ಬಿಸಿಲಿನ ತಾಪಕ್ಕೆ ಕುಸಿದ ಅಂತರ್ಜಲ

ಕುಣಿಗಲ್​ ತಾಲೂಕಿನ ತೆರದಕುಪ್ಪೆ ಗ್ರಾಮದ ರೈತ ದೇವರಾಜು ಅಡಿಕೆ ತೊಟಕ್ಕೆ ಟ್ಯಾಂಕರ್​ ಮೂಲಕ ನೀರು ಹಾಯಿಸುತ್ತಿರುವುದು.
ಕುಣಿಗಲ್​ ತಾಲೂಕಿನ ತೆರದಕುಪ್ಪೆ ಗ್ರಾಮದ ರೈತ ದೇವರಾಜು ಅಡಿಕೆ ತೊಟಕ್ಕೆ ಟ್ಯಾಂಕರ್​ ಮೂಲಕ ನೀರು ಹಾಯಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬಿಸಿಲಿನ ತಾಪಕ್ಕೆ ಕುಸಿದ ಅಂತರ್ಜಲ
ಹುಲಿಯೂರುದುರ್ಗ: ಕುಣಿಗಲ್​ ತಾಲೂಕಿನಲ್ಲಿ ಬೇಸಿಗೆ ಪ್ರಾರಂಭವಾದ ಬಳಿಕ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವುದು ಅಂತರ್ಜಲಮಟ್ಟ ಕುಸಿತಕ್ಕೆ ಕಾರಣ ಎನ್ನಲಾಗಿದೆ.
ಕಷ್ಟಪಟ್ಟು ಬೆಳೆದ ಅಡಿಕೆ, ತೆಂಗು, ಬಾಳೆ, ರೇಷ್ಮೆ ಹಾಗೂ ಹೂವು, ತರಕಾರಿ ಬೆಳೆಗಳಿಗೆ ನೀರುಣಿಸುವುದು ಈಗ ರೈತರಿಗೆ ಸವಾಲಾಗಿದೆ. ಪ್ರಸ್ತುತ ಅಡಿಕೆ ಬೆಳೆಗೆ ನೀರುಣಿಸುವ ಸಲುವಾಗಿ ರೈತರು ಟ್ಯಾಂಕರ್​ ಮೊರೆ ಹೋಗಿದ್ದು, ಪ್ರತಿ ಟ್ಯಾಂಕರ್​ ನೀರಿಗೆ 1,000ದಿಂದ 1200 ರೂ. ನೀಡಬೇಕಾಗಿದೆ. ಸ್ವಂತ ಟ್ಯಾಂಕರ್​ ಇದ್ದರೆ ನೀರಿಗೆ 200ರಿಂದ 250 ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಕಳೆದ ಒಂದು ತಿಂಗಳಿನಿಂದ ರೈತರ ಪಂಪ್​ ಸೆಟ್​ಗಳಿಗೆ ನೀಡುವ ತ್ರಿಫೇಸ್​ ವಿದ್ಯುತ್​ನಲ್ಲಿ ಕೂಡ ವ್ಯತ್ಯಯ ಉಂಟಾಗಿದ್ದು, ವಿದ್ಯುತ್​ ಕಣ್ಣಮುಚ್ಚಾಲೆಗೆ ಪಂಪು, ಮೋಟಾರ್​ ಸುಟ್ಟುಹೋಗುತ್ತಿವೆ. ಬೇಸಿಗೆ ಪ್ರಾರಂಭವಾದ ಬಳಿಕ ವಿದ್ಯುತ್​ ಬೇಡಿಕೆ ಹೆಚ್ಚಾಗಿದ್ದು, ಪರಿವರ್ತಕದ ಮೇಲೆ ಒತ್ತಡ ಹೆಚ್ಚಿದ ಕಾರಣ ತಾಲೂಕಿನಾದ್ಯಂತ ನಾಲ್ಕು ತಿಂಗಳ ಅವಧಿಯಲ್ಲಿ 300ಕ್ಕೂ ಹೆಚ್ಚು ವಿದ್ಯುತ್​ ಪರಿವರ್ತಕಗಳು ಸುಟ್ಟುಹೊಗಿವೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಕೊಳವೆ ಬಾವಿಯಲ್ಲಿಲ್ಲ ನೀರು: ಇನ್ನು ಬೇಸಿಗೆಯಲ್ಲಿ ರೈತರು ಕೊಳವೆ ಬಾವಿ ಕೊರೆಸುವುದು ಜೂಜಾಟದಲ್ಲಿ ಅದೃಷ್ಟ ಪಣಕ್ಕಿಟ್ಟಂತಾಗಿದೆ. ತಾಲೂಕಿನಾದ್ಯಂತ ಕಳೆದ ಮೂರುವರೆ ತಿಂಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕೊಳವೆಬಾವಿ ಕೊರೆಯಲಾಗಿದ್ದು, ಅದರಲ್ಲಿ ಶೇ.40ರಷ್ಟು ಕೊಳವೆಬಾವಿಗಳಲ್ಲಿ ನೀರು ಬಂದರೆ ಉಳಿದಂತೆ 60ರಷ್ಟು ಕೊಳವೆಬಾವಿಗಳಲ್ಲಿ ನೀರಿನ ಹನಿಯೂ ಲಭ್ಯವಾಗಿಲ್ಲ. ಜಲಾನಯನ ಪ್ರದೇಶಗಳಲ್ಲಿ ಹೊರತುಪಡಿಸಿ ಉಳಿದಂತೆ ಹುತ್ರಿದುರ್ಗ, ಕಸಬಾ, ಕೊತ್ತಗೆರೆ ಹೊಬಳಿಗಳಲ್ಲಿ ಒಂದು ಸಾವಿರದಿಂದ ಒಂದುವರೆ ಸಾವಿರ ಅಡಿಗಳವರೆಗೆ ಕೊಳವೆಬಾವಿ ಕೊರೆಯಲಾಗುತ್ತಿದ್ದರೂ ನೀರು ಇಲ್ಲದಂತಾಗಿದೆ.
ಮಳೆಗಾಗಿ ಪ್ರಾರ್ಥನೆ: ತಾಲೂಕಿನಲ್ಲಿ ಒಟ್ಟು 65 ಸಾವಿರ ಹೆಕ್ಟೇರ್​ ಕೃಷಿ ಭೂಮಿ ಇದ್ದು, ಇದರಲ್ಲಿ 40 ಸಾವಿರ ಹೆಕ್ಟೇರ್​ ಪ್ರದೇಶ ರಾಗಿ ಬೇಳೆ, 12 ಸಾವಿರ ಹೆಕ್ಟೇರ್​ ತೆಂಗು, 3 ಸಾವಿರ ಹೆಕ್ಟೇರ್​ ಅಡಿಕೆ, 3 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಮಾವು ಮತ್ತು ಉಳಿದಂತೆ ಬಾಳೆ, ತರಕಾರಿ ಬೆಳೆಗಳನ್ನು ಬೆಳೆಯಲಾಗಿದೆ. ಆದರೆ ಈ ವರ್ಷದ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಿಂದ ತೋಟಗಾರಿಕೆ ಬೆಳಗಾರರಿಗೆ ಸಮಸ್ಯೆ ಎದುರಾಗಿದೆ. ಸರಿಯಾದ ಸಮಯಕ್ಕೆ ಮಳೆಯಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದ್ದು, ರೈತರು ಆಕಾಶ ನೋಡಿ ಪ್ರಾರ್ಥನೆ ಮಾಡುತ್ತ ದಿನಕಳೆಯುತ್ತಿದ್ದಾರೆ.
ಕುಣಿಗಲ್​ ತಾಲೂಕಿನಲ್ಲಿ ಹೆಚ್ಚು ಒಣಭೂಮಿ ಇದ್ದು, ಮಳೆಯಾಶ್ರಿತ ಕೃಷಿಯನ್ನು ಅವಲಂಭಿಸಿರುವ ಕಾರಣ ತಾಲೂಕಿನಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಯೋಜನೆಗಳ ಅಗತ್ಯವಿದೆ.
