ತುಮಕೂರು ಜಿಲ್ಲೆಯ ಮರುನಾಮಕರಣ ಪ್ರಸ್ತಾಪ!

 ಡಾ.ಜಿ.ಪರಮೇಶ್ವರ
ಡಾ.ಜಿ.ಪರಮೇಶ್ವರ
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಉತ್ತರ ಜಿಲ್ಲೆ ಹೆಸರು ಮತ್ತೆ ಮುನ್ನಲೆಗೆ
  • ಪರಮ್​ ಹೇಳಿಕೆಗೆ ಜಾಲತಾಣದಲ್ಲಿ ವ್ಯಾಪಕ ವಿರೋಧ
  • ಮರುದಿನವೇ ವರಸೆ ಬದಲಿಸಿದ ಜಿಲ್ಲಾ ಉಸ್ತುವಾರಿ ಸಚಿವ
ತುಮಕೂರು: ತುಮಕೂರು ಜಿಲ್ಲೆಯ ಹೆಸರನ್ನು "ಬೆಂಗಳೂರು ಉತ್ತರ' ಎಂದು ಮರುನಾಮಕರಣ ಮಾಡಲು ಸರ್ಕಾರದ ಮುಂದೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಇಟ್ಟಿರುವ ಏಕಪಯ ನಿರ್ಧಾರಕ್ಕೆ ಜಿಲ್ಲೆಯೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಂಗಳವಾರ ತುಮಕೂರಿನಲ್ಲಿ ಆಯೋಜಿಸಿದ್ದ ಸರ್ಕಾರದ 3ನೇ ವರ್ಷದ ಸಂಭ್ರಮ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಉಪಸ್ಥಿತಿಯಲ್ಲಿ ಮಾತನಾಡಿದ್ದ ಡಾ.ಪರಮೇಶ್ವರ್​, ಕೇವಲ 60ಕಿಮೀ ದೂರದಲ್ಲಿರುವ ತುಮಕೂರನ್ನು ಬೆಂಗಳೂರಿನ ಒಂದು ಭಾಗವಾಗಿಸಬೇಕು. ರಾಮನಗರ, ಬಿಡದಿ ಮಾಡಿದಂತೆ ಬೆಂಗಳೂರು ದಣ ಮಾಡಿದಂತೆ, ತುಮಕೂರನ್ನು ಬೆಂಗಳೂರು ಉತ್ತರ ಎಂದು ಘೋಷಿಸಬೇಕು ಎಂದು ಮನವಿ ಮಾಡಿದ್ದರು.

2025ರ ಜೂನ್​ 9ರಂದು ತುಮಕೂರಿನಲ್ಲಿ ಮಾತನಾಡುವಾಗಲೂ ತುಮಕೂರು ಜಿಲ್ಲೆಯ ಹೆಸರನ್ನು ಬೆಂಗಳೂರು ಉತ್ತರ ಎಂದು ಮಾಡುವ ಚಿಂತನೆ ಸರ್ಕಾರದಲ್ಲಿದೆ ಎಂದು ಹೇಳಿಕೆ ನೀಡಿ ಆಕ್ರೋಕ ಬುಗಿಲೆದ್ದ ಕೂಡಲೇ ಎಚ್ಚೆತ್ತುಕೊಂಡು ಮರುದಿನವೇ ಉಲ್ಟಾ ಹೊಡೆದಿದ್ದರು. ಈಗ ಮತ್ತೊಮ್ಮೆ ಬಹಿರಂಗವಾಗಿಯೇ ವಿಷಯ ಪ್ರಸ್ತಾಪಿಸಿ, ನಾನು ಅಂತಹ ಮನವಿ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಆದರೆ, ಮಂಗಳವಾರ ಸಿಎಂ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪರಮೇಶ್ವರ ಮಾತನಾಡಿರುವ ವೀಡಿಯೋದಲ್ಲಿ ಜಿಲ್ಲೆಯ ಹೆಸರು ಬದಲಾವಣೆಗೆ ಮನವಿ ಮಾಡಿರುವುದು ಸ್ಪಷ್ಟವಾಗಿದ್ದು ಈಗಾಡುತ್ತಿರುವ ಕಣ್ಣಾಮುಚ್ಚಾಲೆಯ ಮರ್ಮ ತಿಳಿಯದಾಗಿದೆ. ಹೆಸರು ಬದಲಾವಣೆ ಮನವಿ ಸಂದರ್ಭದಲ್ಲಿ ರಾಮನಗರ, ಬಿಡದಿ ಮಾದರಿಯಲ್ಲಿ ಎಂದು ಪರಮೇಶ್ವರ್​ ಉಲ್ಲೇಖಿಸಿರುವುದರಿಂದ ಟೌನ್​ಶಿಪ್​, ರಿಯಲ್​ ಎಸ್ಟೇಟ್​ ಜತೆ ಉದ್ದೇಶಿತ ಮರುನಾಮಕರಣ ಪ್ರಸ್ತಾವನೆ ಬೆಸೆದುಕೊಂಡಿರುವ ಶಂಕೆ ಮೂಡಿಸಿದೆ.

