ತುಮಕೂರು: ಯುಗಾದಿ ಹಬ್ಬದ ಆಚರಣೆ ಸಮಯದಲ್ಲಿ ಜೂಜಾಟ ನಿಷೇಧಿಸಲಾಗಿದೆ. ಕಲ್ಯಾಣ ಮಂಟಪ, ಹೋಟೆಲ್, ವಸತಿ ಗೃಹಗಳು, ಮನೆ, ತೋಟದ ಮನೆಗಳು, ರಸ್ತೆಯ ಬದಿಗಳಲ್ಲಿ ಟೆಂಟ್ ಹಾಕಿಕೊಂಡು ಜೂಜಾಡುವುದನ್ನು ನಿಷೇಧಿಸಿ ಜಿಲ್ಲಾ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಯಾವುದೇ ರೀತಿಯ ಜೂಜಾಟ ಕಂಡುಬಂದಲ್ಲಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಇದಕ್ಕೆ ಪ್ರೋತ್ಸಾಹಿಸಿದ ಸ್ಥಳದ ಮಾಲೀಕರು/ಮಧ್ಯವರ್ತಿಗಳ ಮೇಲು ಸಹಾ ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ಸಂಬಂಧಿಸಿದವರ ಚರ ಮತ್ತು ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅಕ್ರಮ ಜೂಜಾಟದಲ್ಲಿ ತೊಡಗುವವರ ವಿರುದ್ಧ ಗಡಿಪಾರು/ಗೂಂಡಾ ಕಾಯ್ದೆಯಂತಹ ಕಠಿಣ ಕ್ರಮ ಜರುಗಿಸಲಾಗುವುದು. ಹಾಗಾಗಿ, ಸಾರ್ವಜನಿಕರು ಯಾವುದೇ ರೀತಿಯ ಜೂಜಾಟದಲ್ಲಿ ತೊಡಗುವುದಾಗಲಿ ಅದಕ್ಕೆ ಅವಕಾಶ ಮಾಡಿಕೊಡುವುದಾಗಲಿ ಪ್ರೋತ್ಸಾಹ ಕೊಡುವುದಾಗಲಿ ಮಾಡಬಾರದಾಗಿ ಈ ಮೂಲಕ ಎಚ್ಚರಿಸಲಾಗಿದೆ.
ಜೂಜಾಟವು ಸಮಾಜಕ್ಕೆ ದೊಡ್ಡ ಪಿಡುಗಾಗಿದ್ದು ಜೂಜಾಟದಲ್ಲಿ ತೊಡಗಿ ಹಣ ಕಳೆದುಕೊಂಡು ಆ ಖಿನ್ನತೆಯಲ್ಲಿ ಮದ್ಯವ್ಯಸನಿಯಾಗಿ ತಮ್ಮಗಳ ಸಂಸಾರಗಳನ್ನು ಹಾಳುಮಾಡಿಕೊಳ್ಳುತ್ತಿದ್ದು ಇದರಿಂದ ಕುಟುಂಬ ಮತ್ತು ಸಮಾಜವು ಹಾಳಾಗಲಿದೆ. ಯಾವುದೇ ಜೂಜಾಟ ಕಂಡುಬಂದಲ್ಲಿ ತತಕ್ಷಣ 112 ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ 9480802900 ಗೆ ಕರೆಮಾಡುವಂತೆ (ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು) ಜಿಲ್ಲಾ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.