ಭಾರತದ ಮಧುರಿಮಾ ಶುಭಾರಂಭ

ಭಾರತದ ಮಧುರಿಮಾ ಸಾವಂತ್​
ಭಾರತದ ಮಧುರಿಮಾ ಸಾವಂತ್​
Published on

ಪ್ರಮುಖ ಮುಖ್ಯಾಂಶಗಳು

  • ಐಟಿಎಫ್​ ಡಬ್ಲೂ 35 ಮಹಿಳಾ ಚಾಂಪಿಯನ್​ ಶಿಪ್​
  • ಸಿಂಗಲ್ಸ್​ನಲ್ಲಿ ಭಾರತೀಯರ ಪಾರಮ್ಯ
  • ನಿರಾಸೆ ಮೂಡಿಸಿದ ಸ್ನಿಗ್ಧಾ ಕಾಂತಾ
ತುಮಕೂರು: ಭಾರತದ ಮಧುರಿಮಾ ಸಾವಂತ್​ ಐಟಿಎಫ್​ ವಿಶ್ವ ಮಹಿಳಾ ಟೆನಿಸ್​ ಚಾಂಪಿಯನ್​ಶಿಪ್​ (ಡಬ್ಲೂ35 ಟೂರ್ನಿ) ಸಿಂಗಲ್ಸ್​ನಲ್ಲಿ ಶುಭಾರಂಭ ಮಾಡಿದರು.
ನಗರದ ವಿವಿ ಆವರಣದ ಜಿಲ್ಲಾ ಟೆನಿಸ್​ ಕ್ರೀಡಾಂಗಣದಲ್ಲಿ ಮಂಗಳವಾರ ಪ್ರಧಾನ ಸುತ್ತಿನ ಸಿಂಗಲ್ಸ್​ ಪಂದ್ಯದಲ್ಲಿ ಮಧುರಿಮಾ ಸಾವಂತ್​ 6-2, 3-6, 6-1 ಸೆಟ್​ಗಳಿಂದ ರಷ್ಯಾದ ಮಾರಿಯಾ ಮಿಕೈಲೋವಾ ಅವರನ್ನು ಸೋಲಿಸಿ ಪ್ರೀ-ಕ್ವಾರ್ಟರ್​ ಹಂತಕ್ಕೆ ಪ್ರವೇಶಿಸಿದರು. ಮೊದಲ ಸೆಟ್​ ಅನ್ನು ನಿರಾಯಾಸವಾಗಿ 6-2 ರಿಂದ ಗೆದ್ದ ಮಧುರಿಮಾ 2ನೇ ಸೆಟ್​ನಲ್ಲಿ ಮಿಕೈಲೋವಾ ಹೋರಾಟದ ಮುಂದೆ ಶರಣಾದರು. 3ನೇ ಹಾಗೂ ನಿರ್ಣಾಯಕ ಸೆಟ್​ನಲ್ಲಿ ಮಧುರಿಮಾ ಆರಂಭದಿಂದಲೇ ಮೇಲುಗೈ ಸಾಧಿಸಿ 6-1 ರಿಂದ ಸುಲಭವಾಗಿ ಗೆದ್ದುಬಿಗಿದರು.
ಮತ್ತೊಂದು ಪಂದ್ಯದಲ್ಲಿ ಸಂದೀಪ್ತಿ ಸಿಂಗ್​ ರಾವ್​ 6-3, 6-4 ನೇರ ಸೆಟ್​ಗಳಿಂದ ಯಶಸ್ವಿನಿ ಪನ್ವಾರ್​ರನ್ನು ಮಣಿಸಿದರು. ಪೂಜಾ ಇಂಗಳೆ 7-5, 1-6, 6-4 ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಡ್ಯಾನಿಕಾ ಫರ್ನಾಂಡೊರನ್ನು ಸೋಲಿಸಿದರು.
ಕ್ವಾಲಿಫೈಯಿಂಗ್​ ಸುತ್ತಿನಲ್ಲಿ ಭರವಸೆ ಮೂಡಿಸಿದ್ದ ಆತಿಥೇಯ ಕರ್ನಾಟಕದ ಸ್ನಿಗ್ಧಾ ಕಾಂತಾ ಪ್ರಧಾನ ಸುತ್ತಿನ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಸ್ನಿಗ್ಧಾ 0-6, 3-6 ರಿಂದ ಸೋನಾಲ್​ ಪಾಟೀಲ್​ ಎದುರು ಸುಲಭ ತುತ್ತಾದರು.
