ಬೆಂಗಳೂರು ಉತ್ತರ ಜಿಲ್ಲೆ ಪ್ರಸ್ತಾಪಕ್ಕೆ ಬಿಜೆಪಿ ತೀವ್ರ ಆಕ್ಷೇಪ
ಶಾಸಕರಾದ ಸುರೇಶಗೌಡ, ಜ್ಯೋತಿಗಣೇಶ್ ಆಕ್ರೋಶ
ಕೇಡು ಬುದ್ಧಿ ಯಾಕೆ ಬಂತು ?
ತುಮಕೂರು: ಸಿಎಂ ಆಗಲು ಇನ್ನೊಂದು ಹೆಜ್ಜೆ ಇದ್ದು ಇದನ್ನೆಲ್ಲಾ ಪರಮೇಶ್ವರ್ಗೆ ಕೊಟ್ಟಿರುವುದು ತುಮಕೂರೇ ಹೊರತು ಬೆಂಗಳೂರಲ್ಲ. ಇಂತಹ ಐತಿಹಾಸಿಕ ತುಮಕೂರು ಜಿಲ್ಲೆ ಹೆಸರಿಗೆ ಮಸಿ ಬಳಿಯಲು ಹೊರಟಿರುವುದು ಸರಿಯಲ್ಲ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಹೇಳಿದರು.
ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಘೋಷಿಸುವಂತೆ ಸಿಎಂ, ಡಿಸಿಎಂ ಅವರನ್ನು ಒತ್ತಾಯಿಸಿದ್ದು ಆಘಾತಕಾರಿ. ಅನೇಕ ಶಿಕ್ಷಣ ಸಂಸ್ಥೆಗಳ ಒಡೆತನ ಹೊಂದಿರುವ ಪರಮೇಶ್ವರ್ ಈ ಆಗ್ರಹ ಮಾಡಿರುವುದರ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿರುವ ರಿಯಲ್ ಎಸ್ಟೇಟ್ ಮಾಫಿಯಾ ಕೈವಾಡ ಎದ್ದು ಕಾಣುತ್ತದೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಾಗ್ಧಾಳಿ ನಡೆಸಿದರು.
ಇದೇ ಜಿಲ್ಲೆಯಿಂದ ರಾಜಕೀಯವಾಗಿ ಎಲ್ಲವನ್ನೂ ಗಳಿಸಿರುವ ಪರಮೇಶ್ವರ್ ಮಂತ್ರಿ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ. ಈಗ ತುಮಕೂರು ಜಿಲ್ಲೆ ಹೆಸರನ್ನೇ ಬದಲಿಸುವ ಕೇಡು ಬುದ್ಧಿ ಯಾಕೆ ಬಂತು ಅವರಿಗೆ. ಡಿಸಿಎಂ ಡಿ.ಕೆ. ಶಿವಕುಮಾರ್ಗೆ ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಎಂದು ಘೋಷಿಸುವಲ್ಲಿ ಅವರಿಗೆ ಇದ್ದ ರಿಯಲ್ ಎಸ್ಟೇಟ್ ಹಿತಾಸಕ್ತಿಯೇ ಕಾರಣವಾಗಿತ್ತು. ಹಾಗಾದಲ್ಲಿ ಪರಮೇಶ್ವರ್ಗು ಅಂತಹ ಮಾಫಿಯಾದ್ದ ಒತ್ತಡವಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
600 ವರ್ಷಗಳ ಇತಿಹಾಸ ಹೊಂದಿರುವ ಸಿದ್ಧಗಂಗಾ ಕ್ಷೇತ್ರ, ದೇವರಾಯನದುರ್ಗ, ಕೈದಾಳದ ಚನ್ನಕೇಶವ ದೇವಾಲಯ ಮುಂತಾದ ಐತಿಹಾಸಿಕ ದೇವಾಲಯಗಳಿಂದ ಪ್ರಸಿದ್ಧವಾಗಿದೆ. ತುಂಬೆ ಹೂವಿಗೆ ಪ್ರಸಿದ್ಧವಾಗಿದ್ದ ಕಲ್ಪತರು ನಾಡು ಐತಿಹ್ಯ ಹೊಂದಿರುವ ಜಿಲ್ಲೆ. ಇಂತಹ ಜಿಲ್ಲೆಯ ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಕರೆದರೆ ಈ ಎಲ್ಲ ಚರಿತ್ರೆ ಅಳಿಸಿ ಹೋಗಲಿವೆ. ಇತಿಹಾಸ ಮರೆಮಾಚಿದಂತಾಗುತ್ತದೆ. ಅಲ್ಲದೆ ಇಂತಹ ನಿರ್ಧಾರವು ಕೃಷಿವಲಯಕ್ಕು ಪೆಟ್ಟು ಕೊಡಲಿದೆ. ಇದೊಂದು ರೈತ ವಿರೋಧಿ ಪ್ರಸ್ತಾಪ ಎಂದರು.
