ತುರುವೇಕೆರೆ:ಜೀವನದಲ್ಲಿ ಕಷ್ಟಗಳನ್ನು ಧೈರ್ಯದಿಂದ ಎದುರಿಸಿದರೆ ಸಮಾಜದಲ್ಲಿ ಬೆಳೆಯಲು ಸಾಧ್ಯ ಎಂದು ಲಯನ್ಸ್ ಕ್ಲಬ್ ನೂತನ ಅದ್ಯಕ್ಷ ಸುನಿಲ್ ಬಾಬು ತಿಳಿಸಿದರು.
ಪಟ್ಟಣದ ಚೌದ್ರಿ ಕನ್ವೆನ್ಷನ್ ಹಾಲ್ನಲ್ಲಿ ಲಯನ್ಸ್ ಕ್ಲಬ್ ವತಿಯಿಂದ 2026&-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಮನುಷ್ಯನಿಗೆ ಜೀವನದಲ್ಲಿ ಕಷ್ಟ ಸುಖಗಳು ಬಂದು ಹೋಗುತ್ತವೆ. ಆದರೆ ಕಷ್ಟ ಬಂದ ಸಂದರ್ಭದಲ್ಲಿ ಎದೆಗುಂದದೆ ಧೈರ್ಯವಾಗಿ ಎದುರಿಸಬೇಕು. ಆಗ ಸಾಧನೆ ಮಾಡಲು ಸಾಧ್ಯ. ಲಯನ್ಸ್ ಕ್ಲಬ್ ಎಲ್ಲ ಸದಸ್ಯರ ಸಹಕಾರದೊಂದಿಗೆ ಈ ವರ್ಷ ತಾಲೂಕಿನಲ್ಲಿ ಉತ್ತಮ ಸೇವಾ ಕಾರ್ಯಕ್ರಮ ಮಾಡಲಾಗುವುದು ಎಂದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಪಟ್ಟಣದ ಲಯನ್ಸ್ ಕ್ಲಬ್ ಉತ್ತಮ ಸೇವಾ ಕಾರ್ಯಕ್ರಮ ನಡೆಸುತ್ತಿದೆ. ಒಂದು ವರ್ಷದಲ್ಲಿ ಸುನಿಲ್ ಕುಮಾರ್ ತಂಡ ಸಮಾಜ ಮುಖಿ ಕಾರ್ಯಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು. ನೂತನ ಸದಸ್ಯರಾಗಿ ವೆಂಕಾಟಪುರ ಯೋಗೀಶ್, ಸಂತೋಷ್ ಕಂಟ್ಲಿ ಮತ್ತಿತರರು ಸೇರ್ಪಡೆಯಾದರು.
ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಪ್ರಾಂತ ಅಧ್ಯಕ್ಷ ಎಚ್.ಎಸ್.ಮಹೇಶ್, ಕಲ್ಪತರು ಲಯನ್ಸ್ ಚಾರಿಟಬಲ್ ಅಧ್ಯಕ್ಷ ಡಾ.ಚೌದ್ರಿನಾಗೇಶ್, ವಲಯ ಅಧ್ಯಕ್ಷ ಕೆ.ಲೋಕೇಶ್, ನಿರ್ಗಮಿತ ಅಧ್ಯಕ್ಷ ಎಚ್.ಎನ್.ಪರಮೇಶ್ವರಸ್ವಾಮಿ, ಕಾರ್ಯದರ್ಶಿ ಡಾ.ಎ.ನಾಗರಾಜು, ಖಜಾಂಚಿ ಸುನಿಲ್ ಕುಮಾರ್ ಇತರರು ಇದ್ದರು.