ಒಜೆಕಿಗೆ ಸೋಲು: ರಷ್ಯಾದ ಕ್ಸೆನಿಯಾ ಲುಸ್ಕಟೋವಾ 6-3, 7-6 ನೇರ ಸೆಟ್​ ಗಳಿಂದ ಜಪಾನ್​ನ 7ನೇ ಶ್ರೇಯಾಂಕಿತ ಮಿಚಿಕಾ ಒಜೆಕಿ ವಿರುದ್ಧ ಅರ್ಹ ಗೆಲುವು ದಾಖಲಿಸಿದರೆ, ರಷ್ಯಾದ ಐದನೇ ಶ್ರೇಯಾಂಕಿತ ಎಲಿನಾ ನೆಪ್ಲಿ 6-4, 6-1 ಸೆಟ್​ಗಳಿಂದ ಭಾರತದ ಹರ್ಷಿಣಿ ಎನ್​.ನಾಗರಾಜ್​ರನ್ನು ಮಣಿಸಿ ಪ್ರೀ-ಕ್ವಾರ್ಟರ್​ಗೆ ಲಗ್ಗೆಯಿಟ್ಟರು.
ರಷ್ಯಾಜೋಡಿಗೆ ಆಘಾತ: ಮಹಿಳಾ ಡಬಲ್ಸ್​ನಲ್ಲಿ ಭಾರತದ ಅಗ್ರ ಶ್ರೇಯಾಂಕಿತ ವೈದೇಹಿ ಚೌಧರಿ ಮತ್ತು ಪೋಲೆಂಡ್​ನ ಜುಝುನ್ನಾ ಪಾವ್ಲಿಕೋವ್ಸಾ 6-1, 6-2 ನೇರ ಸೆಟ್​ಗಳಿಂದ ರಷ್ಯಾದ ಮಾರಿಯಾ ಮಿಕೈಲೋವಾ ಮತ್ತು ಭಾರತದ ಸಂದೀಪ್ತಿ ಸಿಂಗ್​ ರಾವ್​ ಜೋಡಿಯನ್ನು ಸೋಲಿಸಿತು.
4ನೇ ಶ್ರೇಯಾಂಕದ ಭಾರತದ ಶ್ರವ್ಯಾ ಶಿವಾನಿ ಚಿಲಕಲಪುಡಿ ಮತ್ತು ಝೀಲ್​ ದೇಸಾಯಿ 6-0, 6-2 ಸೆಟ್​ಗಳಿಂದ ಭಾರತದ ಯಶಸ್ವಿನಿ ಪನ್ವಾರ್​ ಮತ್ತು ಬೇಲಾ ತಮ್ಮಾಂಕರ್​ರನ್ನು ಸುಲಭವಾಗಿ ಮಣಿಸಿದರು.
ಭಾರತದ ಐಶ್ವರ್ಯ ಜಾಧವ್​ ಮತ್ತು ಆಕೃತಿ ನಾರಾಯಣ್​ ಸೋಂಕುಸಾರೆ 6-4, 7-5 ನೇರ ಸೆಟ್​ಗಳಿಂದ ರಷ್ಯಾದ 2ನೇ ಶ್ರೇಯಾಂಕದ ಅರಿನಾ ಅರಿಫುಲ್ಲಿನಾ ಮತ್ತು ಎಕಟೆರಿನಾ ಯಾಶಿನಾರನ್ನು ಮಣಿಸಿ ಆಘಾತ ನೀಡಿದರು.
ಶ್ರೀಣಿತಿ ಚೌಧರಿ ಮತ್ತು ಜಿ.ಡಿ.ಮೇಘನಾ 0-6, 2-6 ರಿಂದ ರಷ್ಯಾದ ಕ್ಸೆನಿಯಾ ಲಾಸ್ಕುಟೋವಾ ಮತ್ತು ಎಲಿನಾ ನೆಪ್ಲಿ ಜೋಡಿಗೆ ಸುಲಭ ತುತ್ತಾದರು. ತುಮಕೂರು ತಾಲೂಕು ಸೀತಕಲ್​ನ ಗಿಡ್ಡನಹಳ್ಳಿಯ ಮೇಘನಾರಿಂದ ಉತ್ತಮ ಪ್ರದರ್ಶನ ನಿರೀಕ್ಷೆಯಲ್ಲಿ ತವರು ಪ್ರೇಕ್ಷಕರಿಗೆ ನಿರಾಸೆಯಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net