ಹತ್ತಿ ಬೀಜ ಉತ್ಪಾದನಾ ಕಂಪನಿಗಳಿಂದ ರೈತರಿಗೆ 500 ಕೋಟಿ ಬಾಕಿ

ಜಿ.ಸಿ.ಶಂಕರಪ್ಪ
ಜಿ.ಸಿ.ಶಂಕರಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂಘದ ಜಿ.ಸಿ.ಶಂಕರಪ್ಪ
  • ಮಧುಗಿರಿ, ಶಿರಾ, ಪಾವಗಡ ರೈತರಿಗೆ ಅನ್ಯಾಯ
  • ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಆಗ್ರಹ
ತುಮಕೂರು: ಹತ್ತಿ ಬೀಜ ಬೆಳೆದು ಕೊಟ್ಟ ಜಿಲ್ಲೆಯ ಮಧುಗಿರಿ, ಶಿರಾ, ಪಾವಗಡ ಮತ್ತು ಕೊರಟಗೆರೆ ತಾಲೂಕುಗಳ ರೈತರಿಗೆ ಬೀಜ ಉತ್ಪಾದನಾ ಕಂಪನಿಗಳಿಂದ ಸುಮಾರು 500 ಕೋಟಿ ರೂ., ಬಾಕಿ ಬರಬೇಕಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತರ ಬಾಕಿ ಕೊಡಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಒತ್ತಾಯಿಸಿದರು.
ನಗರದ ವಿಜ್ಞಾನಕೇಂದ್ರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತಾರು ವರ್ಷಗಳಿಂದ ಜಿಲ್ಲೆಯ ಸುಮಾರು 9000ಕ್ಕು ಹೆಚ್ಚು ರೈತರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳದೆ 19000 ಎಕರೆ ಪ್ರದೇಶದಲ್ಲಿ ಹತ್ತಿ ಬೀಜ ಉತ್ಪಾದನೆ ಮಾಡಿಸಲಾಗುತ್ತಿದೆ. 2024ರ ಸಾಲಿನ ಬಾಕಿ 52 ಕೋಟಿ ಜತೆಗೆ, 2025ರಲ್ಲಿ ಬೀಜ ಬೆಳೆದು ನೀಡಿದ 3 ತಿಂಗಳು ಕಳೆದರೂ ರೈತರಿಗೆ ನೀಡಬೇಕಾದ 500 ಕೋಟಿ ರೂ ಬಾಕಿ ನೀಡಿಲ್ಲ. ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ, ಔಷಧಗಳನ್ನು ನೀಡದೆ ರೈತರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ತತ್​ಕ್ಷಣವೇ ರೈತರಿಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಡಿಸಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಒಂದು ಎಕರೆಯಲ್ಲಿ ಹತ್ತಿ ಬಿತ್ತನೆ ಬೀಜ ಬೆಳೆಯಲು ಸುಮಾರು 2 ಲಕ್ಷ ರೂ ಖರ್ಚು ಬರುತ್ತದೆ.ನೆರೆ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರಗಳ 22 ಬೀಜ ಉತ್ಪಾಧನಾ ಕಂಪನಿಗಳಿಗೆ ರೈತರಿಗೆ ಒಂದಿಷ್ಟು ಮುಂಗಡ ಹಣ ನೀಡಿ,ಹತ್ತಿ ಬೀಜಗಳನ್ನು ಬೆಳೆಸಿಕೊಳ್ಳುತ್ತಿವೆ. ಬೀಜ ಕೊಂಡ ತಕ್ಷಣ ಹಣ ನೀಡುತ್ತಿಲ್ಲ. ಕಂಪನಿಗಳು ನೇರವಾಗಿ ವ್ಯವಹರಿಸದೆ ಎಜೆಂಟರ್​ ಮೂಲಕ ಕೆಲಸ ಮಾಡಿಸುತ್ತಿವೆ. ರೈತರಿಗೆ ಗುಣಮಟ್ಟದ ಬೀಜ, ಗೊಬ್ಬರ, ಔಷಧಗಳನ್ನು ನೀಡಿಲ್ಲ. ಬೆಳೆ ನಷ್ಟವಾದರೆ ಪರಿಹಾರವಿಲ್ಲ. ಹಾಗಾಗಿ, ಹತ್ತಿ ಬೀಜ ಉತ್ಪಾದನಾ ಬೆಳೆಯನ್ನು ಫಸಲ್​ ಭೀಮ ಯೋಜನೆಯ ಅಡಿಗೆ ಒಳಪಡಿಸಬೇಕು.ಅಲ್ಲದೆ, ಇನ್ಮುಂದೆ ಬೀಜ ಉತ್ಪಾದನಾ ಕಾಯ್ದೆ ಅನ್ವಯ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತರ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಮಹಿಳಾ ಟಕದ ಅಧ್ಯಕ್ಷೆ ನಾಗರತ್ನಮ್ಮ, ವಿವಿಧ ತಾಲೂಕುಗಳ ಪದಾಧಿಕಾರಿಗಳಾದ ಚಿಕ್ಕಬೋರೇಗೌಡ, ಕೆಂಚಪ್ಪ, ನಾಗರಾಜು, ಷಬ್ಬೀರ್​ ಪಾಷ, ಲೋಕೇಶ್​, ಷಪಿ ಅಹಮದ್​ ಮತ್ತಿತರರು ಹಾಜರಿದ್ದರು.
ಹತ್ತಿ ಬೀಜ ಉತ್ಪಾದನಾ ಕಂಪನಿಗಳು ಬೀಜೋತ್ಪಾದನಾ ಕಾಯ್ದೆಯ ನಿಯಮಗಳನ್ನೇ ಗಾಳಿಗೆ ತೂರಿ, ರೈತರೊಂದಿಗೆ ಯಾವುದೇ ಒಡಂಬಡಿಕೆ ಮಾಡಿಕೊಳ್ಳದೆ ಬೀಜವನ್ನು ಕೊಂಡು ಹಣ ನೀಡದೆ ಸತಾಯಿಸುತ್ತಿವೆ.ಇದೊಂದು ರೀತಿ ಹಗಲು ದರೋಡೆಯಂತಿದ್ದು, ಜಿಲ್ಲಾಡಳಿತ ಗಮನಹರಿಸಿ,ಸಮಸ್ಯೆಗೆ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ.
ಕಳೆದ ಮೂರು ತಿಂಗಳಿಂದ ನ್ಯಾಫೆಡ್​ ಮೂಲಕ ಖರೀದಿಸಿರುವ ರಾಗಿಗೆ ಸರ್ಕಾರ ಹಣ ನೀಡಿಲ್ಲ.
ಎ.ಗೋವಿಂದರಾಜು
ರೈತ ಸಂಘದ ಜಿಲ್ಲಾಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net