ಅಭಿವೃದ್ಧಿಯ ದಾಹಕ್ಕೆ ನದಿನಾಶ

 ತುಮಕೂರು ವಿಶ್ವವಿದ್ಯಾಲಯದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠ, ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ   ಆಯೋಜಿಸಿದ್ದ ಜಯಮಂಗಲಿ ನದಿ ಪುನಶ್ಚೇತನ ಕಾರ್ಯಾಗಾರವನ್ನು ಶಿವಾನಂದ ಕಳವೆ ಉದ್ಘಾಟಿಸಿದರು. ಪ್ರೊ.ಎಚ್​.ಎಸ್​.ಮೋಹನ್​, ಡಿ.ವಿ. ರಘು, ಪ್ರೊ. ಕೆ. ಜಿ. ಪರಶುರಾಮ್​, ಡಾ.ಎಂ. ಮುನಿರಾಜು , ಮಲ್ಲಿಕಾರ್ಜುನ ಹೊಸಪಾಳ್ಯ ಇದ್ದರು.
ತುಮಕೂರು ವಿಶ್ವವಿದ್ಯಾಲಯದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠ, ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಜಯಮಂಗಲಿ ನದಿ ಪುನಶ್ಚೇತನ ಕಾರ್ಯಾಗಾರವನ್ನು ಶಿವಾನಂದ ಕಳವೆ ಉದ್ಘಾಟಿಸಿದರು. ಪ್ರೊ.ಎಚ್​.ಎಸ್​.ಮೋಹನ್​, ಡಿ.ವಿ. ರಘು, ಪ್ರೊ. ಕೆ. ಜಿ. ಪರಶುರಾಮ್​, ಡಾ.ಎಂ. ಮುನಿರಾಜು , ಮಲ್ಲಿಕಾರ್ಜುನ ಹೊಸಪಾಳ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತುಮಕೂರು ವಿವಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅಧ್ಯಯನ ಪೀಠ
  • ಜಯಮಂಗಲಿ ನದಿ ಪುನಶ್ಚೇತನ ಕಾರ್ಯಾಗಾರ
  • ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಕಳವಳ
ತುಮಕೂರು: ಅಭಿವೃದ್ಧಿಯ ಹೆಸರಿನಲ್ಲಿ ನದಿಗಳ ವಿನಾಶವಾಗುತ್ತಿರುವುದು ಶೋಚನೀಯ ಎಂದು ಶಿರಸಿಯ ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಕಳವಳ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾಲಯದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠ, ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಯಮಂಗಲಿ ನದಿ ಪುನಶ್ಚೇತನ ವಿಷಯದ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನದಿಗಳು ನಮಗೆ ಬದುಕು, ಭಾಷೆ, ಸಂಸತಿ ಹಾಗೂ ಪರಂಪರೆಯನ್ನು ಕಟ್ಟಿಕೊಟ್ಟಿವೆ. ಆದರೆ ಈಗ ಅವುಗಳನ್ನು ಮರೆಯುವ ಹಂತಕ್ಕೆ ಬಂದಿದ್ದೇವೆ ಎಂದರು.
ಅಭಿವೃದ್ಧಿಯ ಪಥದಲ್ಲಿ ಸಾಗುವ ಭರದಲ್ಲಿ ಕೆರೆ-ಕುಂಟೆಗಳ ನೀರನ್ನು ಸಂರಕ್ಷಿಸುವುದನ್ನು ನಾವು ಮರೆತಿದ್ದೇವೆ. ನದಿಗಳು ಹಾಗೂ ನೀರಿನ ಮೂಲಗಳನ್ನು ಹಾಳು ಮಾಡುವಲ್ಲಿ ಮಾನವನೇ ಮೊದಲ ಸ್ಥಾನದಲ್ಲಿದ್ದಾನೆ. ನದಿ ದಂಡೆಯ ಮರಗಳ ನಾಶದಿಂದಾಗಿ ಇತ್ತೀಚಿನ ದಿನಗಳಲ್ಲಿ ಮಳೆಗಾಲದಲ್ಲಿ ಪ್ರವಾಹ ಹಾಗೂ ಬೇಸಿಗೆಯಲ್ಲಿ ಟ್ಯಾಂಕರ್​ ನೀರಿನ ಪದ್ಧತಿಯನ್ನು ಅನುಸರಿಸುವಂತಾಗಿದೆ. ಗ್ರಾನೈಟ್​ ಬಳಕೆ, ನದಿಗಳನ್ನು ಮರೆತು ಕೊಳವೆಬಾವಿಗಳಿಗೆ ಮುಗಿಬಿದ್ದಿರುವುದು, ನದಿ ನೀರಿಗೆ ಕೊಳಚೆ ನೀರು ಹರಿಸುತ್ತಿರುವುದು, ಜಾಲಿ ಗಿಡಗಳ ವ್ಯಾಪಕ ಬೆಳವಣಿಗೆ, ಕೆರೆಗಳಲ್ಲಿ ಹೂಳು ಎತ್ತದಿರುವುದು ಹಾಗೂ ಅಕ್ರಮ ಮರಳು ದಂಧೆಗಳು ನದಿಗಳನ್ನು ಸಂಪೂರ್ಣವಾಗಿ ಹಾಳು ಮಾಡಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆರೆ ನಿರ್ಮಿಸುವುದು, ಹೂಳು ಎತ್ತುವುದು, ಕಾಡು ಬೆಳೆಸುವ ಮೂಲಕ ನದಿ ಪುನಶ್ಚೇತನಕ್ಕೆ ನಾವೆಲ್ಲರೂ ಚಿಂತಿಸಬೇಕಿದೆ. ಮುಖ್ಯವಾಗಿ, ಇತ್ತೀಚೆಗೆ ದಾರಿತಪ್ಪಿ ಅರಿವಿಲ್ಲದೆ ಸಾಗುತ್ತಿರುವ ಯುವಕರು ಕೆರೆ - ನದಿಗಳ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಜಾಗೃತಿ ಅಭಿಯಾನಗಳು ನಡೆಯಬೇಕು. ತುಮಕೂರು ವಿವಿ ಹಮ್ಮಿಕೊಂಡಿರುವ ಇಂತಹ ಜಯಮಂಗಲಿ ನದಿ ಪುನಶ್ಚೇತನದ ಕಾರ್ಯಗಳು ದೇಶದ ಎಲ್ಲೆಡೆ ನಡೆದರೆ ಒಳ್ಳೆಯದು ಎಂದು ಆಶಿಸಿದರು.
ತುಮಕೂರು ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್​.ಎಸ್​.ಮೋಹನ್​ ಮಾತನಾಡಿ, ನಾಗರಿಕತೆಯ ತೊಟ್ಟಿಲುಗಳಾದ ನದಿಗಳ ಮೂಲಕವೇ ಹಿಂದೆ ಜನರನ್ನು ಗುರುತಿಸಲಾಗುತ್ತಿತ್ತು. ನದಿಗಳು, ಹಳ್ಳ-ಕೊಳ್ಳಗಳು ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಸಾರ್ವಜನಿಕರ ಪರವಾಗಿ ಸದಾ ನಿಲ್ಲುವ ತುಮಕೂರು ವಿಶ್ವವಿದ್ಯಾಲಯವು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ನದಿಗಳ ಸ್ವಚ್ಛತೆ ಮಾಡುವ ಕಾರ್ಯಕ್ಕೆ ಸಾಕ್ಷಿಯಾಗಲಿದೆ ಎಂದು ಭರವಸೆ ನೀಡಿದರು.
ಆದರ್ಶ್​ ಸಂಸ್ಥೆಯ ಯೋಜನಾ ನಿರ್ದೇಶಕ ಡಿ.ವಿ. ರಘು ಪ್ರಾಸ್ತಾವಿಕವಾಗಿ ಮಾತನಾಡಿ, ಬದುಕಿನ ಉಳಿವಿಗಾಗಿ ಹಳ್ಳ-ಕೊಳ್ಳ, ಕೆರೆ-ಕಟ್ಟೆ ಹಾಗೂ ಹುಲ್ಲುಗಾವಲುಗಳನ್ನು ಕಾಪಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಷ್ಟೇ ಅಲ್ಲದೆ ಸ್ಥಳಿಯ ಸರ್ಕಾರಗಳು ಕೂಡ ಗಂಭೀರವಾಗಿ ಗಮನ ಹರಿಸಬೇಕು ಎಂದರು.
ತುಮಕೂರು ವಿವಿ ಕಲಾ ನಿಕಾಯದ ಡೀನ್​ ಹಾಗೂ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಪ್ರೊ. ಕೆ. ಜಿ. ಪರಶುರಾಮ್​ ಸ್ವಾಗತಿಸಿದರು. ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಡಾ.ಎಂ.ಮುನಿರಾಜು ವಂದಿಸಿದರು. ಧ್ಯಾನ ಸಂಸ್ಥೆಯ ಕೃಷಿ ಮತ್ತು ಜಲ ತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net