ಮಕ್ಕಳಿಗೆ ವಿದ್ಯಾರ್ಥಿವೇತನ ದೊರೆಯಲಿ

ಮಧುಗಿರಿ ತಾಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕುಪಟ್ಟದ ಕೆಡಿಪಿ ಸಭೆಯಲ್ಲಿ  ಸಿಇಒ ಅಶ್ವಿಜ, ಎಸಿ ಗೊಟೂರು ಶಿವಪ್ಪ, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ, ತಾಪಂ ಆಡಳಿತಾಧಿಕಾರಿ ಸೋನಿಯಾ ವಾರ್ಣೇಕರ್​, ಇಒ ಉತ್ತಮ್​, ಪ್ರಭಾರ ತಹಸೀಲ್ದಾರ್​ ಮಂಜುನಾಥ್​ ಇದ್ದರು.
ಮಧುಗಿರಿ ತಾಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕುಪಟ್ಟದ ಕೆಡಿಪಿ ಸಭೆಯಲ್ಲಿ ಸಿಇಒ ಅಶ್ವಿಜ, ಎಸಿ ಗೊಟೂರು ಶಿವಪ್ಪ, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ, ತಾಪಂ ಆಡಳಿತಾಧಿಕಾರಿ ಸೋನಿಯಾ ವಾರ್ಣೇಕರ್​, ಇಒ ಉತ್ತಮ್​, ಪ್ರಭಾರ ತಹಸೀಲ್ದಾರ್​ ಮಂಜುನಾಥ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಿಗೆ ವಿದ್ಯಾರ್ಥಿವೇತನ ದೊರೆಯಲಿ
ಮಕ್ಕಳಿಗೆ ವಿದ್ಯಾರ್ಥಿವೇತನ ದೊರೆಯಲಿ
* ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಕೆ.ಎನ್​.ರಾಜಣ್ಣ ಸೂಚನೆ
ಮಧುಗಿರಿ: ಈ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನ ಎಲ್ಲ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ದೊರೆಯುವಂತೆ ಕ್ರಮ ವಹಿಸಬೇಕು ಎಂದು ಬಿಇಒ, ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಶಾಸಕ ಕೆ.ಎನ್​.ರಾಜಣ್ಣ ಸೂಚನೆ ನೀಡಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕುಪಟ್ಟದ ಕೆಡಿಪಿ ಸಭೆಯ ಅಧ್ಯತೆ ವಹಿಸಿ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ವಿದ್ಯಾರ್ಥಿವೇತನ ನೀಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದೀರಾ...2013ರಲ್ಲಿ ಶೇ.100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿತ್ತು. ಆದರೆ ಪ್ರಸ್ತುತ ಕೇವಲ ಶೇ.74 ಮಾತ್ರ ಆಗಿದೆ ಎಂದು ತರಾಟೇಗೆ ತೆಗೆದುಕೊಂಡರು.
ಹಳ್ಳಿ ಮಕ್ಕಳಿಗೆ ವಿದ್ಯಾರ್ಥಿವೇತನ ದೊರೆತರೆ ಉನ್ನತ ಶಿಣಕ್ಕೆ ಅನುಕೂಲವಾಗಲಿದೆ. ಇಷ್ಟು ದಿನ ಸುಮ್ಮನಿದ್ದ ನೀವು ಈಗ ಮಾಡುತ್ತೇವೆ ಅಂತ ಹೇಳುತ್ತಿದ್ದೀರಾ ಎಂದು ಗರಂ ಆದ ಶಾಸಕರು, ಶಿಕ್ಷಣ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಗಳು ಶೇ.100 ಸಾಧನೆ ಮಾಡಬೇಕು. ಜೂ.24ರಂದು ವಿದ್ಯಾರ್ಥಿವೇತನದ ಬಗ್ಗೆ ವಿಶೇಷ ಸಭೆ ನಡೆಸಲಾಗುವುದು ಎಂದರು.
