ಶಾಲಾ ಸಮಯಕ್ಕೆ ಬಸ್​ ಸೌಲಭ್ಯ ಕಲ್ಪಿಸಿ

Provide bus facilities for school timings.
Provide bus facilities for school timings.
Published on
ಗುಬ್ಬಿ: ಶಾಲಾ&ಕಾಲೇಜು ಸಮಯಕ್ಕೆ ಸರಿಯಾಗಿ ಸಮರ್ಪಕ ಬಸ್​ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ಕಳ್ಳಿಪಾಳ್ಯ ಗೇಟ್​ ಸಮೀಪ ರಾಷ್ಟ್ರೀಯ ಹೆದ್ದಾರಿ-73 ತಡೆದ ವಿದ್ಯಾರ್ಥಿಗಳು, ರಸ್ತೆ ಮೇಲೆ ಕುಳಿತು ಪ್ರತಿಭಟಿಸಿದರು.
ಕಳ್ಳಿಪಾಳ್ಯ ಗೇಟ್​ನಿಂದ ಗುಬ್ಬಿ ಮತ್ತು ತುಮಕೂರು ಕಡೆಗೆ ಶಾಲೆ ಮತ್ತು ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಕಾದರೂ ಬಸ್​ ಬಾರದ ಹಿನ್ನೆಲೆ ಆಕ್ರೋಶಗೊಂಡು ದಿಢೀರ್​ ರಸ್ತೆಗಿಳಿದು ಸ್ಥಳಿಯ ಸಾರ್ವಜನಿಕರ ಸಹಕಾರದಲ್ಲಿ ಕೆಲಕಾಲ ಚತುಷ್ಪಥ ತಡೆದು ಆಕ್ರೋಶ ವ್ಯಕ್ತಪಡಿಸಿ, ಶಾಲೆ ಸಮಯಕ್ಕೆ ಬಸ್​ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಪ್ರತಿದಿನ ಈ ಮಾರ್ಗದಲ್ಲಿ ಹತ್ತಾರು ಬಸ್​ಗಳು ಓಡಾಡುತ್ತವೆ. ಆದರೆ ಸಂಚರಿಸುವ ಎಲ್ಲ ಕೆಎಸ್​ಆರ್​ಟಿಸಿ ಬಸ್​ಗಳು ಕಳ್ಳಿಪಾಳ್ಯ ಗೇಟ್​ ಬಳಿಯ ನಿಲ್ದಾಣದಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದೆ ವೇಗವಾಗಿ ತೆರಳುತ್ತಿವೆ. ಕೊನೆಯಲ್ಲಿ ಯಾವುದಾದರೂ ಒಂದು ಬಸ್​ ನಿಲ್ಲಿಸಿದರೆ ಅತಿಯಾದ ಜನಸಂದಣಿ ಇರುವುದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲಾ-&ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತಲುಪಲು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು.
ಜೆಡಿಎಸ್​ ಮುಖಂಡ ಕಳ್ಳಿಪಾಳ್ಯ ಲೋಕೇಶ್​ ಮಾತನಾಡಿ, ಕಳ್ಳಿಪಾಳ್ಯ, ಅಡಗೂರು, ಧೂಳನಹಳ್ಳಿ, ಹೊಸಪಾಳ್ಯ ಸೇರಿ ಐದಾರು ಹಳ್ಳಿಗಳಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಗುಬ್ಬಿ ಮತ್ತು ತುಮಕೂರಿಗೆ ತೆರಳುತ್ತಾರೆ. ಬಹುತೇಕ ಕೂಲಿ ಕಾರ್ಮಿಕರ ಬಡ ಮಕ್ಕಳು ಸರ್ಕಾರಿ ಬಸ್​ ಮೂಲಕ ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ. ಸರ್ಕಾರಿ ಬಸ್​ ಸಿಗದೇ ಹೋದರೆ ಮಕ್ಕಳು ಬೇರೆ ವಾಹನ ಇಲ್ಲಿ ಸಿಗಲ್ಲ. ನಿತ್ಯ ಶಾಲಾ ಕಾಲೇಜು ತಡವಾಗಿ ಹೋಗುವಂತಾಗಿದೆ. ಸಮಯಕ್ಕೆ ಸರಿಯಾಗಿ ಶಾಲೆಗೆ ಬರದಿದ್ದರೆ ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಲು ಶಾಲಾ ಕಾಲೇಜುಗಳಲ್ಲಿ ಹೇಳುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಮಕ್ಕಳು ಶಿಕ್ಷಣ ಮೊಟಕು ಆಗುತ್ತದೆ. ಗ್ಯಾರಂಟಿ ಹೆಸರಿನ ಬಿಟ್ಟಿ ಭಾಗ್ಯ ಯೋಜನೆ ಫಲ ನಮ್ಮ ಮಕ್ಕಳಿಗೆ ಸಮಯಕ್ಕೆ ಬಸ್​ ವ್ಯವಸ್ಥೆ ಇಲ್ಲವಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಗುಬ್ಬಿ ಸಿಪಿಐ ರಾಘವೇಂದ್ರ ನೇತೃತ್ವದ ಪೊಲೀಸ್​ ತಂಡ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಬಸ್​ ವ್ಯವಸ್ಥೆ ಮಾಡಲು ಸಾರಿಗೆ ಅಧಿಕಾರಿಗಳ ಜತೆ ಮಾತನಾಡುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪತಿಭಟನೆ ಹಿಂಪಡೆದರು..
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net