ನಗರೀಕರಣ ಹೆಸರಲ್ಲಿ ಜನರನ್ನು ಗುಳೆ ಎಬ್ಬಿಸುವುದು ಮೊದಲ ಕೆಲಸ. ಅಲ್ಲಿ ಕಟ್ಟಡ, ಮಾಲ್ ಬಂದು ಕೃಷಿ ಯೋಗ್ಯ ಭೂಮಿ ನಾಶವಾಗಲಿದೆ. ಕರ್ನಾಟಕವು ರೈತರ ಆತ್ಮಹತ್ಯೆಯಲ್ಲಿ ಈಗಾಗಲೇ ದೇಶದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಅದನ್ನು ಒಂದನೇ ಸ್ಥಾನಕ್ಕೆ ಏರಿಸುವುದು ಇವರೆಲ್ಲರ ಉದ್ದೇಶವೇ ಎಂದು ಪ್ರಶ್ನಿಸಿದ ಸುರೇಶಗೌಡ, ಬೆಂಗಳೂರು ಉತ್ತರ ಜಿಲ್ಲೆಗ ನಮ್ಮ ವಿರೋಧ. ತುಮಕೂರು ಅಭಿವೃದ್ಧಿ ಆಗಬೇಕು ಎನ್ನುವುದು ನಮ್ಮ ನಿಲುವು ಅಲ್ಲ. ತುಮಕೂರಿಗೆ ಏನೇನು ಬರಬೇಕೋ ಅದೆಲ್ಲವೂ ಬರಬೇಕು. ಅದನ್ನು ಹೆಸರು ಬದಲಿಸಿ ತರುತ್ತೇವೆ ಎನ್ನುವುದು ಸರ್ಕಾರದ ಹೊಣೆಗೇಡಿತನಕ್ಕೆ ಸಾಕ್ಷಿಯಾಗಿದೆ ಎಂದು ಹರಿಹಾಯ್ದರು.
ಅಸ್ಮಿತೆಗೆ ಧಕ್ಕೆ: ತುಮಕೂರಿಗೆ ತನ್ನದೇ ಆದ ಅಸ್ಮಿತೆ ಇದೆ. ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಮಾಡಿದರೆ ಇಲ್ಲಿನ ಇತಿಹಾಸ, ಪರಂಪರೆಗೆ ಪೆಟ್ಟು ಬೀಳುತ್ತದೆ. ಇಲ್ಲಿನ ಜನಜೀವನ ಶೈಲಿ ಹದಗೆಡುತ್ತದೆ. ತುಮಕೂರನ್ನು ರಿಯಲ್ ಎಸ್ಟೇಟ್ಗೆ ಬಲಿ ಕೊಡಬಾರದು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಹೊರ ರಾಜ್ಯದವರೇ ತುಂಬಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ನಮ್ಮತನ ಉಳಿಸಿಕೊಂಡು ಹೋಗಬೇಕು. ಸಚಿವ ಪರಮೇಶ್ವರ್ಗೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ತುಮಕೂರು ಜಿಲ್ಲೆ ಹೆಸರು ಉಳಿಸಿಕೊಂಡು ಅಭಿವೃದ್ಧಿ ಮಾಡಲಿ, ಜಿಲ್ಲೆಯ ಇತಿಹಾಸ, ಸಾಂಸ್ಕತಿಕ ಮಹತ್ವಕ್ಕೆ ಧಕ್ಕೆ ಮಾಡುವುದು ಬೇಡ. ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಮಾಡುವುದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್. ರವಿಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಚ್. ಹನುಮಂತರಾಜು, ನಗರಾಧ್ಯಕ್ಷ ಧನುಷ್, ನಗರ ಮಹಿಳಾ ಮೋರ್ಚಾ ಅಧ್ಯೆ ವಸಂತಮ್ಮ, ಪ್ರಭಾಕರ್ ಹಾಜರಿದ್ದರು.
ಬೆಂಗಳೂರಿಗೆ ವಿಶ್ವಮಟ್ಟದಲ್ಲಿ ಹೆಸರಿರಬಹುದು. ಎಲ್ಲಾ ಮಾಫಿಯಾಗಳ ನಗರ ಅದು. ಟ್ರಾಫಿಕ್, ಜನದಟ್ಟಣೆ, ಗುಂಡಿ ತುಂಬಿದ ರಸ್ತೆಗಳು ಬದಕುವುದೇ ದುಸ್ತರವೆನಿಸಿದೆ. ಬೆಂಗಳೂರು ಅಸಹ್ಯ ಅನಿಸಿಬಿಟ್ಟಿದೆ. ಇಷ್ಟೆಲ್ಲಾ ಸಮಸ್ಯೆಗಳ ಭಾರದಲ್ಲಿ ಕುಸಿಯುತ್ತಿರುವ ಬೆಂಗಳೂರಿಗೆ ದಕ್ಷಿಣದಲ್ಲಿ ರಾಮನಗರ ಮತ್ತು ಉತ್ತರದಲ್ಲಿ ತುಮಕೂರು ಸೇರಿಸಿ ಸಮಸ್ಯೆಗಳ ಸುಳಿಯಲ್ಲಿ ಜನರನ್ನು ಸಿಲುಕಿಸುವ ಹುನ್ನಾರವೇ ಇದು. ಈ ಪ್ರಸ್ತಾವನೆಯನ್ನು ವಾಪಸ್ ಪಡೆಯಬೇಕು.