ಕೆಲ ಶಾಲೆಗಳಲ್ಲಿ ಅಡುಗೆ ಕೋಣೆಗಳು ಬಹಳಷ್ಟು ಶಿಥಿಲಗೊಂಡಿದ್ದು, ಇವುಗಳ ದುರಸ್ತಿಗೆ ಕ್ರಮ ವಹಿಸಿ, ಎಲ್ಲೆಲ್ಲಿ ಸೋರುತ್ತವೆ, ಎಲ್ಲೆಲ್ಲಿ ಅವಶ್ಯಕತೆ ಇದೆ ಎಂಬ ಪಟ್ಟಿ ನೀಡಿ ಯಾವುದಾದರೊಂದು ಅನುದಾನ ತಂದು ದುರಸ್ತಿಗೆ ಕ್ರಮವಹಿಸೋಣ ಎಂದು ಬಿಇಒ ಹನುಮಂತರಾಯಪ್ಪಗೆ ಸೂಚನೆ ನೀಡಿದರು.
ಎಲ್ಲ ಸರ್ಕಾರಿ ಕಟ್ಟಡಗಳ ಸ್ಥಳಗಳ, ಶಾಲೆಗಳ, ಅಂಗನವಾಡಿಗಳ ಸ್ಥಳಗಳನ್ನು ಖಾತೆ ಮಾಡಿಸಿ ಎಂದು ಸರ್ಕಾರದಿಂದ ಆದೇಶ ಬಂದಿದ್ದು, ಎಲ್ಲ ಸರ್ಕಾರಿ ಕಚೇರಿಗಳ ಖಾತೆ ಮಾಡಿಸಿ. ಕೆಲ ಸರ್ಕಾರಿ ಶಾಲೆಗಳ ಜಮೀನು ಇಂದಿಗೂ ಖಾಸಗಿಯವರ ಹೆಸರಿನಲ್ಲಿವೆ. ಶಿಥಿಲಗೊಂಡ ಶಾಲೆಗಳನ್ನು ಕೆಡವಿ ಹೊಸದಾಗಿ ಶಾಲೆ ನಿರ್ಮಿಸಲು ಹೋದರೆ ಅವರ ಕುಟುಂಬದವರು ಈಗ ಜಾಗ ಕೊಡುವುದಿಲ್ಲ ಎಂದು ಹೇಳುತ್ತಿರುವ ನಿದರ್ಶನಗಳಿದ್ದು, ಆದಷ್ಟು ದಾಖಲೆಗಳನ್ನು ಸಮರ್ಪಕವಾಗಿಟ್ಟುಕೊಳ್ಳಿ ಎಂದು ಬಿಇಒಗೆ ಸೂಚನೆ ನೀಡಿದರು.
ಮುಂದಿನ ಮಾರ್ಚ್​ 2027ರ ಒಳಗೆ ಎಲ್ಲ ರಸ್ತೆಗಳ ಕಾಮಗಾರಿಗಳೂ ಪೂರ್ಣಗೊಂಡಿರಬೇಕು ಎಂದು ಪಿಡಬ್ಲ್ಯುಡಿ ಇಇ ಹನುಮಂತರಾವ್​ಗೆ ಸೂಚನೆ ನೀಡಿದರು.
ಪಟ್ಟಣದಲ್ಲಿ ಎಷ್ಟು ವಾರ್ಡ್​ಗಳಿಗೆ ನೀರು ನೀಡಲಾಗುತ್ತಿದೆ. ಇನ್ನೂ ಎಷ್ಟು ದಿನಗಳವರೆಗೆ ಲಭ್ಯತೆ ಇದೆ ಎಂಬ ಮಾಹಿತಿಯನ್ನು ಮುಖ್ಯಾಧಿಕಾರಿ ಸುರೇಶ್​ಗೆ ಡಿಸಿ ಕೇಳಿದಾಗ, ಪಟ್ಟಣಕ್ಕೆ 2 ತಿಂಗಳು ನೀಡುವಷ್ಟು ನೀರಿದೆ. 74 ಬೋರ್​ವೆಲ್​ಗಳು ರನ್ನಿಂಗ್​ನಲ್ಲಿವೆ. ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸುರೇಶ್​ ಮಾಹಿತಿ ನೀಡಿದರು. ಪಟ್ಟಣದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅಮೃತ್​ 2 ಯೋಜನೆ ಕಾಮಗಾರಿ ನಡೆಯುತ್ತಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ. ಅಮೃತ್​ 2 ಯೋಜನೆಯ ಪೈಪ್​ಲೈನ್​ಗಳು ಕುಡಿಯುವ ನೀರಿನ ಪೈಪ್​ಲೈನ್​ಗಳಿಗೆ ವಿಶ್ರಣವಾಗದಂತೆ ನೋಡಿಕೊಳ್ಳಿ. 23 ವಾರ್ಡ್​ಗಳ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸಿಇಒ ಅಶ್ವಿಜ, ಎಸಿ ಗೊಟೂರು ಶಿವಪ್ಪ, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ, ತಾಪಂ ಆಡಳಿತಾಧಿಕಾರಿ ಸೋನಿಯಾ ವಾರ್ಣೇಕರ್​, ಇಒ ಉತ್ತಮ್​, ಪ್ರಭಾರ ತಹಸೀಲ್ದಾರ್​ ಮಂಜುನಾಥ್​, ಕೆಎಸ್​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚೌಡಪ್ಪ, ಬೆಸ್ಕಾಂ ಎಇಇ ಮಣಿಕಣ್ಣ ನಾಯಕ್​ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಕಲಿಕೆಗೆ ಹೆಚ್ಚು ಒತ್ತು ನೀಡಿ: ಶಿಕರು ಕಡ್ಡಾಯವಾಗಿ ಶಾಲೆಗಳಿಗೆ ಹೋಗಿ ಪಾಠ ಮಾಡಬೇಕು. ಎಲ್ಲಲ್ಲೋ ಓಡಾಡಿಕೊಂಡು ಇದ್ದರೆ ಅಂತವರ ವಿರುದ್ಧ ನಿರ್ದಾಣ್ಯವಾಗಿ ಕ್ರಮ ಕೈಗೊಳ್ಳಿ. ಫಲಿತಾಂಶ ಹೆಚ್ಚಳಕ್ಕೆ ಮತ್ತು ಮಕ್ಕಳ ಕಲಿಕೆಗೆ ಆದ್ಯತೆ ನೀಡಿ. 100ರಷ್ಟು ಹಾಜರಾತಿ ಇರುವಂತೆ ಕ್ರಮ ವಹಿಸಿ ಎಂದು ಡಿಡಿಪಿಐ ಮಾದವರೆಡ್ಡಿ ಅವರಿಗೆ ಶಾಸಕರು ಸೂಚನೆ ನೀಡಿದರು.
ಹಣ ವಸೂಲಿಗೆ ಏಜೆಂಟ್​!: ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಹಣ ವಸೂಲು ಮಾಡಲು ಏಜೆಂಟ್​ ನೇಮಿಸಿಕೊಂಡಿದ್ದು, ಫಲಾನುಭವಿಗಳ ವಿಳಾಸ ಪಡೆದು ಹಣಕ್ಕಾಗಿ ಬೇಡಿಕೆ ಇಡುತ್ತಾನೆ ಎಂಬ ದೂರುಗಳಿವೆ. ಇದರ ಬಗ್ಗೆ ಗಮನಹರಿಸಿ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗೆ ಶಾಸಕರು ತಾಕೀತು ಮಾಡಿದರು. ಇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್​, ತಾಲೂಕಿನಲ್ಲಿ ಕಾರ್ಮಿಕ ಇಲಾಖೆ ಇದೆ ಎಂಬುದೇ ಗೋಚರಿಸುವುದಿಲ್ಲ. ಇದೇ ನಿಮ್ಮ ಇಲಾಖೆಯ ಸಮಸ್ಯೆ, ಫಲಾನುಭವಿಗಳಿಗೆ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ. ಕನಿಷ್ಠ ನೂರು ಜನರಿಗೆ ನೋಂದಣಿ ಮಾಡಿಸಿ ಸೌಲಭ್ಯ ವಿತರಿಸಿ ಎಂದು ಕಾರ್ಮಿಕ ನಿರೀಕ ಶ್ರೀಕಾಂತ್​ ಅವರನ್ನು ತರಾಟೆಗೆ ತೆಗೆದುಕೊಂಡರು.
