ಹವಾಗುಣ ಬದಲಾವಣೆ ಪ್ರಕೃತಿಯಲ್ಲಿನ ಸಮತೋಲನವನ್ನು ಕದಡಿದ ಪರಿಣಾಮವಾಗಿ ವನ್ಯಜೀವಿಗಳ ಮೇಲೆ ಗಂಭೀರವಾದ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಪ್ರಕೃತಿಯಲ್ಲಿ ತಾಪಮಾನ, ಮಳೆಯ , ಋತುಚಕ್ರಗಳು ಬದಲಾಗುವುದರಿಂದ ಪ್ರಾಣಿಗಳು ತಮ್ಮ ಬದುಕಿನ ಕ್ರಮವನ್ನು ಹೊಂದಿಕೊಳ್ಳಲು ಕಷ್ಟಪಡುವ ಪರಿಸ್ಥಿತಿ ಉಂಟಾಗುತ್ತದೆ. ವನ್ಯಜೀವಿಗಳನ್ನು ರಕ್ಷಿಸಲು ಅರಣ್ಯ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ಮತ್ತು ಪರಿಸರ ಸ್ನೇಹಿ ಜೀವನಶೈಲಿ ಚರ್ಚೆಗಳು ಅತ್ಯಂತ ಅಗತ್ಯ. ಇದು ಕೇವಲ ಪ್ರಾಣಿಗಳಿಗಷ್ಟೇ ಅಲ್ಲ, ಮಾನವರ ಭವಿಷ್ಯಕ್ಕೂ ಅತೀ ಮುಖ್ಯವಾದುದು ಎಂದು ಮುಖ್ಯ ಶಿಕ್ಷಕ ಕೆ ಗವಿರಂಗಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಅಮಲಗೊಂದಿ ಮಾತನಾಡಿ, ಮಾನವರ ಚಟುವಟಿಕೆಗಳಿಂದ ಪರಿಸರವು ವಿನಾಶದ ಅಂಚಿಗೆ ಬಂದು ತಲುಪುತ್ತಿದೆ. ಅದರ ಪರಿಣಾಮವಾಗಿ ತಾಪಮಾನ ಏರಿಕೆಯಿಂದ ಕೆಲವು ಪ್ರಭೇದಗಳು ತಮ್ಮ ಸಹಜ ವಾಸಸ್ಥಳಗಳನ್ನು ಕಳೆದುಕೊಳ್ಳುತ್ತಿವೆ. ಉದಾಹರಣೆಗೆ, ಧ್ರುವ ಪ್ರದೇಶಗಳಲ್ಲಿ ಹಿಮ ಕರಗುವುದರಿಂದ ಅಲ್ಲಿ ಇರುವ ಪ್ರಾಣಿಗಳಿಗೆ ಆಹಾರ ಮತ್ತು ಆಶ್ರಯದ ಸಮಸ್ಯೆ ಉಂಟಾಗುತ್ತಿದೆ. ಮಳೆಪಾತದ ಅಸ್ಥಿರತೆ ಕಾಡು ಜೀವಿಗಳಿಗೆ ಮತ್ತೊಂದು ದೊಡ್ಡ ಸವಾಲು. ಕೆಲವು ಪ್ರದೇಶಗಳಲ್ಲಿ ಬರ ಹೆಚ್ಚಾದರೆ ನೀರಿನ ಮೂಲಗಳು ಒಣಗುತ್ತವೆ. ಇನ್ನು ಕೆಲವು ಕಡೆಗಳಲ್ಲಿ ಅತಿಯಾದ ಮಳೆಯು ನೆರೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಆಹಾರ ಸರಪಳಿ ಅಸ್ತವ್ಯಸ್ತಗೊಳ್ಳುತ್ತದೆ ಎಂದರು.