ಮರುನಾಮಕರಣದ ಬಗ್ಗೆ ಪರಮೇಶ್ವರ್​ ಮಾತನಾಡಿದ ವೀಡಿಯೋ ವೈರಲ್​ ಆಗಿದ್ದೇ ತಡ ಜಿಲ್ಲೆಯ ಎಲ್ಲಾ ವಲಯದಿಂದಲೂ ವ್ಯಾಪಕ ವಿರೋದ ವ್ಯಕ್ತವಾಗಿದೆ. ಬಿಜೆಪಿ ಶಾಸಕರು ಸುದ್ದಿಗೋಷ್ಠಿ ನಡೆಸಿ ಈ ಪ್ರಸ್ತಾವನೆಯನ್ನು ವಿರೋಧಿಸಿದ್ದಾರೆ. ಪಾಲಿಕೆ ವಿಸ್ತರಣೆ, ಮೆಟ್ರೋ ವಿಸ್ತರಣೆ ಹಾಗೂ ಕೈಗಾರಿಕೆ ವಿಸ್ತರಣೆಗೆ ಅನುಕೂಲವಾಗಲಿ ಎಂಬ ದೃಷ್ಠಿಯಲ್ಲಿ ಬೆಂಗಳೂರಿನ ಭಾಗವಾಗಿಸಲು ಕಸರತ್ತು ಆರಂಭಿಸಲಾಗಿದೆ.

ತುಮಕುರು ಹೆಸರು, ವಿಸ್ತೀರ್ಣ ಬದಲಾವಣೆ ಆಗುವುದಿಲ್ಲ, ಬೆಂಗಳೂರಿನ ಭಾಗವಾಗಿಸುವ ಕಾನ್ಸ್ಟ್​ೆ ಅಷ್ಟೇ, ಒಂದು ಕಡ್ಡಿಯೂ ಅಲ್ಲಾಡುವುದಿಲ್ಲ, ಹಿಂದೆಯೂ ನಾನು ಹೇಳಿದಾಗ ಇಂತಹ ಟೀಕೆಗಳು ಬಂದಿದ್ದವು. ದೆಹಲಿಯಲ್ಲಿ ಎನ್​ಸಿಆರ್​ ಮಾಡಿ ಮೂರು ಭಾಗ ಮಾಡಲಾಗಿದೆ ಆ ರೀತಿಯಾಗಿ ಮಾಡಲು ಮನವಿ ಮಾಡಿದ್ದೇನೆಯಷ್ಟೇ ಎಂದು ಪರಮೇಶ್ವರ್​ ಸ್ಪಷ್ಟನೆ ನೀಡಿದ್ದಾರೆ.

ತುಮಕೂರು ಜಿಲ್ಲೆ ಬೆಂಗಳೂರಿನ ಭಾಗ ಎಂದು ಬಿಂಬಿತವಾದರೆ ಕೈಗಾರಿಕೆಗಳು, ಬಂಡವಾಳ ಹರಿದು ಬರಲಿದೆ ಎಂಬುದಷ್ಟೇ ನನ್ನ ಆಶಯವಾಗಿದ್ದು ಯಾವುದೇ ದುರುದ್ದೇಶವಿಲ್ಲ ಎಂದು ಬುಧವಾರ ಸುದ್ದಿಗಾರರ ಜತೆ ಮಾತನಾಡಿ ವಿಷಯವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಭವಿಷ್ಯದ ಬೆಳವಣಿಗೆಗಳು ಜಿಲ್ಲೆಯ ಭವಿಷ್ಯ ನಿರ್ಧರಿಸಲಿದೆ.


