ಸರ್ವೇ ವಿಳಂಬ ಸುಮೊಟೊ ದೂರು ದಾಖಲು

 ಗುಬ್ಬಿ ತಾಲೂಕು ಭೂಮಾಪನಾ ಇಲಾಖೆಯಲ್ಲಿ ರಾಜ್ಯಸಭಾ ಮಾಜಿ ಸದಸ್ಯೆ ಬಿ.ಜಯಶ್ರೀ ಹಾಗೂ ರಂಗತಜ್ಞೆ ಆನಂದರಾಜ್​ ಕಾಯುತ್ತಿರುವುದು.
ಗುಬ್ಬಿ ತಾಲೂಕು ಭೂಮಾಪನಾ ಇಲಾಖೆಯಲ್ಲಿ ರಾಜ್ಯಸಭಾ ಮಾಜಿ ಸದಸ್ಯೆ ಬಿ.ಜಯಶ್ರೀ ಹಾಗೂ ರಂಗತಜ್ಞೆ ಆನಂದರಾಜ್​ ಕಾಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸೆದಗು ತಪ್ಪದ ಅಲೆದಾಟ
  • ಸ್ವಯಂಪ್ರೇರಿತ ದೂರು ದಾಖಲಿಸಿದ ಲೋಕಾಯುಕ್ತ
  • ಸರ್ವೇಯರ್​, ತಹಸೀಲ್ದರ್​, ಎಸಿ ವಿರುದ್ಧವೂ ಪ್ರಕರಣ
ಗುಬ್ಬಿ: ರಾಜ್ಯಸಭಾ ಮಾಜಿ ಸದಸ್ಯೆ ಬಿ.ಜಯಶ್ರೀ ಅವರ ಜಮೀನು ಸರ್ವೇ ಮಾಡಲು ವಿಳಂಬ ಮಾಡಿದ್ದಲ್ಲದೆ ಮೂರು ಬಾರಿ ಹಣ ಕಟ್ಟಿಸಿಕೊಂಡಿದ್ದು, ಜತೆಗೆ ಅವರಿಗೆ ಅಗೌರವ ತೋರಿದ್ದ ಭೂಮಾಪನ ಇಲಾಖೆಯ ವಿರುದ್ಧ ರಾಜ್ಯ ಲೋಕಾಯುಕ್ತ ಸುಮೋಟೋ ದೂರು ದಾಖಲಿಸಿಕೊಂಡಿದೆ. ಅಲ್ಲದೆ, ಸರ್ವೇಯರ್​, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ, ತಹಸೀಲ್ದಾರ್​, ತುಮಕೂರು ಉಪವಿಭಾಗಾಧಿಕಾರಿ ವಿರುದ್ಧ ಸ್ವಯಂ ಪ್ರೇರಿತ ದೂರನ್ನು ಉಪಲೋಕಾಯುಕ್ತ ಬಿ.ವೀರಪ್ಪ ದಾಖಲಿಸಲು ಆದೇಶಿಸಿದ್ದಾರೆ.
ವಿಜಯವಾಣಿ ಪತ್ರಿಕೆಯಲ್ಲಿ ಜ.30ರಂದು "ಮಾಜಿ ಸಂಸೆದಗೂ ತಪ್ಪದ ಅಲೆದಾಟ' ಶೀರ್ಷಿಕೆಯಡಿ ಪ್ರಕಟಗೊಂಡಿದ್ದ ಸುದ್ದಿಯನ್ನು ಆಧರಿಸಿ ಲೋಕಾಯುಕ್ತ ಕಾಯ್ದೆ ಕಲಂ 1984 ರ 2(2)(ಸಿ), ಕಲಂ 2(5), 2(10), ಭಾರತೀಯ ದಂಡ ಸಂಹಿತೆ ಅಧ್ಯಾಯ 9ರ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಮುಂದಿನ ಮಾರ್ಚ್​ 9ರಂದು ಆಕ್ಷೇಪ ಸಲ್ಲಿಸಲು ಎಲ್ಲ ದಾಖಲಾತಿಯೊಂದಿಗೆ ಖುದ್ದು ಹಾಜರಾಗಲು ಬಿ.ವೀರಪ್ಪ ಆದೇಶ ಹೊರಡಿಸಿದ್ದಾರೆ.
ಪ್ರಕರಣ ಹಿನ್ನೆಲೆ: ರಂಗ ಚಟುವಟಿಕೆಗೆ ಮುಡುಪಾದ ಜಿ.ವಿ.ಮಾಲತಮ್ಮ ಆರ್ಟ್​ ಟ್ರಸ್ಟ್​ ಹೆಸರಿನಲ್ಲಿರುವ ಜಮೀನನ್ನು ಖಾತೆ ಮಾಡಿಸಿಕೊಳ್ಳಲು ರಾಜ್ಯಸಭಾ ಮಾಜಿ ಸದಸ್ಯೆ ಬಿ.ಜಯಶ್ರೀ ಗುಬ್ಬಿ ಭೂ ಮಾಪನಾ ಇಲಾಕೆ ಕಚೇರಿಯಲ್ಲಿ ಒಂದೇ ತಿಂಗಳಲ್ಲಿ ಮೂರು ಬಾರಿ ಹಣ ಪಾವತಿಸಿದ್ದರು. ಆದರೆ, ಸಂಬಂಧಿಸಿದ ಅಧಿಕಾರಿಗಳು ಸಬೂಬು ಹೇಳಿ ಸರ್ವೇ ಮಾಡದೆ ಕಾಲಹರಣ ಮಾಡುತ್ತಿದ್ದರು. ಈ ಹಿನ್ನೆಲೆ ಗುರುವಾರ ಭೂಮಾಪನಾ ಇಲಾಖೆಗೆ ಮತ್ತೊಮ್ಮೆ ಬಂದಿದ್ದ ಜಯಶ್ರೀ ಹಾಗೂ ರಂಗತಜ್ಞೆ ಆನಂದರಾಜ್​ ಅವರಿಗೆ "ನಿಮ್ಮ ಕೆಲಸಕ್ಕಿಂತ ನಮ್ಮ ಮೇಲಾಧಿಕಾರಿಗಳ ಕೆಲಸವೇ ಮುಖ್ಯ' ಉಡಾಫೆಯಾಗಿ ಸರ್ವೇಯರ್​ ಶಿವಾನಂದ್​ ಮಾತನಾಡಿದ್ದರು. ಈ ಸಂಬಂಧ ವಿಜಯವಾಣಿ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net