ಡಿಸಿ, ಎಡಿಸಿ ವಿರುದ್ಧ ಕ್ರಮಕ್ಕೆ ಮಾಹಿತಿ ಆಯೋಗ ಸೂಚನೆ

ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಳಿದ್ದ ಮಾಹಿತಿ
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಳಿದ್ದ ಮಾಹಿತಿ
Published on

ಪ್ರಮುಖ ಮುಖ್ಯಾಂಶಗಳು

  • ಆರ್ ಟಿಐ ಅರ್ಜಿಗೆ ಮಾಹಿತಿ ನೀಡದ ಅಪರ ಜಿಲ್ಲಾಧಿಕಾರಿ
  • ಪ್ರಥಮ ಮೇಲ್ಮನವಿಗೂ ಸೊಪ್ಪುಹಾಕದ ಡಿಸಿ
  • ತುಮಕೂರು ನಗರದ ಸರ್ವೆ ನಂ.361ರ ವಿವಾದ
ತುಮಕೂರು: ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಮಾಹಿತಿ ಹಕ್ಕು ಅಧಿನಿಯಮದಡಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಕಾಲದಲ್ಲಿ ಉತ್ತರ ನೀಡದ ಸಾರ್ವಜನಿಕ ಮಾಹಿತಿ ಅಧಿಕಾರಿ, ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಯೂ ಆದ ಜಿಲ್ಲಾಧಿಕಾರಿ ಶುಭಕಲ್ಯಾಣ್​ ವಿರುದ್ಧ ಕ್ರಮಕ್ಕೆ ಮಾಹಿತಿ ಆಯೋಗ ಸೂಚಿಸಿದೆ.
ಮಾಹಿತಿ ಒದಗಿಸದ ಅಧಿಕಾರಿಗಳ ವಿರುದ್ಧ ತುಮಕೂರಿನ ಜಿ.ಎಸ್​.ಬಸವರಾಜು ಎಂಬುವವರು ಸಲ್ಲಿಸಿದ್ದ ದೂರು ವಿಚಾರಣೆ ನಡೆಸಿರುವ ಆಯೋಗ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಿ ಸಕಾಲಕ್ಕೆ ಮಾಹಿತಿ ಕೊಡಿಸಲು ಕ್ರಮ ವಹಿಸುವಂತೆ ಸೂಚಿಸಿದೆ.
ತುಮಕೂರು ಹೋಬಳಿ ಸರ್ವೆ ನಂ.361ಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರ ಆದೇಶದಂತೆ ಜರುಗಿಸಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಜಿ.ಎಸ್​.ಬಸವರಾಜು ಎಂಬುವರು ಹಕ್ಕು ನಿಯಮದಡಿ 2025 ಜೂನ್​ ತಿಂಗಳಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ಕೋರಿದ್ದರು. ನಿಗಧಿತ ಸಮಯಕ್ಕೆ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೂ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ.
ಆಯೋಗದ ವಿಚಾರಣೆಗೂ ಗೈರು ಹಾಜರಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮಾಹಿತಿ ಆಯೋಗ ಮುಂದಿನ ವಿಚಾರಣೆ ಒಳಗೆ ಸಂಬಂಧಿಸಿದವರಿಗೆ ಮಾಹಿತಿ ನೀಡಬೇಕು. ಜತೆಗೆ ದಂಡ ಏಕೆ ವಿಧಿಸಬಾರದು ಎಂದು ಪ್ರಶ್ನಿಸಿದ್ದು ಏ.10ರಂದು ನಡೆಯುವ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗುವಂತೆ ಅಧಿಕಾರಿಗಳಿಗೆ ಆದೇಶಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net