ದಾಖಲಾತಿ ಆಂದೋಲನ

ಬಿ.ವಿ.ಅಶ್ವಿಜ
ಬಿ.ವಿ.ಅಶ್ವಿಜ
Published on

ಪ್ರಮುಖ ಮುಖ್ಯಾಂಶಗಳು

  • ಶೈಕ್ಷಣಿಕ ವರ್ಷಾರಂಭ ಪೂರ್ವಭಾವಿ ಸಭೆ
  • ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ
  • ವಾರಕ್ಕೊಮ್ಮೆ ಟೆಸ್ಟ್​ ಕಡ್ಡಾಯ
ತುಮಕೂರು : ಶೈಕ್ಷಣಿಕ ವರ್ಷಾರಂಭದಲ್ಲೇ ದಾಖಲಾತಿ ಆಂದೋಲನಾ ಹಮ್ಮಿಕೊಳ್ಳುವಂತೆ ಜಿಪಂ ಸಿಇಒ ಬಿ.ವಿ.ಅಶ್ವಿಜ ಹೇಳಿದರು.
ನಗರದ ಬಾಲಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ 2026-27ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಪ್ರಾರಂಭ ಮಾಡುವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಅತ್ಯಂತ ಸಡಗರದಿಂದ ಪ್ರಾರಂಭಿಸಬೇಕು. ಯಾವೊಂದು ಮಗುವೂ ಶಿಕ್ಷಣದಿಂದ ವಂಚಿತವಾಗದಂತೆ ವರ್ಷಾರಂಭದಲ್ಲೇ ದಾಖಲಾತಿ ಆಂದೋಲನ ಹಮ್ಮಿಕೊಳ್ಳುವಂತೆ ಸೂಚನೆ ನೀಡಿದರು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವುದಕ್ಕಾಗಿ ಎಲ್ಲ ಮುಖ್ಯ ಶಿಕ್ಷಕರನ್ನು ಹಾಗೂ ಅಧಿಕಾರಿಗಳು ಅಭಿನಂದನಾರ್ಹರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ 8ನೇ ತರಗತಿಯಿಂದಲೇ ವಿಶೇಷ ಆದ್ಯತೆ ನೀಡಿ ಬೋಧನೆ ಮಾಡಬೇಕು. ವರ್ಷದ ಎರಡು ಅವಧಿಗೆ ಪ್ರತ್ಯೇಕವಾದ ಶೈಕ್ಷಣಿಕ ಪಾಠ ಬೋಧನಾ ಯೋಜನೆಯನ್ನು ರೂಪಿಸಿಕೊಳ್ಳಬೇಕು. ಅದರ ಪ್ರಕಾರ ಮೊದಲ ಐದು ದಿನ ಪಾಠ ಬೋಧನೆ ನಡೆಸಿ ಪ್ರತಿ ಶನಿವಾರ ಪುನರಾವರ್ತನೆ ನಡೆಸುವಂತೆ ಸಲಹೆ ನೀಡಿದರು.
ವಾರಕ್ಕೊಮ್ಮೆ ಟೆಸ್ಟ್​ : ಪ್ರತಿ ಸೋಮವಾರ ಪ್ರತಿ ವಿಷಯದಲ್ಲಿ ಎಂಸಿಕ್ಯೂ ಒಳಗೊಂಡ ಕಿರುಪರೀಕ್ಷೆಯೊಂದನ್ನು ಕಡ್ಡಾಯವಾಗಿ ನಡೆಸಬೇಕು. ತಿಂಗಳಿಗೆ ಒಂದು ಕಿರುಪರೀಕ್ಷೆಯನ್ನು ನಡೆಸಬೇಕು. ಇದರ ಜತೆಗೆ ಅನುಭವಾತ್ಮಕ ಕಲಿಕೆಗೆ ಒತ್ತು ಕೊಟ್ಟು ಮಕ್ಕಳಿಗೆ ಕ್ಷೇತ್ರ ಭೇಟಿ ಮಾಡಿಸಬೇಕು. ಶಾಲಾ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶೌಚಾಗೃಹ ನಿರ್ವಹಣೆಗೆ ಸ್ಥಳಿಯ ಸರ್ಕಾರದ ಹಾಗೂ ಎಸ್​ಡಿಎಂಸಿ ಸಹಕಾರ ಪಡೆದುಕೊಂಡು ಉತ್ತಮವಾಗಿ ನಿರ್ವಹಿಸಲು ಬಿ.ವಿ.ಅಶ್ವಿಜ ತಿಳಿಸಿದರು.
ಡಿಡಿಪಿಐ ರಘುಚಂದ್ರ, ಬಿಇಒ ಹನುಮಂತಪ್ಪ, ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ನಂತರ ತುಮಕೂರು ಡಯಟ್​ಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿದ್ದ ಉರ್ದು ಶಿಕ್ಷಕರ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net