು ಬಗೆಹರಿಸಲೇ ಹರಸಾಹಸ ಮಾಡಲಾಗುತ್ತಿದೆ. ಈಗ ಪೇಪರ್​ ಲೆಸ್​ ವ್ಯವಸ್ಥೆ ಜಾರಿಗೆ ಬಂದರೆ ಸಾರ್ವಜನಿಕರ ಆತಂಕ ಮತ್ತಷ್ಟು ಹೆಚ್ಚುತ್ತದೆ ಎಂದರು.
ಆಸ್ತಿ ಮಾರಾಟಗೊಂಡ ಬಗ್ಗೆಯಾಗಲಿ, ಖರೀದಿ ಮಾಡಿಕೊಂಡಿರುವ ಬಗ್ಗೆಯಾಗಲೀ ಭೌತಿಕ ಪತ್ರ ನೀಡುವುದಿಲ್ಲ. ಸಹಿಯನ್ನು ಭೌತಿಕವಾಗಿ ಮಾಡದೇ ಈ - ಸಹಿ ಮಾಡಿಸುವುದರಿಂದ ಅಮಾಯಕರನ್ನು ವಂಚಿಸಲು ರಹದಾರಿಯಾಗಲಿದೆ. ವಂಚಕರಿಗೆ ಸಲೀಸು ಮಾಡಿಕೊಟ್ಟಂತೆ ಆಗುತ್ತದೆ. ಇದರಿಂದ ಸರ್ಕಾರಕ್ಕೆ ಲಾಭವೇನೂ ಇಲ್ಲ. ಆದರೆ ಜನ ಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದರು.
ಈ ತಂತ್ರಾಂಶವನ್ನು ಕೂಡಲೇ ರಾಜ್ಯಸರ್ಕಾರ ಹಿಂಪಡೆಯಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಹೋರಾಟ ಅನಿವಾರ್ಯವಾಗಲಿದೆ. ಈ ಕುರಿತು ನ್ಯಾಯಾಲಯದಲ್ಲೂ ಪ್ರಶ್ನೆ ಮಾಡುವವರಿದ್ದೇವೆ. ಈಗಿನ ವ್ಯವಸ್ಥೆಯಲ್ಲಿ ಮಾರಾಟಗಾರರು ಮತ್ತು ಕೊಳ್ಳುವವರು ಎದುರು ಇದ್ದರೇ ಮೋಸ ಮಾಡಲಾಗುತ್ತಿದೆ. ಇನ್ನು ಪೇಪರ್​ ಲೆಸ್​ ಅಥವಾ ಇ&ತಂತ್ರಾಂಶ ದಿಂದ ವಹಿವಾಟು ನಡೆದರೆ ಸಾಕಷ್ಟು ವಂಚನೆಗಳು ನಡೆದು ಸೈಬರ್​ ಕ್ರೈಂ ಪೊಲೀಸರಿಗೆ ಹೆಚ್ಚು ಕೆಲಸ ಶುರುವಾಗಲಿದೆ ಎಂದು ಹೇಳಿದರು.
ನಿರ್ದೇಶಕರಾದ ಕೆ.ಗೋಪಿನಾಥ್​, ಬಿ.ಎನ್​.ಶಶಿಕುಮಾರ್​, ಕೆ.ಎಲ್​.ಕಲ್ಲೇಶ್​, ಬಿ.ಕಂಚೀರಾಯ, ಬಸವರಾಜು, ಬಲರಾಮಯ್ಯ, ಶಿವಕುಮಾರ್​, ಡಿ.ಎಸ್​.ಶಿವಣ್ಣ ಮತ್ತು ಪುಟ್ಟರಾಮಯ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net