20 ರಂದು ಮೆಡಿಕಲ್​ ಶಾಪ್​ ಬಂದ್​

ತುಮಕೂರಿನಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜವಹರ್​ ಪಂಡಿತ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಂಗಸ್ವಾಮಿ, ಸಿ.ಪಿ.ವಿಜಯ್​, ನಾರಾಯಣಮೂರ್ತಿ, ಸಿದ್ದಲಿಂಗಸ್ವಾಮಿ ಮತ್ತಿತರರು ಇದ್ದರು.
ತುಮಕೂರಿನಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜವಹರ್​ ಪಂಡಿತ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಂಗಸ್ವಾಮಿ, ಸಿ.ಪಿ.ವಿಜಯ್​, ನಾರಾಯಣಮೂರ್ತಿ, ಸಿದ್ದಲಿಂಗಸ್ವಾಮಿ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆನ್​ ಲೈನ್​ ಔಷಧ ವ್ಯಾಪಾರಕ್ಕೆ ವಿರೋಧ
  • ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಕರೆ
  • ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜವಹರ್​ ಪಂಡಿತ್​
ತುಮಕೂರು: ಔಷಧ ವ್ಯಾಪಾರಿಗಳು ಎದುರಿಸುತ್ತಿರುವ ಬಿಕ್ಕಟ್ಟು, ಸಮಸ್ಯೆಗಳನ್ನು ನಿವಾರಣೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮೇ 20ರಂದು ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಕರೆಯಂತೆ ದೇಶಾದ್ಯಂತ ಎಲ್ಲಾ ಔಷಧ ವ್ಯಾಪಾರ ಮಳಿಗೆ ಬಂದ್​ ಮಾಡಲು ನಿರ್ಧರಿಸಲಾಗಿದೆ. ಈ ಮುಷ್ಕರ ಬೆಂಬಲಿಸಿ ಜಿಲ್ಲೆಯ ಎಲ್ಲಾ ಔಷದ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟು ಬಂದ್​ ಮಾಡಲಿದ್ದಾರೆ ಎಂದು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜವಹರ್​ ಪಂಡಿತ್​ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನ್​ಲೈನ್​ ಮೂಲಕ ಔಷಧ ವ್ಯಾಪಾರ ನಿಲ್ಲಿಸಬೇಕು. ಇದರಿಂದ ಎನ್​ಡಿಪಿಎಸ್​ ಅಮಲು ಬರುವ ಔಷಧಿಗಳು ಸಾರ್ವಜನಿಕರಿಗೆ ಸಿಗದಂತೆ ಮಾಡಬಹುದು. ಈ ಸಂಬಂಧ ಕೇಂದ್ರ ಸರ್ಕಾರ ಕರೊನಾ ಸಮಯದಲ್ಲಿ ಹೊರಡಿಸಿದ್ದ ಆದೇಶಗಳನ್ನು ಹಿಂಪಡೆಯಬೇಕು. ಕಾರ್ಪೊರೇಟ್​ ಕಂಪನಿಗಳಿಂದ ನಡೆಯುತ್ತಿರುವ ಡಿಸ್ಕೌಂಟ್​ ವ್ಯಾಪಾರ ನಿಲ್ಲಿಸಿ ದೇಶದಲ್ಲಿ ಆರೋಗ್ಯಕರ ವ್ಯಾಪಾರದ ವಾತಾವರಣ ಸೃಷ್ಟಿಸಬೇಕು. ಸ್ಪೂರಿಯಸ್​, ಮಿಸ್​ ಬ್ರ್ಯಾಂಡೆಡ್​, ನಕಲಿ ಔಷಧಗಳ ಹಾವಳಿ ನಿಲ್ಲಿಸಿ ಸರಳ ಕಾನೂನುಗಳಿಂದ ಔಷಧ ವ್ಯಾಪಾರಿಗಳನ್ನು ರಕ್ಷಿಸಬೇಕು. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಪರಿಹಾರ ಕೋರಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಕಾರಣದಿಂದ ಔಷಧಿ ವ್ಯಾಪಾರ ಬಂದ್​ ಮಾಡಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ಔಷಧ ವ್ಯಾಪಾರದಲ್ಲಿ ಬಿಗಿಯಾದ ಕಾನೂನುಗಳು, ನೀತಿ ನಿಯಮಗಳ ಅತಿಯಾದ ಏರಿಕೆ, ರಿಯಾಯಿತ ವ್ಯಾಪಾರದಿಂದ ನಮ್ಮ ವ್ಯವಹಾರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಸಾಮಾಜಿಕ ಜವಾಬ್ದಾರಿ ಹೊಂದಿರುವ ಔಷಧ ವ್ಯಾಪಾರಿಗಳು ಔಷಧ ವ್ಯಾಪಾರ ಬಂದ್​ ಮಾಡುವುದು ನಮಗೂ ನೋವಿನ ಸಂಗತಿ. ನಮ್ಮ ಮನವಿಗೆ ಸ್ಪಂದನೆ ಸಿಕ್ಕದಿದ್ದಾಗ ಬಂದ್​ ಮಾಡಿ ಪ್ರತಿಭಟನೆ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಪಿ.ವಿಜಯ್​, ಜಂಟಿ ಕಾರ್ಯದರ್ಶಿ ನಾರಾಯಣಮೂರ್ತಿ, ಸದಸ್ಯರಾದ ಗೋಪಾಲ್​, ಸಿದ್ದಲಿಂಗಸ್ವಾಮಿ, ಶ್ಯಾಮಸುಂದರ್​ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net