- ಆರ್​.ರಂಗನಾಥ್​, ಸಹಾಯಕ ಕೃಷಿ ನಿರ್ದೇಶಕ ಕುಣಿಗಲ್​
ರೈತರು ಕೊಳವೆಬಾವಿ ಕೊರೆಸಿದಾಗ ನೀರು ಬಂದರೆ ಪೂರ್ತಿ ಹಣ ನೀಡುತ್ತಾರೆ. ಒಂದು ವೇಳೆ ನೀರು ಬಾರದಿದ್ದರೆ ಹಣ ನೀಡೊದು ವಿಳಂಬ ಅಥವಾ 15ರಿಂದ 20 ಸಾವಿರ ಹಣ ಹಿಡಿದುಕೊಂಡು ಮಿಕ್ಕ ಹಣ ನೀಡುತ್ತಾರೆ. ಬೇಸಿಗೆ ಪ್ರಾರಂಭವಾದ ಬಳಿಕ ಲಾರಿಗಳಿಗೆ ಕೆಲಸ ಹೆಚ್ಚಿದ್ದರು ಕೊಳವೆಬಾವಿಗಳಲ್ಲಿ ನೀರು ಬಾರದ ಕಾರಣ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ರೈತರ ಪರಿಸ್ಥಿತಿ ನೋಡಿ ನಮಗೂ ಬೇಸರವಾಗಿದೆ.
- ರಮೇಶ್​, ಬೋರ್​ ವೆಲ್​ ಲಾರಿ ಎಂಜೆಂಟ್​ ಮಾವಿನಕಟ್ಟೆಪಾಳ್ಯ ಕುಣಿಗಲ್​
ನಮ್ಮ ತೋಟದಲ್ಲಿ ಮೂರು ಕೊಳವೆಬಾವಿಗಳಲ್ಲಿ ನೀರು ಸ್ಥಗಿತವಾದ ಕಾರಣ ಅಡಿಕೆ ಬೆಳೆ ಉಳಿಸಿಕೊಳ್ಳಲು ಇತ್ತೀಚೆಗೆ 7 ಲಕ್ಷ ರೂ. ಸಾಲ ಮಾಡಿ ಹೊಸದಾಗಿ ಐದು ಕೊಳವೆಬಾವಿಗಳನ್ನು ಕೊರೆಸಿದೆ. ಆದರೆ ಒಂದರಲ್ಲೂ ಸಹ ಹನಿ ನೀರು ಸಿಗಲಿಲ್ಲ. ನೀರಿಲ್ಲದ ಕಾರಣ ಅಡಿಕೆ ಬೆಳೆ ಒಣಗುತ್ತಿದೆ. ತೋಟದತ್ತ ಹೊಗಲು ಬೇಸರವಾಗುತ್ತದೆ. ಮಳೆ ಬಾರದಿದ್ದರೆ ಸಮಸ್ಯೆ ಇನ್ನೂ ಗಂಭೀರವಾಗಲಿದೆ.
- ನಂಜುಂಡಪ್ಪ, ರೈತ ಇಪ್ಪಾಡಿ ಗ್ರಾಮ
ಒಂದು ಸಾವಿರ ಅಡಿಕೆ ಮರಗಳಿಗೆ ನೀರುಣಿಸಲು ಪ್ರತಿನಿತ್ಯ ನಾಲ್ಕು ಟ್ಯಾಂಕರ್​ ನೀರನ್ನು ಡ್ರೀಪ್​ ಮೂಲಕ ಹಾಯಿಸಲಾಗುತ್ತಿದೆ. ಆದರೂ ತೋಟಗಳಿಗೆ ಪರಿಪೂರ್ಣವಾಗಿ ನೀರು ಬಿಡಲು ಸಾಧ್ಯವಾಗಿಲ್ಲ. ಸ್ವಂತ ಟ್ರಾಕ್ಟರ್​ ಇರುವ ಕಾರಣ ಪ್ರತಿನಿತ್ಯ ಎರಡರಿಂದ ಮೂರು ಸಾವಿರ ಖರ್ಚು ಮಾಡಿ ತೊಟಗಳಿಗೆ ನೀರುಣಿಸುವ ಕೆಲಸ ಮಾಡುತ್ತಿದ್ದೇನೆ.
-ದೇವರಾಜು, ರೈತ ತೆರೆದಕುಪ್ಪೆ ಗ್ರಾಮ
ಹುಲಿಯೂರುದುರ್ಗ ಪೋಲ್ಡರ್​)))
*ಕುಣಿಗಲ್​ ತಾಲೂಕಿನ ತೆರದಕುಪ್ಪೆ ಗ್ರಾಮದ ರೈತ ದೇವರಾಜು ಅಡಿಕೆ ತೊಟಕ್ಕೆ ಟ್ಯಾಂಕರ್​ ಮೂಲಕ ನೀರು ಹಾಯಿಸುತ್ತಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net