ಚೆಕ್​ ಡ್ಯಾಂ ನಿರ್ಮಾಣಕ್ಕೆ ಸರ್ವೇ ಮಾಡಿಸಿ:ತಾಲೂಕಿನಲ್ಲಿ ಚೆಕ್​ಡ್ಯಾಂಗಳ ಅವಶ್ಯಕತೆ ಎಲ್ಲಿ ಇದೆ ಎಂಬುದನ್ನು ಸರ್ವೇ ಮಾಡಿಸಿ. ಅವಶ್ಯಕತೆ ಇರುವ ಕಡೆ ನಿರ್ಮಾಣ ಮಾಡೋಣ. ಇದರಿಂದ ಅಂತರ್ಜಲಮಟ್ಟ ಸುಧಾರಣೆಯಾಗಲಿದೆ ಎಂದು ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚನೆ ಶಾಸಕರು ನೀಡಿದರು.
ಬಾಡಿಗೆ ವಸೂಲಿ ಮಾಡಿ:ತಾಪಂ ಅಂಗಡಿ ಮಳಿಗೆಗಳ ಬಾಡಿಗೆಯ ಇಂತಿಷ್ಟು ಹಣವನ್ನು ಶಾಲೆಯ ಅಭಿವೃದ್ಧಿಗೂ ಬಳಸಬೇಕು. ಇಲ್ಲಿ ಅಂಗಡಿಗಳನ್ನು ಮಾಡಿಕೊಂಡು ಯಾರು ಬೇರೆಯವರಿಗೆ ಬಾಡಿಗೆ ನೀಡಿದ್ದಾರೋ ಅಂತವರನ್ನು ನಿರ್ದಾಣ್ಯವಾಗಿ ಖಾಲಿ ಮಾಡಿಸಿ, ಸ್ವಂತ ಅಂಗಡಿದಾರರಿಗೆ ನಿಯಮಾವಳಿ ಪ್ರಕಾರ ಬಾಡಿಗೆ ವಸೂಲಿ ಮಾಡಿ. ಜೀವನ ನಡೆಸಲು ಅಂಗಡಿ ಇಟ್ಟುಕೊಂಡಿರುವ ಬಡವರಿಗೆ ಮಾನವೀಯತೆ ದೃಷ್ಟಿಯಿಂದ ಬಾಡಿಗೆ ನಿಗದಿಗೊಳಿಸಿ ಎಂದು ತಾಪಂ ಇಒ ಉತ್ತಮ್​ಗೆ ರಾಜಣ್ಣ ಸೂಚನೆ ನೀಡಿದರು.

ಎಸ್​ಐಆರ್​ ಮ್ಯಾಪಿಂಗ್​ ಮಾಡುವಾಗ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ವಂಚಿತರಾಗದಂತೆ ಸಂಬಂದಪಟ್ಟ ಅಧಿಕಾರಿಗಳು ಕ್ರಮ ವಹಿಸಿ. ಸಾರ್ವಜನಿಕರೂ ಸಹ ತಮ್ಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಅನರ್ಹಗೊಳ್ಳದಂತೆ ಎಚ್ಚರ ವಹಿಸಿ.
- ಕೆ.ಎನ್​.ರಾಜಣ್ಣ, ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net