ಗಡಿಮಕ್ಕಳಿಗೆ ಸರ್ಕಾರಿ ಶಾಲೆಯೇ ಅಚ್ಚುಮೆಚ್ಚು

 ಯಲ್ಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಯಲ್ಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
Published on
ಮಧುಗಿರಿ: ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಸರ್ಕಾರಿ ಶಾಲೆಯತ್ತ ಮಕ್ಕಳನ್ನು ಸೆಳೆಯುವುದು ಸವಾಲಿನ ಕೆಲಸ. ಆದರೆ, ಶಿಕ್ಷಕರ ಬದ್ಧತೆ, ಹಳೇ ವಿದ್ಯಾರ್ಥಿಗಳ ಕಾಳಜಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಸರ್ಕಾರಿ ಶಾಲೆಯನ್ನೂ ಆಕರ್ಷಣೆಯ ಕೇಂದ್ರವನ್ನಾಗಿ ರೂಪಿಸಬಹುದು ಎಂಬುದಕ್ಕೆ ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಗಡಿಭಾಗದ ಯಲ್ಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾದರಿಯಾಗಿದೆ.
ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಸೇರಿ 1ರಿಂದ 7ನೇ ತರಗತಿವರೆಗೆ ಒಟ್ಟು 112 ವಿದ್ಯಾರ್ಥಿಗಳು ವ್ಯಾಸಂಗ ವಾಡುತ್ತಿದ್ದಾರೆ. ಶೈಕ್ಷಣಿಕ ಗುಣಮಟ್ಟ, ಸೌಂದರೀಕರಣ, ಮಕ್ಕಳ ಕಲಿಕಾ ವಾತಾವರಣ ಹಾಗೂ ನವೀನ ಚಟುವಟಿಕೆಗಳಿಗೆ ಆದ್ಯತೆ ನೀಡಿರುವ ಪರಿಣಾಮ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳನ್ನೂ ಶಾಲೆ ಆಕರ್ಷಿಸುತ್ತಿದೆ.
ಆಕರ್ಷಕ ಕಲಿಕಾ ವಾತಾವರಣ
ಮುಖ್ಯಶಿಕ್ಷಕಿ ಎಚ್.ಎನ್.ದೇವರಾಜಮ್ಮ ನೇತೃತ್ವದಲ್ಲಿ ಶಿಕ್ಷಕರು, ದಾನಿಗಳು, ಹಳೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥ ಸೇರಿ ಶಾಲೆಯ ಚಿತ್ರಣವನ್ನೇ ಬದಲಿಸಲಾಗಿದೆ. ತರಗತಿ ಸಾಕ್ಷರತೆ ಮತ್ತು ಕಲಿಕಾ ಚಿತ್ರಸೃಷ್ಟಿಗಾಗಿ 1.20 ಲಕ್ಷ ರೂ. ಅನುದಾನ ಬಳಸಿಕೊಂಡು ತರಗತಿ ಕೊಠಡಿಗಳಲ್ಲಿ ಆಕರ್ಷಕ ಚಿತ್ರಗಳು, ಅಕ್ಷರಸಂಖ್ಯಾ ವಾದರಿಗಳು, ವಿಷಯಾಧಾರಿತ ಚಾರ್ಟ್‌ಗಳು ಹಾಗೂ ದೃಶ್ಯ ಕಲಿಕಾ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಮುಖ್ಯಶಿಕ್ಷಕರ ಕೊಠಡಿಯನ್ನು ಶಿಸ್ತು, ಸ್ವಚ್ಛತೆ ಮತ್ತು ಸೌಂದರ್ಯದ ವಾದರಿಯಾಗಿ ರೂಪಿಸಲಾಗಿದ್ದು, ವ್ಯವಸ್ಥಿತ ದಾಖಲೆ ನಿರ್ವಹಣೆ, ಪ್ರೇರಣಾದಾಯಕ ಚಿತ್ರಗಳು ಹಾಗೂ ಶೈಕ್ಷಣಿಕ ವಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ಇದಕ್ಕೆ ತಾಲೂಕಿನ ಅತ್ಯುತ್ತಮ ಮುಖ್ಯಶಿಕ್ಷಕರ ಕೊಠಡಿ ಎಂಬ ಮೆಚ್ಚುಗೆಯೂ ದೊರೆತಿದೆ.
ಕೈತೋಟದಲ್ಲಿ ಕೃಷಿ ಪಾಠ
ಪಠ್ಯಪುಸ್ತಕದ ಜತೆಗೆ ಮಕ್ಕಳಿಗೆ ಕೃಷಿ ಹಾಗೂ ಪರಿಸರದ ಮಹತ್ವ ತಿಳಿಸುವ ಉದ್ದೇಶದಿಂದ ಶಾಲಾ ಆವರಣದಲ್ಲಿ ಕೈತೋಟ ನಿರ್ಮಿಸಲಾಗಿದೆ. ಶಿಕ್ಷಕರ ವಾರ್ಗದರ್ಶನದಲ್ಲಿ ಮಕ್ಕಳು ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದು, ಕೃಷಿ, ಪರಿಸರ ಕಾಳಜಿ ಹಾಗೂ ಶ್ರಮದ ಮಹತ್ವವನ್ನು ಪ್ರಾಯೋಗಿಕವಾಗಿ ಕಲಿಯುತ್ತಿದ್ದಾರೆ.
