ರೈತರ ಖಾತೆಗೆ 46.19 ಕೋಟಿ ಸಂದಾಯ

ತುಮಕೂರಿನಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯ 23ನೇ ಕಂತಿನ ಆರ್ಥಿಕ ನೆರವು ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಜಿ.ಬಿ.ಜ್ಯೋತಿಗಣೇಶ್​, ಬಿ.ಸುರೇಶಗೌಡ, ಶುಭಕಲ್ಯಾಣ್​, ಲಕ್ಷ್ಮಣ್​ ಕಳ್ಳೆಣ್ಣವರ್​, ಲೋಗಾನಾದನ್​,  ವೈ.ಎಚ್​.ಹುಚ್ಚಯ್ಯ ಇದ್ದರು.
ತುಮಕೂರಿನಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯ 23ನೇ ಕಂತಿನ ಆರ್ಥಿಕ ನೆರವು ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಜಿ.ಬಿ.ಜ್ಯೋತಿಗಣೇಶ್​, ಬಿ.ಸುರೇಶಗೌಡ, ಶುಭಕಲ್ಯಾಣ್​, ಲಕ್ಷ್ಮಣ್​ ಕಳ್ಳೆಣ್ಣವರ್​, ಲೋಗಾನಾದನ್​, ವೈ.ಎಚ್​.ಹುಚ್ಚಯ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ಬಂಗಾದಲ್ಲಿ ಪ್ರಧಾನಿ ಮೋದಿ ಚಾಲನೆ
  • ಏಕಕಾಲಕ್ಕೆ ಕಿಸಾನ್​ ಸಮ್ಮಾನ್​ ನಿಧಿ 23ನೇ ಕಂತು ಬಿಡುಗಡೆ
  • ಕೇಂದ್ರ ಸಚಿವ ವಿ.ಸೋಮಣ್ಣ ಮಾಹಿತಿ
ತುಮಕೂರು: ಜಿಲ್ಲೆಯ 2,30,941 ರೈತರಿಗೆ ಕೇಂದ್ರ ಸರ್ಕಾರದಿಂದ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯಡಿ 23ನೇ ಕಂತಿನ ಮೂಲಕ 46.19 ಕೋಟಿ ರೂ.ಗಳ ಆರ್ಥಿಕ ನೆರವು ಒದಗಿಸಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ನಗರದ ಕೇಂದ್ರ ಗ್ರಂಥಾಲಯದಲ್ಲಿ ಶನಿವಾರ ಕೃಷಿ ಇಲಾಖೆ ಆಯೋಜಿಸಿದ್ದ ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯ 23ನೇ ಕಂತಿನ ಆರ್ಥಿಕ ನೆರವು ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ 22 ಕಂತುಗಳ ಮೂಲಕ ಒಟ್ಟು 2,28,543 ರೈತ ಫಲಾನುಭವಿಗಳಿಗೆ 1136.64 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಾಗಿದೆ ಎಂದರು.
ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯನ್ನು ಫೆ.19 ರಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ 6 ಸಾವಿರ ರೂ.,ಗಳ ಆರ್ಥಿಕ ನೆರವನ್ನು 3 ಕಂತುಗಳಲ್ಲಿ 4 ತಿಂಗಳಿಗೊಮ್ಮೆ ನೀಡುವ ಯೋಜನೆಯಾಗಿದೆ. ಈ ಯೋಜನೆಯು ನೇರವಾಗಿ ಫಲಾನುಭವಿಗಳ ಬ್ಯಾಂಕ್​ ಖಾತೆಗಳಿಗೆ ಜಮಾ ಆಗಲಿದ್ದು, ಯಾವುದೇ ಮಧ್ಯವರ್ತಿಯ ಲೇಪವಿಲ್ಲದೆ ನಿಜವಾದ ಫಲಾನುಭವಿಗೆ ಸೇರುವ ಯೋಜನೆಯಾಗಿದೆ. ರೈತರು ಸೇರಿದಂತೆ ದೇಶದ ಎಲ್ಲಾ ವರ್ಗದ ಜನರ ಒಳಿತಿಗಾಗಿ ಪ್ರಧಾನಿ ನರೇಂದ್ರ ಮೋದಿ ರೂಪಿಸುವ ಯೋಜನೆಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಕಂಟೈನರ್​ ಕಾಪೋರೇಷನ್​ಗೆ 2.5 ಎಕರೆ: ಸಾಮಾನ್ಯ ರೈತನೂ ದೇಶದ ಸುಧಾರಿತ ರೈತನಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲವೂ ಕೈಜೋಡಿಸಬೇಕು. ಜಿಲ್ಲೆ ಬುದ್ಧೀಜಿವಿಗಳ, ಸಂಸ್ಕಾರವಂತರ ಜಿಲ್ಲೆಯಾಗಿದ್ದು, ಈ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ತರಲು ಪ್ರಯತ್ನ ನಡೆಸಲಾಗಿದೆ. ಅಂತೆಯೇ, ತಿಮ್ಮರಾಜನಹಳ್ಳಿಯಲ್ಲಿ ಕಂಟೈನರ್​ ಕಾಪೋರ್ರೇಷನ್​ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಅಗತ್ಯವಿರುವ ಎರಡೂವರೆ ಎಕರೆ ಭೂಮಿಯನ್ನು ಸ್ವಾಧಿನಪಡಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಸಚಿವ ಸೋಮಣ್ಣ ಸೂಚಿಸಿದರು.
ಈ ಯೋಜನೆಯಿಂದ ರೈತರು ಬೆಳೆದ ಬೆಳೆಗಳನ್ನು ನೇರವಾಗಿ ದೇಶದ ಇತರ ಪ್ರದೇಶಗಳ ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗುತ್ತದೆ. ಅಲ್ಲದೆ, ಸುಮಾರು 400ಕ್ಕು ಹೆಚ್ಚು ಮಂದಿ ಉದ್ಯೋಗಸ್ಥರಾಗಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್​, ಗ್ರಾಮಾಂತರ ಶಾಸಕ ಬಿ.ಸುರೇಶ್​ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್​, ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ್​ ಕಳ್ಳೆಣ್ಣವರ್​, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕ ಲೋಗಾನಾದನ್​, ದಿಶಾ ಸಮಿತಿ ಸದಸ್ಯ ವೈ.ಎಚ್​.ಹುಚ್ಚಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪಿಎಂ ಮೋದಿ ಚಾಲನೆ
ಪಶ್ಚಿಮ ಬಂಗಾಳದ ಹೂಗ್ಲಿಯಾದ ತಾರಕೇಶ್ವರ್​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯ 23ನೇ ಕಂತನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ 9.4ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ 18,800 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನೇರ ಹಣ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಸೋಮಣ್ಣ, ಜ್ಯೋತಿಗಣೇಶ್​, ಸುರೇಶಗೌಡ ಸೇರಿದಂತೆ ಗಣ್ಯರು ಪ್ರಧಾನಿ ಕಾರ್ಯಕ್ರಮವನ್ನು ಎಲ್​ಇಡಿ ಪರದೆಯಲ್ಲಿ ವೀಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net