ಆಕ್ರೋಶ ಹೆಚ್ಚಾಗುತ್ತಲೇ ಸ್ಪಷ್ಟನೆ ನೀಡಿದ ಪರಮ್​!
ತುಮಕೂರು ಜಿಲ್ಲೆಯ ಹೆಸರನ್ನು "ಬೆಂಗಳೂರು ಉತ್ತರ' ಎಂದು ಮರುನಾಮಕರಣ ಮಾಡುವ ಬಗ್ಗೆ ಬರೋಬ್ಬರಿ ಒಂದು ವರ್ಷದ ಬಳಿಕ ಜಿಲ್ಲಾ ಕೇಂದ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿಯೇ ಮುಖ್ಯ ವೇದಿಕೆಯಲ್ಲಿಯೇ ಪ್ರಸ್ತಾಪಿಸುವ ಮೂಲಕ ಜಿಲ್ಲೆಯೆಲ್ಲೆಡೆ ವ್ಯಾಪಕ ಟೀಕೆಗೆ ತುತ್ತಾಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಬೆಳಗಾಗುತ್ತಲೇ ವರಸೆ ಬದಲಿದ್ದಾರೆ.
ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಪ್ರತಿಕ್ರಿಯೆಸಿರುವ ಡಾ.ಜಿ.ಪರಮೇಶ್ವರ, "ಕಲ್ಪತರು ನಾಡು ತುಮಕೂರಿನ ಹೆಸರು ಬದಲಾವಣೆ ಆಗುವುದಿಲ್ಲ. ಹೆಸರು ಬದಲಾಯಿಸಬೇಕು ಎಂದು ನಾನು ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ. ಜಿಲ್ಲೆಯ ವಿಸ್ತೀರ್ಣವೂ ಬದಲಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ತುಮಕೂರನ್ನು ಬೆಂಗಳೂರು ಅಭಿವೃದ್ಧಿ ವಲಯದೊಂದಿಗಿನ ಸಂಪರ್ಕದ ಪರಿಕಲ್ಪನೆಯಡಿ ಪರಿಗಣಿಸುವ ಉದ್ದೇಶ, ಜಿಲ್ಲೆಯ ಸರ್ವಾಂಗೀಣ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವುದಾಗಿದೆ. ಬೆಂಗಳೂರು ಮಾದರಿಯ ಮೂಲಸೌಕರ್ಯ, ಕೈಗಾರಿಕಾ ಮತ್ತು ಹೂಡಿಕೆ ಅವಕಾಶಗಳ ಸಂಪರ್ಕದಿಂದ ತುಮಕೂರಿಗೆ ಹೆಚ್ಚಿನ ಹೂಡಿಕೆಗಳು ಹರಿದುಬಂದು, ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳು ವೃದ್ಧಿಯಾಗಲಿವೆ ಎಂಬ ನಂಬಿಕೆ ಇದೆ ಎಂದಿದ್ದಾರೆ.
ತುಮಕೂರು ಜಿಲ್ಲೆಯ ಹೆಸರನ್ನು ಬದಲಾಯಿಸಬೇಕು ಎಂದು ನಾನು ಹೇಳಿಲ್ಲ, ಯಾವುದೇ ಕಾರಣಕ್ಕೂ ತುಮಕೂರಿನ ಹೆಸರು, ಗೌರವ ಮತ್ತು ಅಸ್ಮಿತೆಗೆ ಧಕ್ಕೆಯಾಗುವುದಿಲ್ಲ. "ಕಲ್ಪತರು ನಾಡು' ಎಂಬ ತನ್ನ ವೈಶಿಷ್ಟ ಮತ್ತು ಗುರುತನ್ನು ತುಮಕೂರು ಸದಾ ಉಳಿಸಿಕೊಂಡೇ ಮುಂದುವರಿಯುತ್ತದೆ. ಆದ್ದರಿಂದ ಈ ವಿಚಾರದಲ್ಲಿ ಸಾರ್ವಜನಿಕರು ಯಾವುದೇ ತಪ್ಪು ಕಲ್ಪನೆಗೆ ಒಳಗಾಗುವ ಅಗತ್ಯವಿಲ್ಲ.
ಡಾ.ಜಿ.ಪರಮೇಶ್ವರ
ಜಿಲ್ಲಾ ಉಸ್ತುವಾರಿ ಸಚಿವ





ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net