ಕಂಪ್ಯೂಟರ್, ಇಂಗ್ಲಿಷ್ ಕಲಿಕೆಗೆ ಒತ್ತು:
ಗ್ರಾಮೀಣ ಮಕ್ಕಳಿಗೂ ಆಧುನಿಕ ಶಿಕ್ಷಣದ ಅನುಭವ ದೊರೆಯುವಂತೆ ಕಂಪ್ಯೂಟರ್ ಹಾಗೂ ಇಂಗ್ಲಿಷ್ ಕಲಿಕೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಇಂಗ್ಲಿಷ್ ಓದು, ಬರವಣಿಗೆ ಮತ್ತು ವಾತನಾಡುವ ಕೌಶಲ ಬೆಳೆಸಲು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗ್ರಂಥಾಲಯ, ಡೆಸ್ಕ್, ಕುರ್ಚಿ, ನಲಿಕಲಿ ಟೇಬಲ್, ಪ್ಲೇಕಾರ್ಡ್‌ಗಳು, ಯುಪಿಎಸ್ ಸೇರಿ ವಿವಿಧ ಕಲಿಕಾ ಸಾಮಗ್ರಿಗಳಿವೆ. ದಾನಿಗಳ ಸಹಕಾರದಿಂದ ಟಿವಿ ಮೂಲಕ ದೃಶ್ಯಾಧಾರಿತ ಕಲಿಕೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಸ್ವೆಟರ್ ಹಾಗೂ ಸ್ಕೂಲ್ ಬ್ಯಾಗ್ ವಿತರಣೆ ಸೇರಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಕ್ಕಳ ಅನುಕೂಲಕ್ಕಾಗಿ ಮುಖ್ಯಶಿಕ್ಷಕಿ ವೈಯಕ್ತಿಕವಾಗಿಯೂ ಹಣ ವಿನಿಯೋಗಿಸಿದ್ದಾರೆ. ಶಾಲಾ ಆವರಣದ ಗೋಡೆಗಳ ಚಿತ್ತಾರ, ಶೀಟ್ ಅಳವಡಿಕೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕಲಿಕಾ ವಾತಾವರಣಕ್ಕೆ ಮತ್ತಷ್ಟು ಮೆರುಗು ತಂದಿವೆ.
ಪ್ರತಿಭೆ ಅನಾವರಣಕ್ಕೆ ವೇದಿಕೆ
ಕಲಿಕಾ ಹಬ್ಬ, ಪ್ರತಿಭಾ ಕಾರಂಜಿ, ಶಾಲಾ ಉದ್ಘಾಟನಾ ಕಾರ್ಯಕ್ರಮ, ಕಲಿಕಾ ಚೇತರಿಕೆ ಸೇರಿ ವಿವಿಧ ಕಾರ್ಯಕ್ರಮಗಳ ಮೂಲಕ ಮಕ್ಕಳ ಕಲಿಕಾ ಸಾಮರ್ಥ್ಯ, ಸಾಂಸ್ಕೃತಿಕ ಪ್ರತಿಭೆ, ನಾಯಕತ್ವ ಗುಣ ಹಾಗೂ ಆತ್ಮವಿಶ್ವಾಸ ಬೆಳೆಸಲಾಗುತ್ತಿದೆ. ಶಾಲಾ ಆವರಣದಲ್ಲಿ ಆಕರ್ಷಕ ಸೆಲ್ಫಿ ಜೋನ್ ನಿರ್ಮಿಸುವ ಮೂಲಕ ಮಕ್ಕಳಲ್ಲಿ ಶಾಲೆಯ ಬಗ್ಗೆ ಅಭಿವಾನ ಮತ್ತು ಸಂತಸ ಮೂಡಿಸಲಾಗಿದೆ. ಶಿಕ್ಷಕರು ಹಾಗೂ ದಾನಿಗಳ ಸಹಭಾಗಿತ್ವ, ನವೀನ ಚಟುವಟಿಕೆಗಳು ಮತ್ತು ಮಕ್ಕಳ ಸಾಧನೆಯಿಂದ ಶಾಲೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಕ್ಲಸ್ಟರ್ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿಯೂ ವಿದ್ಯಾರ್ಥಿಗಳು ಉತ್ತಮ ಸಾಧನೆ ವಾಡಿದ್ದಾರೆ. ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಕಲಿಕೆಗೆ ನೀಡಿದ ಕೊಡುಗೆ ಗುರುತಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ 2026ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿಪ್ರಶಸ್ತಿಯನ್ನು ಮುಖ್ಯಶಿಕ್ಷಕಿ ಎಚ್.ಎನ್.ದೇವರಾಜಮ್ಮ ಅವರಿಗೆ ನೀಡಿ ಗೌರವಿಸಿದೆ.
"

ಮಕ್ಕಳು ದೇವರ ಸವಾನ. ಎಲ್ಲ ಮಕ್ಕಳಲ್ಲೂ ಒಂದೇ ರೀತಿಯ ಬುದ್ಧಿಶಕ್ತಿ ಇದ್ದು, ಅದನ್ನು ಹೊರಹೊಮ್ಮಿಸುವ ಕೆಲಸ ವಾಡಿದಾಗ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ಗ್ರಾಮೀಣ ಮಕ್ಕಳ ಕಲಿಕೆಗೆ ಶಾಲೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಕ್ಕಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ದಾನಿಗಳು, ಗ್ರಾಮಸ್ಥರು ಹಾಗೂ ಶಿಕ್ಷಕರ ನೆರವಿನಿಂದ ಶಾಲೆಯ ಅಭಿವೃದ್ಧಿಗೆ ಪಣ ತೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net