ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ ಹರಿದ ಹೇಮೆ

ಬುಗಡನಹಳ್ಳಿ  ಜಲಸಂಗ್ರಹಾಗಾರಕ್ಕೆ ಹೇಮೆ  ನೀರು ಹರಿಯುತ್ತಿದೆ.
ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ ಹೇಮೆ ನೀರು ಹರಿಯುತ್ತಿದೆ.
Published on

ಪ್ರಮುಖ ಮುಖ್ಯಾಂಶಗಳು

  • 650 ಕ್ಯುಸೆಕ್​ ಪ್ರಮಾಣದಲ್ಲಿ ಹರಿಯುತ್ತಿರುವ ನೀರು
  • 7 ದಿನದೊಳಗೆ ತುಂಬಲಿದೆ ಜಲಸಂಗ್ರಹಗಾರ
  • 5 ತಿಂಗಳು ನೀರಿನ ಸಮಸ್ಯೆ ಇರೋಲ್ಲ
ತುಮಕೂರು: ಸ್ಮಾರ್ಟ್​ಸಿಟಿ ತುಮಕೂರಿ ಕುಡಿಯುವ ನೀರಿನ ದಾಹ ನೀಗಿಸುವ ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ ಹೇಮೆ ನೀರು ತಲುಪಿದೆ. ಬೇಸಿಗೆ ಹಿನ್ನೆಲೆ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಜಿಲ್ಲಾಕೇಂದ್ರಕ್ಕೆ ನೀರು ಪೂರೈಸುವ ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ ಬುಧವಾರ ಬೆಳಗ್ಗೆ 9 ಗಂಟೆಯೊತ್ತಿಗೆ ಹೇಮೆ ನೀರು ಹರಿದುಬಂದಿದ್ದು 7 ದಿನದೊಳಗೆ ತುಂಬಲಿದೆ.
ಹಾಸನ ಜಿಲ್ಲೆ ಗೊರೂರು ಹೇಮಾವತಿ ಜಲಾಶಯದಿಂದ ತುಮಕೂರಿಗೆ ಮೇ 10 ರಂದು ನೀರು ಬಿಡಲಾಗಿದ್ದು ಬುಧವಾರ ಬೆಳಗ್ಗೆ ತುಮಕೂರು ತಲುಪಿದೆ. ಮೇ 20ರವರೆಗೆ ಹೇಮೆ ನೀರು ಹರಿಸಲಾಗುವುದು. ತುಮಕೂರು ಶಾಖಾ ನಾಲೆಯಲ್ಲಿ 1200 ಕ್ಯುಸೆಕ್​ನಷ್ಟು ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಬುಗಡನಹಳ್ಳಿ ಜಲಸಂಗ್ರಹಾಗಾರದವರೆಗೆ 124 ಕಿ.ಮೀ., ನಾಲೆ ಉದ್ದವಿದ್ದು ತುಮಕೂರಿಗೆ ನೀರು ತಲುಪಲು 3 ದಿನ ಬೇಕಾಯಿತು.
ಬುಗಡನಹಳ್ಳಿ ಭರ್ತಿಗೆ 7 ದಿನ: ಹೇಮಾವತಿ ಶಾಖಾ ನಾಲೆಯಲ್ಲಿ 1200 ಕ್ಯುಸೆಕ್​ನಷ್ಟು ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆಯಾದರೂ ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ 650 ಕ್ಯುಸೆಕ್​ ಪ್ರಮಾಣದ ನೀರು ಹರಿಯುತ್ತಿದೆ. ಹಾಗಾಗಿ, ಜಲಸಂಗ್ರಹಾಗಾರ ತುಂಬಲು 6-7 ದಿನಗಳು ಬೇಕಿದೆ. ಸದ್ಯ ಜಲಸಂಗ್ರಹಾಗಾರದಲ್ಲಿ ಇರುವ ನೀರನ್ನು ಇನ್ನೂ 15 ದಿನಗಳವರೆಗೆ ಪೂರೈಸಬಹುದಾಗಿದೆ.
366 ಎಂಸಿಎಫ್ ಟಿ ಸಾಮರ್ಥ್ಯದ ಬುಗಡನಹಳ್ಳಿ ಜಲಸಂಗ್ರಹಗಾರವನ್ನು ಒಮ್ಮೆ ತುಂಬಿಸಿಕೊಂಡರೆ ಇನ್ನೂ 5 ತಿಂಗಳವರೆಗೆ ತುಮಕೂರು ನಗರವು ನೀರಿನ ಸಮಸ್ಯೆಯಿಂದ ಮುಕ್ತಿ ಹೊಂದಲಿದೆ. ಹೆಚ್ಚುವರಿಯಾಗಿ 192 ಎಂಸಿಎಫ್ ಟಿ ಸಾಮರ್ಥ್ಯದ ಹೆಬ್ಬಾಕ ಕೆರೆಯನ್ನು ತುಂಬಿಸಿಕೊಳ್ಳಬಹುದು. ಪ್ರತಿನಿತ್ಯ 66-70 ಎಂಎಲ್​ಡಿ ನೀರಿನ ಅವಶ್ಯಕತೆ ಇದ್ದು ಜತೆಗೆ ಕೊಳವೆಬಾವಿಗಳಿಂದ ಪ್ರತಿನಿತ್ಯ 16 ಎಂಎಲ್​ಡಿ ನೀರು ಲಭ್ಯವಿರಲಿದೆ.
ನಗರದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿತ್ತು. ಹಾಸನ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ಮನವಿ ಮಾಡಿಕೊಂಡ ಹಿನ್ನೆಲೆ ಹೇಮಾವತಿ ಜಲಾಶಯದಿಂದ ಭಾನುವಾರದಿಂದ ತುಮಕೂರು ಬ್ರಾಂಚ್​ ಕ್ಯಾನೆಲ್​ಗೆ ನೀರು ಬಿಡಲಾಗಿದ್ದು ಬುಧವಾರ ಬುಗಡನಹಳ್ಳಿಗೆ ನೀರು ತಲುಪಿದೆ. 5 ತಿಂಗಳು ಇನ್ನು ನೀರಿನ ಸಮಸ್ಯೆ ಇರುವುದಿಲ್ಲ.
ಬಿ.ಶುಭ
ಮಹಾನಗರ ಪಾಲಿಕೆ
ಫೋಟೋ: ತುಮಕೂರು ನಗರಕ್ಕ ನೀರು ಪೂರೈಸುವ ಬುಗಡನಹಳ್ಳಿ ಜಲಸಂಗ್ರಹಾರಕ್ಕೆ ಹರಿದುಬರುತ್ತಿರುವ ಹೇಮಾವತಿ ನೀರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net