ಸಹಬಾಳ್ವೆಯ ಪ್ರತಿಕ ಎನ್ನೆಸ್ಸೆಸ್​

NSS, a symbol of coexistence
NSS, a symbol of coexistence
Published on
ಕುಣಿಗಲ್​ : ರಾಷ್ಟ್ರೀಯ ಸೇವಾ ಯೋಜನೆಯನ್ನು ಗಾಂಧಿ ಅವರ ಜನ್ಮಶತಮಾನೋತ್ಸವದ ಸವಿನೆನಪಿಗಾಗಿ ಪ್ರಾರಂಭಿಸಿದ್ದು, ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮದೊಂದಿಗೆ ಸಹೋದರತೆ ಮನೋಭಾವ ಮೂಡಿಸುತ್ತಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಯುವಜನರನ್ನು ಸಹಬಾಳ್ವೆಯ ಪ್ರತಿಕವಾಗಿ ಒಗ್ಗೂಡಿಸಿದೆ ಎಂದು ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಟಿ.ಈಶ್ವರಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯಿಂದ ತಾಲೂಕಿನ ಹೊಳಲಗುಂದದಲ್ಲಿ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್​ ವಾರ್ಷಿಕ ವಿಶೇಷ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಶಿಬಿರಗಳು ಪೂರಕ. ಶಿಬಿರಗಳಲ್ಲಿ ದೊರೆಯುವ ಜ್ಞಾನದಿಂದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಸಮಾರೋಪ ಭಾಷಣ ಮಾಡಿದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ ಡಾ.ಟಿ.ಎನ್​.ನರಸಿಂಹಮೂರ್ತಿ, ಎನ್ನೆಸ್ಸೆಸ್​ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ ಮತ್ತು ಸಂಘಟನಾತ್ಮಕವಾಗಿ ಕೆಲಸ ಮಾಡುವುದನ್ನು ಕಲಿಸುತ್ತದೆ. ಮನೆಯ ಸೌಲಭ್ಯಗಳಿಂದ ದೂರವಿದ್ದು, ಸಾಮೂಹಿಕ ಜೀವನ ನಡೆಸುವ ಗುಣ ಬೆಳೆಸುತ್ತದೆ. ಗೆಳೆತನ ಗಟ್ಟಿಯಾಗಿ, ನಾಯಕತ್ವದ ಗುಣ ಬೆಳೆಸಿಕೊಳ್ಳುತ್ತಾರೆ. ಯಾವುದೇ ಕೆಲಸವನ್ನು ಒಗ್ಗಟ್ಟಿನಿಂದ ಮಾಡಬೇಕಾದ ಅನಿವಾರ್ಯತೆ ಅರ್ಥಮಾಡಿಕೊಂಡು ತಂಡವಾಗಿ ಕೆಲಸ ಮಾಡಿ ಅನುಭವಗಳಿಸುತ್ತಾರೆ ಎಂದರು.
ಶಿಬಿರಾಧಿಕಾರಿ ರವಿಕುಮಾರ್​ ಮಾತನಾಡಿ, ಶಾಸಕರು ಮತ್ತು ಗ್ರಾಮಸ್ಥರ ನೆರವಿನಿಂದ ಶಿಬಿರ ಯಶಸ್ವಿಯಾಗಿದೆ. ಗ್ರಾಮಸ್ಥರ ಸಹಭಾಗಿತ್ವ, ಒಳಗೊಳ್ಳುವಿಕೆಯು ಶಿಬಿರಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದೆ ಎಂದರು. ಶಿಬಿರಾರ್ಥಿ ಚೇತನ್​ ಮಾತನಾಡಿ, ತರಗತಿಯ ನಾಲ್ಕು ಗೋಡೆಗಳ ನಡುವೆ ಕಲಿಯುತ್ತಿದ್ದ ನಮಗೆ ಎನ್ನೆಸ್ಸೆಸ್​ ಪ್ರಾಯೋಗಿಕ ಜ್ಞಾನ ನೀಡಿ, ಹೊರಜಗತ್ತಿನ ಅರಿವನ್ನು ಹೆಚ್ಚಿಸಿದೆ ಎಂದರು. ಶಿಬಿರಾಧಿಕಾರಿಗಳಾದ ಕೆ.ರವಿಕುಮಾರ್​, ಜಿ.ಎಚ್​.ಹನುಮಂತಯ್ಯ, ಸಿ.ಜಿ.ನಾಗಮಣಿ ಅವರುಗಳು ಶಿಬಿರಾರ್ಥಿಗಳಿಗೆ ಸ್ಮರಣಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net