ತುಮಕೂರು: ಐತಿಹಾಸಿಕ ಕುಣಿಗಲ್ ಕುದುರೆ ಸಾಕಣೆ ಕೇಂದ್ರದಲ್ಲಿ ಇಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಯಿತು. 18 ಗುತ್ತಿಗೆ ಕಾರ್ಮಿಕರ ಸೇವೆ ಖಾಯಂಗೊಳಿಸಲಾಗಿದೆ. ಜತೆಗೆ ವೇತನ ಪರಿಷ್ಕರಣೆ ಮತ್ತು ಇತರ ಸೇವಾ ಸೌಲಭ್ಯಗಳನ್ನು ಒಳಗೊಂಡ ಈ ಒಪ್ಪಂದ ಕಾರ್ಮಿಕರ ಬದುಕಿನಲ್ಲಿ ಹೊಸ ಅಧ್ಯಾಯ ತೆರೆದಿದೆ.
ಫಾರಂನ ಹಿನ್ನೆಲೆ: ಟಿಪ್ಪು ಸುಲ್ತಾನ್ (1782-1799) ಆಡಳಿತದಲ್ಲಿ ಕುಣಿಗಲ್ ಕುದುರೆ ಸಾಕಣೆ ಕೇಂದ್ರವಾಗಿ ಪ್ರಸಿದ್ಧವಾಯಿತು. ಅರೇಬಿಯನ್ ಮತ್ತು ಪರ್ಷಿಯನ್ ತಳಿಗಳನ್ನು ತರಿಸಿ ಅಶ್ವದಳವನ್ನು ಬಲಪಡಿಸಿದರು. ಮೈಸೂರು ಮಹಾರಾಜರು ಬ್ರಿಟಿಷ್ ಸೈನ್ಯಕ್ಕಾಗಿ ಕುದುರೆ ಸಾಕಿದರು. ಸ್ವಾತಂತ್ರ್ಯಾನಂತರ ಕೇಂದ್ರ ಸರ್ಕಾರದ ಅಶ್ವ ಸಾಕಣೆ ಕೇಂದ್ರವಾಗಿ ಮುಂದುವರೆಯಿತು.
ನಂತರ ಕರ್ನಾಟಕ ಸರ್ಕಾರದ ವಶಕ್ಕೆ ಬಂದ ಈ ಫಾರಂ, 1992ರಿಂದ ಯುನೈಟೆಡ್ ಬಿವರೀಸ್ ಸಂಸ್ಥೆಯ ಗುತ್ತಿಗೆಯಲ್ಲಿದೆ. ಇಲ್ಲಿ ಕುದುರೆ ಸಾಕಣೆ, ಮರಿ ಉತ್ಪಾದನೆ ಮತ್ತು ಮಾರಾಟ ಮುಂದುವರಿದಿದೆ.
ಕಾರ್ಮಿಕರ ಹೋರಾಟದ ಇತಿಹಾಸ: ಫಾರಂನ ಕಾರ್ಮಿಕ ಸಂಘಕ್ಕೆ 50 ವರ್ಷಗಳ ಇತಿಹಾಸವಿದೆ. ಹಿಂದೆ ಮಹಮದ್ ದಸ್ತಗೀರ್, ಹುಚ್ಚೆಗೌಡ, ಬಡೆಸಾಬ್ ಮುಂತಾದವರು ನಾಯಕತ್ವ ನೀಡಿದ್ದರು. ಹೋರಾಟದ ಫಲವಾಗಿ ಇಂದಿನ ಈ ಒಪ್ಪಂದ ಸಾಧ್ಯವಾಗಿದೆ.
ಒಪ್ಪಂದದ ವಿವರಗಳು: ಮುಂದಿನ 4 ವರ್ಷಗಳಿಗೆ ವೇತನ ಮತ್ತು ಸೇವಾ ಸೌಲಭ್ಯಗಳ ಕುರಿತು ಆಡಳಿತ ಮಂಡಳಿ ಮತ್ತು ಕಾರ್ಮಿಕ ಸಂಘದ ನಡುವೆ ಒಪ್ಪಂದವಾಗಿದೆ.
ಪ್ರಮುಖ ಅಂಶಗಳು:
*18 ಗುತ್ತಿಗೆ ಕಾರ್ಮಿಕರ ಸೇವೆ ಖಾಯಂಗೊಳಿಸಲಾಗಿದೆ.
ಕರ್ನಾಟಕ ಸರ್ಕಾರದ ವೇತನ ಶ್ರೇಣಿ ಮತ್ತು ತುಟ್ಟಿ ಭತ್ಯೆ ಆಧಾರಿತ ಸಂಬಳ ನಿಗದಿ, ಅನುಕಂಪ ಆಧಾರಿತ ನೇಮಕಾತಿ ಮತ್ತು ಇತರ ಸೇವಾ ಸೌಲಭ್ಯಗಳು.